More

    ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್​ ಅಳವಡಿಸಲು ಸೂಚನೆ; ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ

    ಬೆಂಗಳೂರು: ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್​ಮೆಂಟ್​, ಐಷಾರಾಮಿ ಹೋಟೆಲ್​, ರೆಸ್ಟೋರೆಂಟ್​ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್​(ವಾಟರ್​ ಟ್ಯಾಪ್​ ಮಾಸ್ಕ್​) ಅಳವಡಿಸಬೇಕು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಸೂಚನೆ ನೀಡಿದ್ದಾರೆ.

    ಜಲಮಂಡಳಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಬೆಂಗಳೂರು ನಗರ ಪ್ಲಂಬರ್​ ಅಸೋಸಿಯೇಷನ್​ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡಿದರು.

    ಏರಿಯೇಟರ್​ಗಳು ಕಡಿಮೆ ದರದಲ್ಲಿ ಲಭ್ಯವಿದ್ದು, ನೀರಿನ ಬಿಲ್​ನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಏರಿಯೇಟರ್​ ಅಳವಡಿಸದ ನಲ್ಲಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಈ ಸಾಧನ ಅಳವಡಿಸುವುದರಿಂದ ಶೇ.60 ರಿಂದ 85 ರಷ್ಟು ನೀರಿನ ಉಳಿತಾಯ ಸಾಧ್ಯ ಎಂದರು.

    ಮಾ.31ರ ವರೆಗೆ ಗಡುವು

    ಮಾ.21 ರಿಂದ ಮಾ.31ರ ವರೆಗೆ ಸ್ವಯಂ ಪ್ರೇರಿತವಾಗಿ ನಲ್ಲಿಗಳಿಗೆ ಏರಿಯೇಟರ್​ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 10 ದಿನಗಳಲ್ಲಿ ತಮಗೆ ಸಿಗುವ ಏರಿಯೇಟರ್​ ಗಳನ್ನು ನಲ್ಲಿಗಳಿಗೆ ಅಳವಡಿಸಿಕೊಳ್ಳಬೇಕು. ಗಡುವಿನ ಅವಧಿಯಲ್ಲಿ ಏರಿಯೇಟರ್​ ಅಳವಡಿಸಿಕೊಳ್ಳದಿರುವ ಕಟ್ಟಡಗಳಲ್ಲಿ ಜಲಮಂಡಳಿಯ ಪ್ಲಂಬರ್​ಗಳಿಂದ ಏರಿಯೇಟರ್​ಗಳನ್ನು ಅಳವಡಿಸಲಾಗುತ್ತದೆ. ಈ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಸ್ವಯಂ ಪ್ರೇರಿತರಾಗಿ ಅಳವಡಿಸಿ

    ಮನೆಯಲ್ಲಿರುವ ನಲ್ಲಿ, ಶವರ್​ ಸೇರಿದಂತೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವ ಕಡೆಗಳಲ್ಲಿ ಏರಿಯೇಟರ್​ಗಳನ್ನು ಅಳವಡಿಸಿಕೊಳ್ಳಬೇಕು. ಈ ಉಪಕರಣ ಮಾರುಕಟ್ಟೆಯಲ್ಲಿ 60 ರೂ.ನಿಂದ ಲಭ್ಯವಿದೆ. ಇದರಿಂದ ಮನೆಯಲ್ಲಿ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗೆಯೇ, ನೀರಿನ ಬಿಲ್​ ಕೂಡಾ ಕಡಿಮೆಯಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

    ಜಲಮಂಡಳಿಯ ಕೇಂದ್ರ ಕಛೇರಿಯಲ್ಲಿರುವ ನಲ್ಲಿಗಳಿಗೆ ಈಗಾಗಲೇ ಏರಿಯೇಟರ್​ ಅಳವಡಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಜಲಮಂಡಳಿಯ ಇತರೆ ಕಚೇರಿಗಳಲ್ಲಿ ಕಡ್ಡಾಯವಾಗಿ ಸಾಧನ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಮಾರ್ಚ್​ 21 ರಿಂದ ಎಲ್ಲರಿಗೂ ಈ ಸೂಚನೆ ಅನ್ವಯವಾಗಲಿದೆ.
    -ಡಾ.ವಿ.ರಾಮ್​ ಪ್ರಸಾತ್​ ಮನೋಹರ್​, ಅಧ್ಯಕ್ಷ, ಜಲಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts