More

    ಭಾಗ್ಯಹೊಳೆಗೆ ಸಂಪರ್ಕ ಭಾಗ್ಯ

    ಪ್ರವೀಣ್‌ರಾಜ್ ಕೊೈಲ ಕಡಬ

    ಬಿಳಿನೆಲೆ ಗ್ರಾಮದಲ್ಲಿ ಹರಿಯುವ ಭಾಗ್ಯ ಹೊಳೆಗೆ ಉದ್ಮಯ ಎಂಬಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿ ಸುಸಜ್ಜಿತ ಸೇತುವೆ ನಿರ್ಮಾಣವಾಗಲಿದೆ. ಎಲ್ಲವೂ ಅಂದುಕೊಡಂತೆ ಆದರೆ ಮುಂದಿನ ಎರಡು ತಿಂಗಳಲ್ಲಿ ಸೇತುವೆ ನಿರ್ಮಾಣವಾಗಿ ಲೋಕಾರ್ಪಣೆಗೊಳ್ಳಲಿದೆ. ಆ ಮೂಲಕ ಹಲವು ವರ್ಷಗಳ ಈ ಭಾಗದ ಜನರ ಬೇಡಿಕೆ ಈಡೇರಲಿದೆ.

    ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸೇತುವೆ 3ಮೀ. ಅಗಲ ಮತ್ತು 25 ಮೀ. ಉದ್ದವಿರಲಿದ್ದು, ಲಘು ವಾಹನ ಸಂಚರಿಸಲು ಅನುಕೂಲವಾಗಲಿದೆ.

    ಹಲವು ವರ್ಷಗಳ ಬೇಡಿಕೆ: ಮಳೆಗಾಲದಲ್ಲಿ ಕಾಡಂಚಿನ ಪುತ್ತಿಲ ಬೈಲಡ್ಕ ಭಾಗದ ಜನರಿಗೆ ಜೀವಭಯ ಕಾಡುತ್ತಿತ್ತು. ಯಾಕೆಂದರೆ ಅಲ್ಲಿ ಉಕ್ಕಿ ಹರಿಯುವ ಭಾಗ್ಯ ಹೊಳೆಗೆ ಸೇತುವೆಯಿಲ್ಲದೆ ದಾಟುವುದೆ ಸಾಹಸ. ಮಳೆಗಾಲದಲ್ಲಿ ಹೊಳೆ ದಾಟಲು ಸ್ಥಳಿಯರೇ ನಿರ್ಮಿಸುವ ಕಾಲುಸಂಕವೇ ಸಂಪರ್ಕ ಸೇತು. ಹೀಗಾಗಿ ಇಲ್ಲೊಂದು ಸರ್ವಋತು ಸೇತುವೆಯಾಗಬೇಕು ಎಂದು ಈ ಭಾಗದ ಜನತೆ ಜನಪ್ರತಿನಿಧಿಗಳಲ್ಲಿ ದಂಬಾಲು ಬಿದ್ದಿದ್ದರು. ಸಚಿವ ಎಸ್.ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ಶಾಲಾ ಸಂಪರ್ಕ ಸೇತುವೆ ಯೋಜನೆಯಡಿ ಸೇತುವೆ ನಿರ್ಮಾಣಗೊಳ್ಳಲಿದೆ.

    50ಕ್ಕೂ ಹೆಚ್ಚು ಕುಟುಂಬದ ಜನರು, ಶಾಲಾ ವಿದ್ಯಾರ್ಥಿಗಳು ಸೇತುವೆಯಿಲ್ಲದೆ ಮಳೆಗಾಲದಲ್ಲಿ ಈ ಅಪಾಯಕಾರಿಯಾಗಿ ಹೊಳೆ ದಾಟುತ್ತಿದ್ದರು. ವರ್ಷದ ಬೇಸಿಗೆಯ ಮೂರು ತಿಂಗಳಲ್ಲಿ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾದಾಗ ನದಿಯಲ್ಲಿ ವಾಹನ ಸಂಚಾರಕ್ಕೂ ಅನುಕೂಲವಾಗುತ್ತಿತ್ತು. ಉಳಿದ ದಿನಗಳಲ್ಲಿ ಅಪಾಯಕಾರಿ ಮರದ ಸೇತುವೆಯೇ ಗತಿ.

    ಅರ್ಗಿನಿ, ಅಮೈ, ಬೈಲು ಪ್ರದೇಶದ ಜನತೆ ಬಿಳಿನೆಲೆ ಮುಖಾಂತರ ಕಡಬ ಸುಬ್ರಹ್ಮಣ್ಯ ಮತ್ತಿತರ ಪ್ರಮುಖ ಪೇಟೆ ಸಂಪರ್ಕಸಿಬೇಕಾದರೆ ಈ ಭಾಗ್ಯ ಹೊಳೆ ದಾಟಿ ಮುಂದುವರಿಯಬೇಕು. ಪ್ರತಿ ವರ್ಷ ಈ ಭಾಗದ ಜನತೆ ಸುಮಾರು 20 ಸಾವಿರ ಭರಿಸಿಕೊಂಡು ಅಡಕೆ ಮರ, ಕಬ್ಬಿಣದ ರಾಡ್ ಇನ್ನಿತರ ಉಪಕರಗಳನ್ನು ಉಪಯೋಗಿಸಿಕೊಂಡು ಸೇತುವೆ ನಿರ್ಮಿಸುತ್ತಾರೆ.

    ಅಪಾಯಕಾರಿ ಪಯಣ: ಕಬ್ಬಿಣದ ರಾಡ್ ಉಪಯೋಗಿಸಿ ನಿರ್ಮಿಸಿರುವ ಈ ಕಾಲು ಸಂಕದಲ್ಲಿ ಪ್ರಯಾಣಿಸುವುದೆ ಸಾಹಸ. ತೂಗುಯ್ಯಲೆಯಂತೆ ತೂಗುವ ಈ ಕಾಲುಸಂಕದಲ್ಲಿ ಮಕ್ಕಳು ವೃದ್ಧರು ಬೇರೆಯವರ ಸಹಾಯ ಪಡೆಯಬೇಕು. ದಾಟುವಾಗ ಹೊಳೆಗೆ ಬಿದ್ದ ಹಲವಾರು ಘಟನೆಗಳು ನಡೆದಿವೆ.

    ಹೆಣ್ಣು ಕೊಡಲು ಹಿಂದೇಟು: ಭಾಗದ ಜನ ಮಳೆಗಾಲದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಹಿಂಜರಿಯುತ್ತಿದ್ದರು. ಯಾಕೆಂದರೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಸಮಸ್ಯೆ. ಈ ಭಾಗದ ಯುವಕರಿಗೆ ಹೆಣ್ಣನ್ನು ಮದುವೆ ಮಾಡಿ ಕೊಡಲು ಸಹ ಹಿಂದೇಟು ಹಾಕುತ್ತಾರೆ. ಸೇತುವೆ ನಿರ್ಮಾಣವಾದಲ್ಲಿ ಇಂತಹ ಕಷ್ಟಗಳಿಂದ ಮುಕ್ತರಾಗಬಹುದು ಎಂದು ಜನರ ಅಭಿಪ್ರಾಯ.

    ಉದ್ಮಯ ಎಂಬಲ್ಲಿ ಸರ್ವಋತು ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ಅಪಾಯಕಾರಿ ಕಾಲು ಸಂಕದ ನಡಿಗೆಯ ಬಗ್ಗೆ ಕಳೆದ ಮಳೆಗಾದಲ್ಲಿ ಮಾಧ್ಯಮಗಳು ವರದಿ ಮಾಡಿ ಗಮನ ಸೆಳೆದ ಪರಿಣಾಮ ಸೇತುವೆ ಭಾಗ್ಯ ಒದಗಿ ಬಂದಿದೆ.
    ವಿಜಯಕುಮಾರ ಎರ್ಕ, ಸಾಮಾಜಿಕ ಕಾರ‌್ಯಕರ್ತ

    ಶಾಲಾ ಸಂಪರ್ಕ ಸೇತು ಯೋಜನೆಯಡಿಯಲ್ಲಿ ಸೇತುವೆ ನಿಮಾರ್ಣವಾಗಲಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಕೆಲ ದಿನಗೊಳಗೆ ಕಾಮಗಾರಿ ಪ್ರಾರಂಭವಾಗಲಿದೆ. ಮುಂದಿನ ಮೇ ತಿಂಗಳೊಳಗೆ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು.
    ಪ್ರಮೋದ್, ಪುತ್ತೂರು ಲೋಕಪಯೋಗಿ ಇಲಾಖಾ ಅಭಿಯಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts