More

    31ಕ್ಕೆ ಡಿಜೆ ಡ್ಯಾನ್ಸ್, ವಿಶೇಷ ಪಾರ್ಟಿ ನಿಷೇಧ

    ಶಿವಮೊಗ್ಗ: ಕರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ವರ್ಷಾಚರಣೆ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕ್ಲಬ್, ಪಬ್, ರೆಸ್ಟೋರೆಂಟ್​ಗಳಲ್ಲಿ ಡಿಜೆ ಡ್ಯಾನ್ಸ್, ವಿಶೇಷ ಪಾರ್ಟಿ ಆಯೋಜಿಸುವುದನ್ನು ನಿಷೇಧಿಸಲಾಗಿದೆ ಎಂದು ಡಿಸಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

    ಪ್ರತಿನಿತ್ಯದ ವ್ಯವಹಾರ ನಡೆಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಪರಸ್ಪರ ಅಂತರ ಕಾಪಾಡುವ ದೃಷ್ಟಿಯಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಬ್, ಕ್ಲಬ್ ಮತ್ತು ವಿಶೇಷ ಪಾರ್ಟಿ ಆಯೋಜನೆ ನಿರ್ಬಂಧಿಸಿದ್ದು ಜ.2ರವರೆಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

    ಸಾರ್ವಜನಿಕ ಸ್ಥಳ, ಮುಖ್ಯ ರಸ್ತೆಗಳಲ್ಲಿ ಪರಸ್ಪರ ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದುಗೂಡುವಂತಿಲ್ಲ. ಮುಖ್ಯವಾಗಿ 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಹೊಟೇಲ್, ಮಾಲ್ ಮುಂತಾದ ಕಡೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಪರಸ್ಪರ ಅಂತರ ಖಾತ್ರಿಪಡಿಸಲು ಅಗತ್ಯವಿದ್ದರೆ ಜನರನ್ನು ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್​ಲೈನ್ ಮೂಲಕ ಸ್ಥಳ ಕಾಯ್ದಿರಿಸಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.

    ಪ್ರಾಂಗಣ, ಉಪಾಹಾರ ಗೃಹ, ವ್ಯವಸ್ಥಿತ ಕಟ್ಟಡ ಸಮುಚ್ಚಯಗಳಲ್ಲಿ ಜನರು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts