More

    ಸಹಜ ಸ್ಥಿತಿ, ವ್ಯವಹಾರ ಹೆಚ್ಚಳ

    ಭರತ್ ಶೆಟ್ಟಿಗಾರ್, ಮಂಗಳೂರು

    ಕರೊನಾ ಲಾಕ್‌ಡೌನ್ ಪೂರ್ಣ ತೆರವಾದ ನಂತರದ ದಿನಗಳಲ್ಲಿ ನಿಧಾನವಾಗಿ ಎಲ್ಲ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಪ್ರಸ್ತುತ ಸಹಜತೆಯತ್ತ ಬರುತ್ತಿದೆ. ಶೈಕ್ಷಣಿಕ ಕ್ಷೇತ್ರ ಸಂಪೂರ್ಣವಾಗಿ ತೆರೆದುಕೊಂಡ ಬಳಿಕವಂತೂ ಚೇತರಿಕೆಗೆ ಮತ್ತಷ್ಟು ವೇಗ ದೊರೆತಿದೆ.

    ಮುಖ್ಯವಾಗಿ ಹೋಟೆಲ್-ರೆಸ್ಟೋರೆಂಟ್, ಅಂಗಡಿ-ಮಳಿಗೆಗಳು, ಬಸ್-ಆಟೋ ಸೇರಿದಂತೆ ವಿದ್ಯಾರ್ಥಿಗಳಿಗೆ ಸಂಬಂಧಿಸಿರುವ ಪ್ರತಿಯೊಂದು ವಿಭಾಗದಲ್ಲೂ ವ್ಯಾಪಾರ ವಹಿವಾಟು ಚುರುಕು ಪಡೆಯುತ್ತಿದೆ. ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣ ಪದವಿ ತರಗತಿಗಳು ಹಿಂದಿನಂತೆ ಆರಂಭವಾಗಿದ್ದು, ವಿದ್ಯಾರ್ಥಿಗಳು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಲು ಅಂಗಡಿ -ಮಳಿಗೆಗಳಿಗೆ ಭೇಟಿ ನೀಡುತ್ತಿರುವುದರಿಂದ ವ್ಯಾಪಾರವೂ ವೃದ್ಧಿಯಾಗುತ್ತಿವೆ.

    ಭೌತಿಕ ತರಗತಿಗಳು ಆರಂಭವಾಗುತ್ತಿದ್ದಂತೆ, ವಿದ್ಯಾರ್ಥಿಗಳ ಸಮವಸ್ತ್ರ ಮಾರಾಟ ಮಳಿಗೆಗಳಲ್ಲಿ ಭರ್ಜರಿ ವ್ಯವಹಾರ ನಡೆದಿದೆ. ವೇಳೆ ಟೈಲರಿಂಗ್ ಕ್ಷೇತ್ರದ ಚೇತರಿಕೆಗೂ ಇದು ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಪುಸ್ತಕ, ಶೂ, ಬ್ಯಾಗ್ ಮೊದಲಾದವುಗಳ ಮಾರಾಟ ಮಳಿಗೆಗಳೂ ಸಾಕಷ್ಟು ವ್ಯವಹಾರ ನಡೆಸುತ್ತಿವೆ. ಮುಖ್ಯವಾಗಿ ಶಾಲಾ ಕಾಲೇಜುಗಳ ಪಕ್ಕದಲ್ಲಿರುವ ಅಂಗಡಿ, ಹೋಟೆಲ್‌ಗಳು, ಫ್ಯಾನ್ಸಿ, ಸ್ಟೇಷನರಿ ಅಂಗಡಿಗಳು ಇಲ್ಲಿಯವರೆಗೆ ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿತ್ತು. ಕಾಲೇಜು ಪೂರ್ಣ ಪ್ರಮಾಣದಲ್ಲಿ ತೆರೆಯುತ್ತಿದಂತೆ ವ್ಯಾಪಾರ ಕುದುರಿದೆ. ಹೋಟೆಲ್-ರೆಸ್ಟೋರೆಂಟ್‌ಗಳಂತೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿವಿಧ ರೀತಿಯ ಆಫರ್‌ಗಳನ್ನು ಘೋಷಿಸುತ್ತಿವೆ. ಐಸ್‌ಕ್ರೀಂ ಪಾರ್ಲರ್, ಜೂಸ್ ಅಂಗಡಿಗಳು, ಚಾಟ್‌ಸ್ಟಾಲ್, ಕೇಕ್ ಐಟಂ ತಯಾರಿ ಮಳಿಗೆಗಳೂ ಮತ್ತೆ ಹಿಂದಿನ ಲಯದತ್ತ ಸಾಗುತ್ತಿವೆ.

    ಮುನ್ನುಡಿ ಬರೆದ ದಸರಾ: ಮಂಗಳೂರಿನಲ್ಲಿ ದಸರಾ ಸಂದರ್ಭ ವ್ಯಾಪಾರ, ವಹಿವಾಟುಗಳು ಹಿಂದಿನ ಲಯಕ್ಕೆ ತಲುಪಿತ್ತು. ರಜೆ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಪ್ರವಾಸಿಗರೂ ಕರಾವಳಿಗೆ ಆಗಮಿಸಿದ್ದರು. ಇದರಿಂದ ಬಹುತೇಕ ಹೋಟೆಲ್, ಲಾಡ್ಜ್‌ಗಳು ಭರ್ತಿಯಾಗಿದ್ದವು. ಶಾಪಿಂಗ್ ಮಾಲ್‌ಗಳು, ವಸ್ತ್ರ ಮಳಿಗೆ, ಚಿನ್ನದ ಅಂಗಡಿಗಳು, ಇಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಮಳಿಗೆ, ಮಾರುಕಟ್ಟೆ ಎಲ್ಲವೂ ಗ್ರಾಹಕರಿಂದ ತುಂಬಿ ಹೋಗಿತ್ತು. ಪ್ರಸ್ತುತ ವಾರಾಂತ್ಯದ ದಿನಗಳಲ್ಲಿ ವಹಿವಾಟು ಹೆಚ್ಚಳವಾಗುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎನ್ನುತ್ತಾರೆ ನಗರದ ಕೆ.ಎಸ್.ರಾವ್ ರಸ್ತೆಯ ಲಾಡ್ಜ್ ಒಂದರ ಮ್ಯಾನೇಜರ್.

    ಇದೇ ಸ್ಥಿತಿ ಮುಂದುವರಿಯಲಿ: ಲಾಕ್‌ಡೌನ್ ಬಳಿಕ ಶೂನ್ಯಕ್ಕೆ ಇಳಿದಿದ್ದ ಕೆಲವು ವ್ಯಾಪಾರ ಕ್ಷೇತ್ರಗಳು ಆ ಬಳಿಕ ಶೇ.25ರಷ್ಟು ವೃದ್ಧಿಸಿಕೊಂಡಿತ್ತು. ಬಸ್, ಆಟೋಗಳ ಸಂಚಾರ ಆರಂಭವಾಗುತ್ತಿದ್ದಂತೆ ಶೇ.50ಕ್ಕೆ ತಲುಪಿದೆ. ಸದ್ಯ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿರುವುದರಿಂದ ಇದು ಶೇ.80ರಷ್ಟು ತಲುಪಿದೆ. ಇದೇ ಸ್ಥಿತಿಯಲ್ಲಿ ಮುಂದುವರಿಯಲಿ. ಮತ್ತೆ ಲಾಕ್‌ಡೌನ್ ಏನಾದರೂ ಬಂದಲ್ಲಿ, ಬಾಗಿಲು ಮುಚ್ಚಿ ಬೇರೆ ಏನಾದರೂ ಕೆಲಸ ಮಾಡಬೇಕಾದ ಪರಿಸ್ಥಿತಿ ಬರಬಹುದು ಎನ್ನುವುದು ವ್ಯಾಪಾರೋದ್ಯಮಿಗಳ ಮಾತು.

    ಇನ್ನು ಕೋವಿಡ್‌ನ ಯಾವುದೇ ಅಲೆ ಬರದಿದ್ದರೆ ಕೆಲವೇ ತಿಂಗಳಲ್ಲಿ ವ್ಯಾಪಾರ ವಹಿವಾಟು ಕೋವಿಡ್ ಪೂರ್ವ ಸ್ಥಿತಿ ತಲುಪಲಿದೆ. ಪೂರ್ಣ ಪ್ರಮಾಣದಲ್ಲಿ ಶಾಲೆ, ಕಾಲೇಜು ಆರಂಭವಾಗಿರುವುದು ಪ್ಲಸ್ ಪಾಯಿಂಟ್. ಸಣ್ಣ, ದೊಡ್ಡ ಎಲ್ಲ ವ್ಯಾಪಾರಿಗಳಿಗೂ ಇದರಿಂದ ಹೆಚ್ಚು ಅನುಕೂಲವಾಗಿದೆ.

    ರಾಜೇಶ್ ನಾಯಕ್
    ಫ್ಯಾನ್ಸಿ ಸ್ಟೋರ್ ಮಾಲೀಕ, ಬಲ್ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts