More

    ಮೂರು ದಿನ ಹಸಿವಿನಿಂದ ಬಳಲಿದ ವೃದ್ಧೆ

    ಮೂರು ದಿನ ಹಸಿವಿನಿಂದ ಬಳಲಿದ ವೃದ್ಧೆ

    ಚಿಕ್ಕಮಗಳೂರು: ಉಡುಪಿಗೆ ಹೊರಟು ಬಸ್ ಇಲ್ಲದೆ ಮೂರು ದಿನಗಳಿಂದ ನಗರದ ಆಟೋ ನಿಲ್ದಾಣದಲ್ಲಿ ಮಗನೊಂದಿಗೆ ಹಸಿವಿನಿಂದ ಬಳಲುತ್ತಿದ್ದ ವೃದ್ಧೆಗೆ ಬ್ರಾಹ್ಮಣ ಮಹಾಸಭಾ ನೆರವಿನ ಹಸ್ತ ಚಾಚಿದೆ.

    ಕಡೂರಿನ ಗೌರಮ್ಮ (80) ಮತ್ತು ಪುತ್ರ ರಾಘವೇಂದ್ರ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಮುಂಭಾಗದ ಬೀದಿ ಬದಿಯಲ್ಲಿ ಮೂರು ದಿನಗಳಿಂದ ವಾಸ್ತವ್ಯ ಹೂಡಿದ್ದರು.

    ಮಗ ಉಡುಪಿಯಲ್ಲಿ ಬಾಣಸಿಗನಾಗಿದ್ದರಿಂದ ಉಡುಪಿಗೆ ಸೇರಿಕೊಳ್ಳಬೇಕಿದ್ದ ಅವರು ಕಡೂರಿನಿಂದ ಶುಕ್ರವಾರ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿ ಟಿಕೆಟ್ ಕೇಳಿದ್ದಾರೆ. ಆದರೆ ವೃದ್ಧರಿಗೆ ಬಸ್​ನಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದರಿಂದ ಅಲ್ಲೇ ಕೆಲ ಹೊತ್ತು ಇದ್ದು ರಾತ್ರಿ ಆಟೋ ನಿಲ್ದಾಣದಲ್ಲಿ ಕಾಲ ಕಳೆದಿದ್ದಾರೆ. ಬೆಳಗ್ಗೆ ಇವರನ್ನು ನೋಡಿದ ಜನ ಆಹಾರ ಮತ್ತು ಹಣದ ಸಹಾಯ ಮಾಡಲು ಮುಂದಾದಾಗ ವೃದ್ಧೆ ನಿರಾಕರಿಸುತ್ತಿದ್ದರು. ಯಾರು ಕೊಟ್ಟರೂ ಏನನ್ನೂ ಮುಟ್ಟಬೇಡ ಎಂದು ಮಗನಿಗೆ ತಾಕೀತು ಮಾಡುತ್ತಿದ್ದರು. ಅನ್ನವಿಲ್ಲದ ಪರಿಸ್ಥಿತಿಯಲ್ಲಿ ಹೀಗೆ ಎರಡು ದಿನ ಕಳೆದರು.

    ಭಾನುವಾರ ಬೆಳಗ್ಗೆ ಬಸ್ ನಿಲ್ದಾಣ ಎದುರಿನ ಹೋಟೆಲ್​ನ ಜಗುಲಿಯಲ್ಲಿ ಇಬ್ಬರೂ ಕುಳಿತಿದ್ದರು. ಅದೇ ಸಮಯಕ್ಕೆ ಸ್ನೇಹಿತರ ಮಾಹಿತಿಯಿಂದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಷಿ ಕಾರಿನಲ್ಲಿ ಆಗಮಿಸಿದರು. ಅನ್ನ ನೀಡಿ ಉಡುಪಿಗೆ ತಲುಪಿಸುವ ಭರವಸೆ ನೀಡಿದರು. ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಬಸವರಾಜು ಸಹಕಾರದಲ್ಲಿ ಕಾರಿನಲ್ಲೇ ಗಂಟುಮೂಟೆ ಸಮೇತ ಹತ್ತಿಸಿಕೊಂಡು ಬಸವನಹಳ್ಳಿ ಶ್ರೀ ರಂಗಣ್ಣನವರ ಛತ್ರಕ್ಕೆ ಕರೆದುಕೊಂಡು ಹೋದರು. ಉಡುಪಿಗೆ ತೆರಳಲು ಪಾಸ್ ಸಮಸ್ಯೆ ಎದುರಾದಾಗ ಎಸ್ಪಿ ಅವರನ್ನು ದೂರವಾಣಿ ಮೂಲಕ ಸಂರ್ಪಸಿ ಸಹಕಾರ ಕೋರಿದಾಗ ಸ್ಪಂದಿಸಿದರು. ಕೂಡಲೆ ಮತ್ತೊಂದು ಕಾರನ್ನು ಕರೆಸಿ ಉಡುಪಿಗೆ ಬಿಟ್ಟು ಬರುವಂತೆ ಚಾಲಕನಿಗೆ ಸೂಚಿಸಿದರು. ದೇವರನಾಮ ಹಾಡುತ್ತ ಉಡುಪಿಗೆ ಪ್ರಯಾಣ ಬೆಳೆಸಿದರು.

    ಬ್ಯಾಗ್ ತುಂಬ ಪ್ರಶಸ್ತಿಗಳು: ಒಂದು ಕಾಲದಲ್ಲಿ ಗೌರಮ್ಮ ಭರತನಾಟ್ಯ ಮತ್ತು ಸಂಗೀತ ಶಿಕ್ಷಕಿಯಾಗಿ ಪ್ರಸಿದ್ಧಿ ಪಡೆದವರು. 1980ರಲ್ಲಿ ಭದ್ರಾವತಿಯಲ್ಲಿ ಬನಶಂಕರಿ ವಿದ್ಯಾಸಂಸ್ಥೆ ತೆರೆದಿದ್ದ ಗೌರಮ್ಮ 5-6 ವರ್ಷಗಳ ನಂತರ ಹಲವು ಕಾರಣಗಳಿಂದ ಶಾಲೆ ಬಿಡಬೇಕಾಯಿತು. ನಂತರ ಭದ್ರಾವತಿಯ ಹಲವು ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂಬುದಕ್ಕೆ ಹಲವು ದಾಖಲೆಗಳು ಅವರ ಬಳಿ ಇವೆ. ಬೆಂಗಳೂರಿನ ಆಕಾಶವಾಣಿಯವರು ಗೌರಮ್ಮ ಅವರ ಸಂದರ್ಶನ ಮಾಡಿದ್ದಾರೆ ಎಂದು ಮಗ ರಾಘವೇಂದ್ರ ತಿಳಿಸಿದ್ದಾರೆ.

    ಭರತನಾಟ್ಯ ಶಿಕ್ಷಕಿ ಗೌರಮ್ಮಗೆ ಬಹಳಷ್ಟು ಪ್ರಶಸ್ತಿ ಹಾಗೂ ಸೇವಾ ಪತ್ರಗಳು ಲಭಿಸಿವೆ. ಅದರ ಇಡೀ ಗಂಟೇ ಅವರ ಬಳಿ ಇದೆ. ಒಂದು ಸೂಟ್​ಕೇಸ್​ನಲ್ಲಿ ಬಟ್ಟೆ, ಮತ್ತೆ ಮೂರು ಬ್ಯಾಗ್ ತುಂಬ ಪ್ರಶಸ್ತಿ ಹಾಗೂ ಪ್ರಶಂಸಾ ಪತ್ರಗಳು, ಪೇಪರ್ ಕಟಿಂಗ್ಸ್​ಗಳು ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts