More

    ಓಟಿಗಾಗಿ ನೋಟು ವಿರುದ್ಧ ಸಿಡಿದೇಳಿ: ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ

    ಕೋಲಾರ: ಓಟಿಗಾಗಿ ನೋಟು ನೀಡುವ ಸಂಸತಿ ವಿರುದ್ಧ ಮಹಿಳೆಯರು ಸಿಡಿದು ಧ್ವನಿಯೆತ್ತಿದರೆ ಮಾತ್ರ ಸಮಾಜ ಹಾಗೂ ದೇಶ ಉಳಿಯಲು ಸಾಧ್ಯ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.


    ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ನಿಂದ 29 ಮಹಿಳಾ ಹಾಗೂ 1 ಪುರುಷ ಸ್ವ-ಸಹಾಯ ಸಂಘಗಳಿಗೆ 1.50 ಕೋಟಿ ರೂ. ಬಡ್ಡಿರಹಿತ ಸಾಲ ವಿತರಿಸಿ ಮಾತನಾಡಿದರು.


    ಮತ ಮಾರಿಕೊಳ್ಳುವ ಅನಿಷ್ಟ ಪದ್ಧತಿ ಕೊನೆಗೊಳಿಸಲು ಮಹಿಳೆಯರು ಪಣತೊಡಬೇಕು. ಇದರ ವಿರುದ್ಧ ಪ್ರತಿಯೊಬ್ಬರೂ ಧ್ವನಿಯೆತ್ತಿದಾಗ ಉತ್ತಮ ಜನನಾಯಕರು, ಸದೃಢ ಜನಪರ ಸರ್ಕಾರ ಉದಯಿಸಲು ಸಾಧ್ಯವಾಗುತ್ತದೆ. ಮತದಾನದ ಹಕ್ಕನ್ನು ಯಾರಿಗೂ ಅಡವಿಡದಿರಿ. ಮತಕ್ಕೆ ಹಣಕೊಡುವವರು ಮುಂದೆ ಹಣ ದೋಚಲು ಶುರುಮಾಡುತ್ತಾರೆ. ಆಗ ಎಲ್ಲಕ್ಕೂ ನೀವೇ ಲಂಚಕೊಡಬೇಕಾದ ಪರಿಸ್ಥಿತಿ ಬರುತ್ತದೆ ಎಂದರು.


    ಶಾಸಕನಾಗಬೇಕಾದರೆ 15 ರಿಂದ 20ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಅಷ್ಟು ಹಣ ಅವರು ಮತ್ತೆ ನಿಮ್ಮಿಂದಲೇ ಬೇರೆ ಬೇರೆ ರೂಪದಲ್ಲಿ ಲಂಚದ ಮುಖಾಂತರ ವಾಪಸ್​ ಪಡೆಯುತ್ತಾರೆ. ಓಟಿಗಾಗಿ ನಿಮಗೆ ಮುಯ್ಯಿ (ನೋಟು) ಕೊಟ್ಟಿರುತ್ತಾರೆ. ಮತ್ತೆ ನೀವು ಮುಯ್ಯಿ ತೀರಿಸಬೇಕಲ್ಲಾ, ಇಂತಹ ಕೆಟ್ಟ ಸಂಪ್ರದಾಯ ಮುಂದುವರಿಯಬೇಕೇ? ಸಮಾಜ ಇನ್ನಷ್ಟು ಅಧೋಗತಿಗೆ ಹೋಗಲು ನೀವು ಕಾರಣರಾಗುತ್ತೀರಾ? ಖಂಡಿತ ಇಂತಹ ಸಂಸತಿ ಬೇಡ ಎಂದು ಇಂದೇ ಸಂಕಲ್ಪ ಮಾಡಿ, ಇದೊಂದು ಆಂದೋಲನದ ರೀತಿ ರೂಪುಗೊಳಿಸಲು ಸಜ್ಜಾಗಿ. ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಳ್ಳಿ, ಸ್ವಾಭಿಮಾನದಿಂದ ಬದುಕುವುದರಲ್ಲಿರುವ ಸಂತೋಷ ಯಾವುದರಲ್ಲೂ ಇರಲಾರದು ಎಂದರು.


    ಟಿಎಪಿಸಿಎಂಎಸ್​ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್​ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, 8 ವರ್ಷದ ಹಿಂದೆ ಬ್ಯಾಂಕ್​ ದಿವಾಳಿಯಾಗಿತ್ತು. ಆದರೀಗ ಎರಡೂ ಜಿಲ್ಲೆಗಳ 7 ಲಕ್ಷ ಮಹಿಳೆಯರಿಗೆ 800 ಕೋಟಿ ರೂ.ಗೂ ಅಧಿಕ ಸಾಲ ನೀಡುವ ಮೂಲಕ ದೇಶದಲ್ಲೇ ಹೆಚ್ಚು ತಾಯಂದಿರಿಗೆ ಸಾಲ ನೀಡಿದ ಹೆಗ್ಗಳಿಕೆಗೆ ಡಿಸಿಸಿ ಬ್ಯಾಂಕ್​ ಪಾತ್ರವಾಗಿದೆ. ಸ್ತ್ರೀಶಕ್ತಿ ಗುಂಪುಗಳ 300 ಕೋಟಿ ರೂ. ಬ್ಯಾಂಕಿನಲ್ಲಿ ಠೇವಣಿ ಇದೆ. ಪ್ರತಿ ಕುಟುಂಬಕ್ಕೂ ಸಾಲ ತಲುಪಿಸುವ ಸಂಕಲ್ಪ ನಮ್ಮದು ಎಂದರು.
    ಪತ್ರಕರ್ತರ ಸಹಕಾರ ಸಂಘ ಅಧ್ಯಕ್ಷ ಕೆ.ಎಸ್​.ಗಣೇಶ್​ ಮಾತನಾಡಿ, ಭದ್ರತೆ, ಶಿಫಾರಸು ಇಲ್ಲದೆ ಡಿಸಿಸಿ ಬ್ಯಾಂಕ್​ ಸಾಲ ನೀಡುತ್ತಿದೆ. ಈ ಸಾಲ ನಿಮ್ಮ ಕುಟುಂಬಗಳಿಗೆ ಬೆಳಕಾಗಬೇಕು. ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡರ ಸಂಕಲ್ಪವೂ ಇದೇ ಆಗಿದೆ ಎಂದರು. ಬ್ಯಾಂಕ್​ನ ಕೋಲಾರ ಶಾಖೆಯ ಅಮೀನಾ, ಗೋಪಾಲಕೃಷ್ಣ ಇದ್ದರು.

    ಪ್ರತಿ ಮಹಿಳೆಗೆ 2 ಲಕ್ಷ ರೂ.ಸಾಲ ನೀಡುವ ಅಧಿಕಾರವನ್ನು ನಬಾರ್ಡ್​ ನೀಡಿದೆ. ಒಂದು ಸಂಘಕ್ಕೆ 20 ಲಕ್ಷ ರೂ.ಸಾಲ ನೀಡಲು ಸಿದ್ಧರಿದ್ದೇವೆ. ಸಾಲ ಮರುಪಾವತಿಯಲ್ಲಿ ಮೇಲ್ಪಂಕ್ತಿ ಹಾಕಿಕೊಂಡಿರುವ ಮಹಿಳಾ ಸಂಘಗಳಿಗೆ ಈ ಸೌಲಭ್ಯ ನೀಡುತ್ತೇವೆ. ಹೆಣ್ಣುಮಕ್ಕಳ ಕಷ್ಟಕ್ಕೆ ಬ್ಯಾಂಕ್​ ಸ್ಪಂದಿಸಿದೆ. ಮಧ್ಯವರ್ತಿ, ಭ್ರಷ್ಟತೆಗೆ ಅವಕಾಶ ನೀಡದೆ ಸಾಲ ವಿತರಿಸಿರುವ ಆತ್ಮತೃಪ್ತಿ ಆಡಳಿತ ಮಂಡಳಿಗಿದೆ.
    |ಬ್ಯಾಲಹಳ್ಳಿ ಗೋವಿಂದಗೌಡ ಡಿಸಿಸಿ ಬ್ಯಾಂಕ್​ ಅಧ್ಯಕ್ಷ

    ಮಹಿಳೆಯರು ಯಾರ ಬಳಿಯೂ ಹಣಕ್ಕಾಗಿ ಕೈಚಾಚಬಾರದು. ನಿಮ್ಮ ಸ್ವಾವಲಂಬಿ ಬದುಕಿಗೆ ಬ್ಯಾಂಕ್​ ನೀಡುವ ಸಾಲವನ್ನು ಆಧಾರವಾಗಿಸಿಕೊಳ್ಳಿ. ಸ್ವಯಂ ಉದ್ಯೋಗ ಪ್ರಾರಂಭಿಸಿ, ನಿಮ್ಮ ಕುಟುಂಬಗಳ ಪೋಷಣೆ ಜತೆಗೆ ಸಮಾಜಕ್ಕೂ ಮಾದರಿಯಾಗಿ. ಅಗತ್ಯಕ್ಕೆ ತಕ್ಕಂತೆ ಸಾಲದ ಹಣ ಬಳಸಿಕೊಳ್ಳಿ, ಎಟಿಎಂ ಮೂಲಕವೇ ಡ್ರಾ ಮಾಡಿಕೊಳ್ಳಿ, ದುರುಪಯೋಗ ಬೇಡ, ನೀವು ಮತ್ತಷ್ಟು ಮಹಿಳಾ ಸಂಘಗಳಿಗೆ ಪ್ರೇರಣೆಯಾಗಬೇಕು.
    |ಯಲವಾರ ಸೊಣ್ಣೇಗೌಡ ಡಿಸಿಸಿ ಬ್ಯಾಂಕ್​ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts