More

    ಬಸ್ ನಿಲ್ದಾಣದಲ್ಲಿ ತಳ್ಳಾಟ-ನೂಕಾಟ: ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಲು ಬಂದ ಸಾರಿಗೆ ಅಧಿಕಾರಿಗಳು

    ಮಾಗಡಿ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಲು ನೋಟಿಸ್ ನೀಡದೆ ಮುಂದಾದ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರಿ ನಿಯಂತ್ರಕ ಪುರುಷೋತ್ತಮ್, ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಹಾಗೂ ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟವಾದಾಗ ಜಿಮ್ ಕಾರ್ಮಿಕ ಗಾಯಗೊಂಡಿದ್ದಾನೆ.

    ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, 7 ಮಂದಿ ಭದ್ರತಾ ಸಿಬ್ಬಂದಿಯೊಂದಿಗೆ ಏಕಾಏಕಿ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಲು ಮುಂದಾದಾಗ ಅಂಗಡಿ ಮಾಲೀಕರು ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ಹೊರಹಾಕಿ ದಿಕ್ಕಾರ ಕೂಗಿದರು.

    ಅಂಗಡಿ ಮಳಿಗೆ ಟೆಂಡರ್ ಪಡೆದ ರಾಮಕೃಷ್ಣಪ್ಪ ಅವರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದರು. ಈ ವೇಳೆ ವಿಭಾಗೀಯ ಸಂಚಾರಿ ನಿಯಂತ್ರಕ ಪುರುಷೋತ್ತಮ್ ಅಂಗಡಿ ಮಾಲೀಕರ ಮೇಲೆ ದೌರ್ಜನ್ಯ ಮಾಡಲು ಮುಂದಾದಾಗ ಜಿಮ್ ಮಾಲೀಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿದರು.

    2014ರಲ್ಲಿ ರಾಮಕೃಷ್ಣಪ್ಪ ಎಂಬುವರಿಗೆ ಸಿಂಗಲ್ ಟೆಂಡರ್ ಆಗಿದ್ದು, ಇದರ ಅಧಾರದ ಮೇಲೆ ಪ್ರತಿ ಅಂಗಡಿಗಳಿಂದ 2 ರಿಂದ 4 ಲಕ್ಷ ರೂಪಾಯಿ ಮುಂಗಡ ಪಡೆದು ಅವರಿಗೆ ಮನಬಂದಂತೆ ಬಾಡಿಗೆ ನಿಗದಿಪಡಿಸಿ ಸುಮಾರು 60 ಲಕ್ಷ ರೂಪಾಯಿ ಪ್ರತಿಯೊಬ್ಬರಿಂದ ಮುಂಗಡವಾಗಿ ಪಡೆದು ಮಳಿಗೆಗಳನ್ನು ಹಂಚಿದ್ದಾರೆ. ರಾಮಕೃಷ್ಣಪ್ಪ ಮಳಿಗೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಕೆಎಸ್‌ಆರ್‌ಟಿಸಿ ಸುಪರ್ದಿಗೆ ನೀಡಿದ್ದಾರೆ ಎಂದು ಏಕಾಏಕಿ ಅಂಗಡಿಗಳನ್ನು ಮುಚ್ಚಲು ಬಂದಿದ್ದು, ನಮ್ಮ ಹಣ ನೀಡುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ರಾಮಕೃಷ್ಣಪ್ಪ ಅವರನ್ನು ಕೇಳಿ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬ ಉಡಾೆ ಉತ್ತರ ಹೇಳುತ್ತಾರೆ ಎಂದು ಅಂಗಡಿ ಮಾಲೀಕ ವಿಜಯ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

    ನಮಗೆ ಇನ್ನೂ 5 ವರ್ಷ ಅಗ್ರಿಮೆಂಟ್ ಅವಧಿಯಿದೆ. ನಂತರ ಹರಾಜು ಮಾಡಿಕೊಳ್ಳಿ, ಅಲ್ಲಿಯವರೆಗೂ ತೊಂದರೆ ಕೊಡಬೇಡಿ ಎಂದರೂ ಮನವಿಗೆ ಸ್ಪಂದಿಸಿಲ್ಲ, ಅಂಗಡಿ ಮಾಲೀಕರಿಗೆ ನ್ಯಾಯಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಸರ್ಕಾರದ ಆದೇಶದಂತೆ ಅಂಗವಿಕಲರು, ಎಸ್ಸಿ, ಎಸ್ಟಿ ಸಮುದಾಯದವರಿಗೆ ಮಳಿಗೆಯಲ್ಲಿ ಮೀಸಲಿಡಬೇಕಾಗಿದ್ದು, ಟೆಂಡರ್ ಕರೆಯುವಾಗ ಈ ಮಾನದಂಡ ಅನುಸರಿಸಲಾಗುವುದು, ಅರಸಿಕೆರೆ ಪ್ರಕರಣದಲ್ಲಿ ಹೈಕೋರ್ಟ್ ನಮ್ಮ ಸಂಸ್ಥೆಗೆ ನಿರ್ದೆಶನ ನೀಡಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ತಿಳಿಸಿದರು.

     

    ಟೆಂಡರು ಪಡೆದ ರಾಮಕೃಷ್ಣಯ್ಯಗೆ ಸಹಾಯಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅಂಗಡಿ ಮಾಲೀಕರಿಗೆ 12 ವರ್ಷ ಅಗ್ರಿಮೆಂಟ್ ಹಾಕಿದ್ದು, ಇನ್ನೂ 6 ವರ್ಷಗಳ ಅವಧಿಯಿದ್ದರೂ ಖಾಲಿ ಮಾಡಿಸಲು ಮುಂದಾಗಿರುವುದು ಸರಿಯಲ್ಲ. ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿರುವುದರಿಂದ ಕಾನೂನಿನಲ್ಲಿ ರಕ್ಷಣೆ ಪಡೆಯುತ್ತೇವೆ, ಇದೇ ರೀತಿ ಅಧಿಕಾರಿಗಳು ಕಾನೂನನ್ನು ಕೈಗೆ ತೆಗೆದುಕೊಂಡರೆ ಜನಸಾಮಾನ್ಯರೂ ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪಲ್ಲ.
    ಉಮೇಶ್ ವಕೀಲ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts