More

    ನೇಕಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್, ಮಾಸಿಕ 250 ಯುನಿಟ್ ವಿದ್ಯುತ್ ಉಚಿತ

    ವಿಜಯಪುರ: ಹತ್ತು ಎಚ್‌ಪಿವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ಮಾಸಿಕ 250 ಯುನಿಟ್ ವಿದ್ಯುತ್ ಉಚಿತವಾಗಿ ಒದಗಿಸುವ ಮೂಲಕ ರಾಜ್ಯ ಸರ್ಕಾರ ನೇಕಾರರಿಗೆ ದಸರಾ ಹಾಗೂ ದೀಪಾವಳಿಗೆ ಬಂಪರ್ ಕೊಡುಗೆ ನೀಡಿದೆ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಹಾಗೂ ಬಜೆಟ್ ಘೋಷಣೆಯಂತೆ ಅ. 20 ರಂದು ಅಧಿಕೃತವಾಗಿ ಆದೇಶ ಹೊರಡಿಸಲಾಗಿದ್ದು ಆ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಖ್ಯಾತಿ ಉಳಿಸಿಕೊಂಡಿದೆ. ಸಮಸ್ತ ನೇಕಾರರ ಪರವಾಗಿ ಹಾಗೂ ಇಲಾಖೆಯಿಂದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೆಮ್ಮೆಯಿಂದ ನುಡಿದರು.

    ಉಚಿತ ವಿದ್ಯುತ್ ಒದಗಿಸುವುದರಿಂದ ರಾಜ್ಯದ 35-45 ಸಾವಿರ ಸಣ್ಣ ನೇಕಾರ ಕುಟುಂಬಗಳಿಗೆ ನೆರವಾಗಲಿದೆ. ಅಲ್ಲದೆ, 20 ಎಚ್‌ಪಿ ವರೆಗಿನ ವಿದ್ಯುತ್ ಮಗ್ಗ ಹಾಗೂ ಪೂರ್ವ ಘಟಕಗಳಿಗೆ ಮಾಸಿಕ 500 ಯುನಿಟ್ ವರೆಗೆ 1.25 ರೂ. ದರದಲ್ಲಿ ವಿದ್ಯುತ್ ಒದಗಿಸಲು ಆದೇಶಿಸಲಾಗಿದೆ. ಇದರಿಂದ ದೊಡ್ಡ ನೇಕಾರರಿಗೂ ಅನುಕೂಲವಾಗಲಿದೆ ಎಂದರು.

    ಶೇ.80 ನೇಕಾರರು 10 ಎಚ್‌ಪಿ ವರೆಗಿನ ಮಗ್ಗ ಹೊಂದಿದ್ದು, ಅವರಿಗೆ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಉಚಿತ ವಿದ್ಯುತ್ ಪೂರೈಕೆ ಮೊತ್ತ 120-140 ಕೋಟಿ ರೂ. ತನಕ ಆಗಬಹುದು. ರಬಕವಿ, ಬನಹಟ್ಟಿ, ಚಿಕ್ಕಬಳ್ಳಾಪುರ ನೇಕಾರರು ಉಚಿತ ವಿದ್ಯುತ್ ಪೂರೈಕೆ ಬಗ್ಗೆ ಒತ್ತಾಯ ಮಾಡಿದ್ದರು. ಅವರ ಬೇಡಿಕೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಿವಾನಂದ ಪಾಟೀಲ ತಿಳಿಸಿದರು.

    ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಬಿಕ್ಕಟ್ಟು ಬಗೆ ಹರಿಸಲು ಸರ್ಕಾರ ಯತ್ನಿಸುತ್ತಿದೆ. ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭಗೊಂಡರೆ 800-1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಅದರಿಂದ ವಿದ್ಯುತ್ ಸಮಸ್ಯೆಗೆ ಒಂದಿಷ್ಟು ಪರಿಹಾರವೂ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts