More

    ನಷ್ಟದ ಹಾದಿಯಲ್ಲಿ ಬಸ್ ಉದ್ಯಮ, ಶೇ.10ರಷ್ಟು ಪರವಾನಗಿ ಸೆರಂಡರ್

    ಪ್ರಕಾಶ್ ಮಂಜೇಶ್ವರ, ಮಂಗಳೂರು

    ಮುಂಜಾನೆ ಏಳು ಗಂಟೆಗೆ ಪ್ರಥಮ ಪಾಳಿಯ ಕೆಲಸಕ್ಕೆ ತಾಲೂಕಿನ ವಿವಿಧ ಊರುಗಳಿಂದ ಆಗಮಿಸುತ್ತಿದ್ದ ಹೆಚ್ಚಿನ ನೌಕರರು ಈಗ ಸಕಾಲಕ್ಕೆ ಕಂಪನಿ ತಲುಪುತ್ತಿಲ್ಲ. ಸಾಯಂಕಾಲ 9.30ಕ್ಕೆ ಕೆಲಸ ಮುಗಿಸಿ ತೆರಳುತ್ತಿದ್ದವರು ಬಳಿಕ ಬಸ್ ಇಲ್ಲ ಎಂಬ ಕಾರಣಕ್ಕೆ ಅರ್ಧ ತಾಸು ಮುಂಚಿತವಾಗಿಯೇ ಮನೆಗೆ ಹೊರಡುತ್ತಿದ್ದಾರೆ.

    ಇದು ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿರುವ ಕಂಪನಿಯೊಂದರ ವ್ಯವಸ್ಥಾಪಕರು ದಿನಂಪ್ರತಿ ನೋಡುವ ಸಮಸ್ಯೆ. ಅನೇಕ ಕಡೆ ಮುಂಜಾನೆ ಮತ್ತು ರಾತ್ರಿ ಬಸ್‌ಗಳಲ್ಲಿ ಓಡಾಡುವವರು ಈ ಸಮಸ್ಯೆ ಎದುರಿಸುತ್ತಿದ್ದಾರೆ.

    ಕರೊನಾ ಪ್ರಥಮ ಲಾಕ್‌ಡೌನ್ ಮೊದಲು ಸಾಮಾನ್ಯವಾಗಿ ಅನೇಕ ಮಾರ್ಗಗಳಲ್ಲಿ ಮುಂಜಾನೆ ಬೆಳಕು ಹರಿಯುವ ಮೊದಲೇ ಐದು ಗಂಟೆಗೆ ಬಸ್ ಸಂಚಾರ ಶುರುವಾಗುತ್ತಿತ್ತು. ರಾತ್ರಿ 10.30ರ ಬಳಿಕವೂ ಬಸ್‌ಗಳು ಓಡಾಡುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ.

    ನಾಗಾಲೋಟದಲ್ಲಿ ಏರುತ್ತಿರುವ ತೈಲ ಬೆಲೆ ಮತ್ತು ನಿರ್ವಹಣಾ ವೆಚ್ಚದಿಂದ ಬಸ್ ಸೇವೆಯಲ್ಲಿ ಹೆಚ್ಚಿನ ಮಾಲೀಕರು ಮತ್ತು ಸಿಬ್ಬಂದಿ ಉದ್ಯಮವನ್ನು ಕೋವಿಡ್ ಪೂರ್ವ ಸ್ಥಿತಿಯಲ್ಲಿದ್ದ ಆಸಕ್ತಿಯನ್ನು ಈಗ ಕಳೆದುಕೊಂಡಿದ್ದಾರೆ. ಮುಡಿಪು ಮಾರ್ಗ ಹೊರತುಪಡಿಸಿ ಇತರ ಎಲ್ಲ ಮಾರ್ಗಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ನಷ್ಟದಲ್ಲಿವೆ. ಧಾರಣಾ ಸಾಮರ್ಥ್ಯ ಇರುವ ಕೆಲವು ಖಾಸಗಿ ಬಸ್ ಮಾಲೀಕರು ನಷ್ಟದಲ್ಲಿಯೂ ಸೀಮಿತ ಪಾಳಿಗಳಲ್ಲಿ ಬಸ್ ಓಡಿಸುತ್ತಿದ್ದಾರೆ. ಕೆಲ ಬಸ್‌ಗಳು ಅರ್ಧಕ್ಕೆ ಟ್ರಿಪ್ ಕಡಿತಗೊಳಿಸುತ್ತಿವೆ. ನಿರ್ವಹಿಸಲು ಸಾಧ್ಯವಾಗದೆ ಶೇ.10ರಷ್ಟು ಬಸ್‌ಗಳ ಪರವಾನಗಿಯನ್ನು ಮಾಲೀಕರು ತಾತ್ಕಾಲಿಕವಾಗಿ ಆರ್‌ಟಿಒಗೆ ಸೆರೆಂಡರ್ ಮಾಡಿದ್ದಾರೆ.

    ಇಂದಿನ ಇಂಧನ ದರದಲ್ಲಿ ಒಂದು ಊರಿಗೆ ಮುಂಜಾನೆ ಮತ್ತು ರಾತ್ರಿ 10.30 ತನಕ ಬಸ್ ಸಂಚಾರ ಆರ್ಥಿಕವಾಗಿ ಸುಲಭವಿಲ್ಲ. ಹಿಂದೆ ಆ ಹೊತ್ತಿನಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಡೀಸೆಲ್ ದರ ಕಡಿಮೆ ಇತ್ತು. ಆದಾಯ ಇರುವ ಮಾರ್ಗಗಳಲ್ಲಿ ಬಸ್ ಚಾಲಕರು ಹಾಗೂ ನಿರ್ವಾಹಕರು ಉತ್ಸಾಹದಿಂದ ಸೇವೆಗೆ ಮುಂದಾಗುತ್ತಾರೆ ಎನ್ನುತ್ತಾರೆ ಓರ್ವ ಹಿರಿಯ ಬಸ್ ಮಾಲೀಕರು.
    ಇನ್ನೊಂದೆಡೆ, ಮಂಗಳೂರಿನ ಸ್ಟೇಟ್‌ಬ್ಯಾಂಕ್ ಮತ್ತು ಕುಂಜತ್ತಬೈಲು ನಡುವೆ ಸಂಚರಿಸುತ್ತಿರುವ ಬಸ್‌ಗಳು ಅನೇಕ ಸಂದರ್ಭ ಕಾವೂರಿನಿಂದಲೇ ವಾಪಸ್ ಹೋಗುತ್ತಿವೆ. ಬಸ್ ನಂಬಿ ಕಾದು ಕುಳಿತರೆ ನಿಗದಿತ ಸಮಯದಲ್ಲಿ ಕೆಲಸದ ಪ್ರದೇಶ ತಲುಪಲು ಸಾಧ್ಯವಿಲ್ಲ. ಕುಂಜತ್ತಬೈಲ್‌ನಿಂದ ಕಾವೂರಿಗೆ ಆಟೋದಲ್ಲಿ ಪ್ರಯಾಣಿಸಿ ಬಸ್ ಹಿಡಿದರೆ ಪ್ರಯಾಣ ದುಬಾರಿಯಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಖಾಸಗಿ ಕಂಪನಿಯ ನೌಕರರೊಬ್ಬರು ತಿಳಿಸಿದ್ದಾರೆ.

    ಉಡುಪಿಯಲ್ಲಿ ಶೇ.20 ಬಸ್ ಸರೆಂಡರ್: ಉಡುಪಿ: ಜಿಲ್ಲೆಯಲ್ಲಿಯೂ ಸಾರಿಗೆ ಉದ್ಯಮ ಸಂಪೂರ್ಣ ನಷ್ಟದ ಹಾದಿಯಲ್ಲಿದ್ದು, ಇನ್ನೂ ಚೇತರಿಕೆ ಕಾಣದ ಪರಿಸ್ಥಿತಿಯಲ್ಲಿದೆ.
    ಶೇ.20 ಬಸ್‌ಗಳು ಆರ್‌ಟಿಒಗೆ ಸರೆಂಡರ್ ಮಾಡಲಾಗಿದೆ. ಪ್ರಯಾಣಿಕರ ಕೊರತೆ, ಡೀಸೆಲ್ ದರ ಏರಿಕೆ ಹೊರೆ ಬಸ್ ಉದ್ಯಮವನ್ನು ಸಂಕಷ್ಟಕ್ಕೆ ತಳ್ಳಿದೆ ಎನ್ನುತ್ತಾರೆ ಬಸ್ ಮಾಲೀಕರು. ಜಿಲ್ಲೆಯಲ್ಲಿ ಖಾಸಗಿ ಸಿಟಿ, ಸರ್ವೀಸ್ ಬಸ್ಸುಗಳು ಜನರ ಓಡಾಟದ ಬಹುಮುಖ್ಯ ಸಾರಿಗೆ ವ್ಯವಸ್ಥೆಯಾಗಿದೆ. ಸಾರ್ವಜನಿಕ ವಲಯದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಖರೀದಿ, ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಪ್ರಕ್ರಿಯೆ ಹೆಚ್ಚುತ್ತಿರುವುದು ಬಸ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೋವಿಡ್ ಲಾಕ್‌ಡೌನ್ ಬಳಿಕ ಬಸ್ ಉದ್ಯಮ ಚೇತರಿಕೆಯಾಗಲು ಸಾಧ್ಯವಾಗಿಲ್ಲ ಎನ್ನುತ್ತಾರೆ ರಾಜ್ಯ ಬಸ್ ಮಾಲೀಕರ ಒಕ್ಕೂಟ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್.

    ಬಸ್‌ಗಳು ಜನರಿಗೆ ಸೇವೆ ಒದಗಿಸಬೇಕು. ಮಾಲೀಕರು, ನೌಕರರು ಉಳಿಯಬೇಕು ಎನ್ನುವ ಪಾಲಿಸಿ ಇಟ್ಟುಕೊಂಡು ಬಂದವರು ಕರಾವಳಿಯ ಬಸ್ ಮಾಲೀಕರು. ಏರುತ್ತಿರುವ ಇಂಧನ ದರ, ನಿರ್ವಹಣಾ ವೆಚ್ಚ ಮತ್ತು ಲಾಕ್‌ಡೌನ್ ಬಳಿಕ ಸ್ವಂತ ವಾಹನ ಬಳಸುವವರ ಸಂಖ್ಯೆಯಲ್ಲಿ ಉಂಟಾಗಿರುವ ಹೆಚ್ಚಳದಿಂದ ಬಸ್ ನಿಭಾಯಿಸುವುದು ಮಾಲೀಕರಿಗೆ ಸವಾಲಾಗಿದೆ. ಜನರ ಬೇಡಿಕೆಗೆ ತಕ್ಕಂತೆ ಬಸ್ ಪೂರೈಸಲು ಮಾಲೀಕರು ಪ್ರಯತ್ನಿಸುತ್ತಲೇ ಇದ್ದಾರೆ.

    ಜಯಶೀಲ ಅಡ್ಯಂತಾಯ ಅಡ್ಯಾರ್
    ಅಧ್ಯಕ್ಷ, ದ.ಕ. ಸಿಟಿ ಬಸ್ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts