More

    ಗೆಲುವಿನೊಂದಿಗೆ ಹೊಸ ವರ್ಷ ಆರಂಭಿಸಿದ ಟೀಮ್ ಇಂಡಿಯಾ: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ

    ಕೇಪ್‌ಟೌನ್: ವೇಗದ ಬೌಲರ್‌ಗಳು ಸಂಪೂರ್ಣ ಪಾರಮ್ಯ ಮೆರೆದ ಟೆಸ್ಟ್‌ನಲ್ಲಿ ಭಾರತ ತಂಡ ಗೆಲುವಿನ ಕೇಕೆ ಹಾಕುವುದರೊಂದಿಗೆ ಹರಿಣಗಳ ನಾಡಿನಲ್ಲಿ ಎರಡನೇ ಬಾರಿಗೆ ಟೆಸ್ಟ್ ಸರಣಿ ಸಮಬಲ ಸಾಧಿಸಿದ ಐತಿಹಾಸಿಕ ಸಾಧನೆ ದಾಖಲಿಸಿದೆ. ಉಪನಾಯಕ ಜಸ್‌ಪ್ರೀತ್ ಬುಮ್ರಾ (61ಕ್ಕೆ 6) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಒಂದೂವರೆ ದಿನದಾಟದಲ್ಲೇ 7 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಹೊಸ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಿದ ರೋಹಿತ್ ಶರ್ಮ ಪಡೆ 1-1 ಸಮಬಲ ಸಾಧಿಸಿದೆ.

    ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಬೆಳಗ್ಗೆ 3 ವಿಕೆಟ್‌ಗೆ 62 ರನ್‌ಗಳಿಂದ ಆಟ ಮುಂದುವರಿಸಿದ ದಕ್ಷಿಣ ಆಫ್ರಿಕಾ, ಏಡನ್ ಮಾರ್ಕ್ರಮ್ (106 ರನ್, 103 ಎಸೆತ, 17 ಬೌಂಡರಿ, 2 ಸಿಕ್ಸರ್) ಬಿರುಸಿನ ಶತಕದ ಬಲದ ನಡುವೆಯೂ, ಜಸ್‌ಪ್ರೀತ್ ಬುಮ್ರಾ ದಾಳಿಗೆ ಕುಸಿದು 36.5 ಓವರ್‌ಗಳಲ್ಲಿ 176 ರನ್‌ಗಳಿಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. ಇನಿಂಗ್ಸ್ ಸೋಲಿನಿಂದ ಪಾರಾದ ಹರಿಣಗಳ ಪಡೆ ಭಾರತದ ಗೆಲುವಿಗೆ 79 ರನ್‌ಗಳ ಸಾಧಾರಣ ಗುರಿ ನೀಡಿತು.

    ಪ್ರತಿಯಾಗಿ 12 ಓವರ್‌ಗಳಲ್ಲಿ 3 ವಿಕೆಟ್‌ಗೆ 80 ರನ್‌ಗಳಿಸಿದ ಭಾರತ ಚಹಾ ವಿರಾಮಕ್ಕೂ ಮುನ್ನವೇ ಪಂದ್ಯ ಜಯಿಸಿತು. ಪಂದ್ಯದ ಎರಡು ದಿನಗಳ ಐದು ಅವಧಿಯಲ್ಲಿ ಒಟ್ಟು 33 ವಿಕೆಟ್‌ಗಳು ಪತನಗೊಂಡವು. ಮೊದಲ ದಿನ 23 ವಿಕೆಟ್ ಬಿದ್ದರೆ, 2ನೇ ದಿನ ಮತ್ತೆ 10 ವಿಕೆಟ್ ಉರುಳಿದವು.

    ಡಬ್ಲುೃ ಟಿಸಿಲ್ಲಿ ಅಗ್ರಸ್ಥಾನ: ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲು ಅನುಭವಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ 3ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದ ಭಾರತ, 2ನೇ ಪಂದ್ಯ ಗೆದ್ದು ಅಗ್ರಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿದ್ದ ದ.ಆಫ್ರಿಕಾ 2ನೇ ಸ್ಥಾನಕ್ಕೆ ಜಾರಿದೆ. ಜಯದೊಂದಿಗೆ 12 ಅಂಕ ಕಲೆಹಾಕಿದ ರೋಹಿತ್ ಪಡೆ, ಆಡಿರುವ 4 ಪಂದ್ಯಗಲ್ಲಿ 2 ಗೆಲುವು, 1 ಸೋಲು, 1 ಡ್ರಾದೊಂದಿಗೆ 26 ಅಂಕ ಕಲೆಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts