More

    ಸೀರೆ ಮಾರಾಟಕ್ಕೆ ಸಿಗದ ಅವಕಾಶ

    ಶಿಗ್ಲಿ: ಲಾಕ್​ಡೌನ್​ನಿಂದ ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಇಲ್ಲಿನ ನೇಕಾರರು ಇಂದಿನ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಪರ್ಯಾಯ ಉದ್ಯೋಗದತ್ತ ಮುಖ ಮಾಡಿದ್ದಾರೆ.

    ವಿದ್ಯುತ್ ಮಗ್ಗಗಳಲ್ಲಿ ತಯಾರಾಗುವ ಸೀರೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಮಾರುಕಟ್ಟೆಗೆ ಕೊಂಡೊಯ್ದರೂ ಸೀರೆಗಳನ್ನು ಖರೀದಿ ಮಾಡಲು ಜವಳಿ ಅಂಗಡಿಗಳಿಲ್ಲ. ದೊಡ್ಡ ದೊಡ್ಡ ಸಾರಿ ಟೆಕ್ಸ್​ಟೈಲ್​ಗಳು ಬಂದ್ ಆಗಿದ್ದರಿಂದ ನೇಯ್ದಿರುವ ಸೀರೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದ ಕಂಗಾಲಾಗಿರುವ ಕೆಲ ನೇಕಾರರು ಲಾಕ್​ಡೌನ್ ಮುಗಿಯುವವರೆಗೂ ಪರ್ಯಾಯ ಕೆಲಸ ಹುಡುಕಿಕೊಂಡಿದ್ದು, ತರಕಾರಿ, ಹಣ್ಣು, ಬ್ರೆಡ್, ಮಜ್ಜಿಗೆ, ಹಾಲು, ಮೊಸರು ಮತ್ತಿತರ ಮಾರಾಟ ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ವಿದ್ಯುತ್ ಮಗ್ಗಗಳ ಮಾಲೀಕರ ಒಂದೊಂದು ಮನೆಯಲ್ಲಿ ಅಂದಾಜು 2 ರಿಂದ 3 ಸಾವಿರ ಸೀರೆಗಳು ಉಳಿದಿವೆ. ಸೀರೆಗಳು ಮಾರಾಟವಾಗಿ ಹಣ ಕೈ ಸೇರುವುದು ಯಾವಾಗ? ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ನೇಕಾರರಿಗೆ ಸಹಾಯಧನ ನೀಡುತ್ತಿರುವುದು ಶ್ಲಾಘನೀಯ. ಆದರೆ, ಇದು ಸ್ವಲ್ಪ ದಿನ ಜೀವನ ಸಾಗಿಸಲು ಅನುಕೂಲವಾಗಲಿದೆ. ಇದು ಶಾಶ್ವತ ಪರಿಹಾರ ಅಲ್ಲ ಎಂಬುದು ನೇಕಾರರ ಅಭಿಪ್ರಾಯ.

    ಸರ್ಕಾರವೇ ಖರೀದಿಸಲಿ: ಲಾಕ್​ಡೌನ್ ಮುಗಿಯುವವರೆಗೆ ಸರ್ಕಾರವೇ ನೇಕಾರರ ಸೀರೆಗಳನ್ನು ಸೂಕ್ತ ಬೆಲೆಗೆ ಕೊಂಡುಕೊಳ್ಳಬೇಕು. ಹೀಗೆ ಮಾಡುವುದರಿಂದ ನೇಕಾರರು ಮತ್ತು ನೇಕಾರಿಕೆ ಅವಲಂಬಿತರಿಗೆ ಅನುಕೂಲವಾಗಲಿದೆ. ಕೂಡಲೆ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಮಗ್ಗಗಳ ಮಾಲೀಕರು ಒತ್ತಾಯಿಸಿದ್ದಾರೆ.

    ಇಷ್ಟು ದಿನ ನೇಯ್ದಿರುವ ಸೀರೆಗಳು ಮನೆಯಲ್ಲೇ ಉಳಿದಿವೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಸೀರೆ ಸಿದ್ಧಪಡಿಸಿದ್ದು, ಲಾಕ್​ಡೌನ್​ನಿಂದ ಆರ್ಥಿಕ ಆಘಾತ ಎದುರಾಗಿದೆ. ಇಲ್ಲಿನ ಸಾವಿರಾರು ಕುಟುಂಬಗಳು ನೇಕಾರಿಕೆಯಲ್ಲಿ ತೊಡಗಿಕೊಂಡಿವೆ. ಅವರು ನೇಯ್ದಿರುವ ಸೀರೆಗಳನ್ನು ಸರ್ಕಾರ ಖರೀದಿಸಿ ಅನುಕೂಲ ಮಾಡಿಕೊಡಬೇಕು.
    | ಪ್ರಭು ಹಾಲಪ್ಪ ಪವಾಡದ, ವಿದ್ಯುತ್ ಮಗ್ಗಗಳ ಮಾಲೀಕ

    ಗದಗ ಜಿಲ್ಲೆಯಲ್ಲಿ ಮಾರ್ಚ್ ಹಾಗೂ ಏಪ್ರಿಲ್​ನಲ್ಲಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳಲ್ಲಿ ತಯಾರಾದ ಸೀರೆ ಮತ್ತಿತರ ನೇಯ್ಗೆ ಬಟ್ಟೆ ಬಗ್ಗೆ ಮಾಹಿತಿ ಕಲೆ ಹಾಕಿದ್ದು, 5.75 ಕೋಟಿ ರೂ. ಮೌಲ್ಯದ ಸರಕು ಇದೆ. ಈ ಕುರಿತು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು.
    | ಶಿವರಾಜ್ ಕುಲಕರ್ಣಿ, ಜವಳಿ ಇಲಾಖೆ ನಿರ್ದೇಶಕ ಗದಗ.

    ನೇಕಾರರಿಂದ ಸರ್ಕಾರ ಸೀರೆಗಳನ್ನು ಖರೀದಿಸಿ, ವಿವಿಧ ಕಾರಣಗಳಿಂದ ಸಂತ್ರಸ್ತರಾದವರಿಗೆ ಹಾಗೂ ಸೂರು ಕಳೆದುಕೊಂಡವರಿಗೆ ವಿತರಿಸಬಹುದು. ಇದರಿಂದ ನೇಕಾರರು, ಮಗ್ಗಗಳ ಮಾಲೀಕರು ಹಾಗೂ ಅವಲಂಬಿತ ಕುಟುಂಬಗಳ ನೆರವಿಗೆ ಸರ್ಕಾರ ಬೆನ್ನೆಲುಬಾಗಿ ನಿಂತಂತಾಗುತ್ತದೆ.
    ಅನಿಲ್ ಗಡ್ಡಿ, ವಿದ್ಯುತ್ ಮಗ್ಗ ಹಾಗೂ ಜವಳಿ ಉತ್ಪಾದಕರ ಸಂಘದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts