More

    ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತ

    ಕೊಕಟನೂರ: ಅಥಣಿ ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಥಣಿ ತಾಲೂಕಿನ ಪೂರ್ವ, ಉತ್ತರ ಹಾಗೂ ದಕ್ಷಿಣ ಭಾಗದ ಗ್ರಾಮಗಳ ಮನೆ ಗೋಡೆಗಳು ಕುಸಿದಿವೆ. ಕೆಲವು ಕಡೆಗಳಲ್ಲಿ ಛಾವಣಿ ಕುಸಿದು ಬಿದ್ದಿವೆ.

    ತಾಲೂಕಿನ ದಬಧಬಹಟ್ಟಿ, ಕೊಕಟನೂರ, ಯಲ್ಲಮ್ಮನವಾಡಿ, ಬಾಡಗಿ, ಕೋಹಳ್ಳಿ, ಅಡಹಳ್ಳಿ, ಕಕಮರಿ, ಕಟಗೇರಿ, ನಂದಗಾಂವ, ರಡ್ಡೇರಹಟ್ಟಿ, ಅವರಖೋಡ, ಶಂಕರಹಟ್ಟಿ, ಶೇಗುಣಸಿ, ಹಲ್ಯಾಳ, ಚಮಕೇರಿ, ಬಳ್ಳಿಗೇರಿ, ಅನಂತಪುರ, ಜಂಬಗಿ, ಚಂದ್ರಪ್ಪನವಾಡಿ, ಆಜೂರ, ಖಿಳೇಗಾಂವ ಮದಭಾವಿ, ಮಲಾಬಾದ ಗ್ರಾಮಗಳಲ್ಲಿ ಮನೆ ಗೋಡೆಗಳು ಕುಸಿದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಇನ್ನು ಗ್ರಾಮೀಣ ಪ್ರದೇಶದ ರಸ್ತೆಗಳು ದುರಸ್ತಿ ಕಂಡಿಲ್ಲ. ಹೀಗಾಗಿ ರಸ್ತೆ ಮಧ್ಯೆಯೇ ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನಂತಪುರ, ಕೊಕಟನೂರ, ಬುರ್ಲಟ್ಟಿ, ಕೊಡಗಾನೂರು ಸೇರಿ ಹಲವು ಗ್ರಾಮಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಛಾವಣಿ ಸೋರುತ್ತಿವೆ. ಗ್ರಾಪಂ ನಿರ್ಲಕ್ಷೃದಿಂದ ತಾಲೂಕಿನ ವಿವಿಧ ಗ್ರಾಮದ ತಗ್ಗು ಪ್ರದೇಶದಲ್ಲಿ ಕೊಳಚೆ ಹಾಗೂ ಮಳೆಯ ನೀರು ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಕೂಡಾ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ತಾಲೂಕಾಡಳಿತ ಹಳ್ಳಿಗಳತ್ತ ಗಮನ ಹರಿಸಿ, ಬಿದ್ದಿರುವ ಮನೆಗಳ ಸರ್ವೇ ಕಾರ್ಯ ಕೈಗೊಂಡು ಫಲಾನುಭವಿಗಳಿಗೆ ಸಹಾಯಧನ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ಜತೆಗೆ ರಸ್ತೆ ರಿಪೇರಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೋಡಬೇಕು, ಸಂಗ್ರಹಗೊಂಡಿರುವ ಕೊಳಚೆ ನೀರನ್ನು ವಿಲೇವಾರಿ ಮಾಡಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಮಳೆಯಿಂದ ಮನೆಗಳು ಬಿದ್ದಿರುವ ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರದಿಂದ ಗ್ರಾಪಂ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಂದ ಜಂಟಿ ಸರ್ವೇ ಮಾಡಿಸುತ್ತೇವೆ. ಬಳಿಕ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ.
    | ರವೀಂದ್ರ ಬಂಗಾರೆಪ್ಪನವರ, ಅಥಣಿ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts