More

    ಸಂದಿಗ್ಧದಿಂದ ಹೊರ ಬರಲು ತಾಲೀಮು; ಬಿಎಸ್​ವೈ, ವಿಜಯೇಂದ್ರ ‘ಹೋಮ್​ ವರ್ಕ್​’

    ಬೆಂಗಳೂರು: ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ತಲೆದೋರಿರುವ ಬಂಡಾಯ, ಅಸಮಾಧಾನ ಬಗೆಹರಿಸಲು ಹಾಗೂ ಸಂದಿಗ್ಧದಿಂದ ಹೊರ ಬರಲು ರಾಜ್ಯ ನಾಯಕರು ತಾಲೀಮು ನಡೆಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಗತ್ಯ ಸಿದ್ಧತೆ ಮಾಡಿಕೊಂಡು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಲೋಕಸಭೆ ಮೊದಲ ಹಂತದ ಚುನಾವಣೆಗೆ ಅಖಾಡ ನಿಚ್ಚಳವಾಗುವ ಮುನ್ನ ಅತೃಪ್ತಿ, ಕೋಪತಾಪ ತಣಿಸಿ, ಸೆಣಸಾಟಕ್ಕೆ ತಯಾರಾಗಬೇಕು ಎನ್ನುವುದು ಕೇಸರಿ ಪಡೆ ಇಚ್ಛೆಯಾಗಿದೆ. ಈ ನಿಟ್ಟಿನಲ್ಲಿ ದೆಹಲಿಗೆ ತೆರಳುವ ಮುನ್ನ ಡಾಲರ್ಸ್ ಕಾಲನಿಯ ‘ಧವಳಗಿರಿ’ಯಲ್ಲಿ ರಾಜ್ಯ ನಾಯಕರು ‘ಹೋಮ್ ವರ್ಕ್’ ಮಾಡಿ, ವರಿಷ್ಠರ ಮುಂದಿಡುವ ವಿಷಯಪಟ್ಟಿ ಸಿದ್ಧಪಡಿಸಿದ್ದಾರೆ.

    ಪ್ರಧಾನ ವಿಷಯಗಳು: ಮೈತ್ರಿ ವಿಚಾರದಲ್ಲಿ ಬಿಜೆಪಿ ವರಿಷ್ಠರ ಧೋರಣೆಯ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅಸಹನೆ, ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಡಾಯ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮುನಿಸು, ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಉಮೇದುವಾರಿಕೆಗೆ ಅಪಸ್ವರ. ಉಳಿದ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ, ಸುರಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ, ಪ್ರಧಾನಿ ಮೋದಿ ಅವರ ಎರಡು ಕಾರ್ಯಕ್ರಮಗಳ ಪರಿಣಾಮ ಮುಂತಾದವು ಈ ಸಭೆಯಲ್ಲಿ ಚರ್ಚೆಯಾಗಿವೆ.

    ಬಿ.ಎಸ್.ಯಡಿಯೂರಪ್ಪ ಸಮಕ್ಷಮ ನಡೆದ ಸಭೆಯಲ್ಲಿ ಪಕ್ಷದ ಲೋಕಸಭೆ ಚುನಾವಣೆ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಭಾಗಿಯಾಗಿದ್ದರು. ಸಭೆಯ ಸಲಹೆಯಂತೆ ಬಿ.ವೈ. ವಿಜಯೇಂದ್ರ ಮೊಬೈಲ್ ಮೂಲಕ ಡಿ.ವಿ.ಸದಾನಂದಗೌಡ ಅವರನ್ನು ಸಂರ್ಪಸಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

    ಈಶ್ವರಪ್ಪ ಬಂಡಾಯ ಶಮನವನ್ನು ವರಿಷ್ಠರ ವಿವೇಚನೆಗೆ ಬಿಡಲು, ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಆದಷ್ಟು ಬೇಗ ಪ್ರಕಟಿಸುವಂತೆ ಮನವಿ ಮಾಡಲು ಸಭೆ ಒಪ್ಪಿಗೆ ನೀಡಿದೆ. ಮೋದಿ ಅವರ ಕಲಬುರಗಿ, ಶಿವಮೊಗ್ಗ ಕಾರ್ಯಕ್ರಮಗಳಿಗೆ ಜನರ ಸ್ಪಂದನೆ, ಪ್ರಭಾವಶಾಲಿ ಭಾಷಣವೂ ನಿರೀಕ್ಷಿತಮಟ್ಟದಲ್ಲಿ ಪ್ರತಿಫಲಿಸಿದೆ. ವಾರದ ಅವಧಿಯಲ್ಲಿ ಮೋದಿಯವರ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಮುಖಂಡರು ಹಾಗೂ ಕಾರ್ಯಕರ್ತರ ಶಕ್ತಿ, ಉತ್ಸಾಹವೂ ಅನಾವರಣಗೊಂಡಿದೆ. ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಜತೆಗೆ ಟಿಕೆಟ್ ಹಂಚಿಕೆ ನಂತರದ ವಿದ್ಯಮಾನ, ಕಾಂಗ್ರೆಸ್​ನ ತೆರೆಮರೆ ಪ್ರಯತ್ನವನ್ನು ವರಿಷ್ಠರಿಗೆ ತಿಳಿಸಲು ಸಭೆ ಸಮ್ಮತಿಸಿದೆ.

    ವಿಳಂಬ ಸಾಧ್ಯತೆ: ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಸಭೆ ನಡೆದರೂ ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ ಪ್ರಕಟವಾಗಲಿಕ್ಕಿಲ್ಲ, ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ರಾಜ್ಯದ ಬೆಳವಣಿಗೆ, ಜೆಡಿಎಸ್​ನ ಬೇಸರ, ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪೈಪೋಟಿ, ಅಸ್ಪಷ್ಟತೆ ನಿವಾರಣೆಗೆ ಕೆಲವು ದಿನಗಳು ಬೇಕಾಗಲಿವೆ ಎಂದು ರ್ತಸಲಾಗುತ್ತಿದೆ.

    ಕಾರಜೋಳ ಕೋರಿಕೆ: ದೆಹಲಿಗೆ ತೆರಳುವ ಮುನ್ನ ಮಾಜಿ ಸಚಿವ ಗೋವಿಂದ ಕಾರಜೋಳ, ಸುರಪುರ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ರಾಜೂಗೌಡ ಬಿಎಸ್​ವೈ ಭೇಟಿ ಮಾಡಿ ಮಾತುಕತೆ ನಡೆಸಿದರು. ಚಿತ್ರದುರ್ಗ ಕ್ಷೇತ್ರಕ್ಕೆ ಹಾಲಿ ಸಂಸದ ಎ.ನಾರಾಯಣಸ್ವಾಮಿ ಅವರನ್ನೇ ಮುಂದುವರಿಸಲು ಕಾರಜೋಳ ಮನವಿ ಮಾಡಿದ್ದಾರೆ. ಕ್ಷೇತ್ರಕ್ಕೆ ಮಾಜಿ ಸಂಸದ ಜನಾರ್ದನಸ್ವಾಮಿ ಜತೆಗೆ ಕಾರಜೋಳ ಹೆಸರು ಪರಿಗಣನೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

    ದೆಹಲಿಯಲ್ಲಿ ಹೆಗಡೆ ಬಿಡಾರ: ವರಿಷ್ಠರ ಬುಲಾವ್​ಗೆ ಕೊನೆಗೂ ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಓಗೊಟ್ಟಿದ್ದು, ದೆಹಲಿಗೆ ತೆರಳಿದ್ದಾರೆ. ಐದು ಬಾರಿ ದೆಹಲಿಗೆ ಕರೆಯಿಸಿಕೊಳ್ಳದೆ ಟಿಕೆಟ್ ಕೊಟ್ಟಿದ್ದಾರೆ. ಈ ಬಾರಿ ಹೊಸ ಪರಿಪಾಠವೇಕೆ? ಎಂದುಕೊಂಡು ನಿರ್ಲಿಪ್ತರಾಗಿದ್ದರು ಎನ್ನಲಾಗಿದೆ. ಕರೆದಾಗ ಹೋಗದಿದ್ದರೆ ಸ್ಪರ್ಧಿಸಲು ಇಷ್ಟವಿಲ್ಲವೆಂಬ ಸಂದೇಶ ಹೋಗುತ್ತದೆ. ಜತೆಗೆ ಪರ್ಯಾಯ ಹೆಸರು ಚರ್ಚೆಯಲ್ಲಿವೆ ಎಂದು ಅರಿತ ಹೆಗಡೆ ದೆಹಲಿಗೆ ದೌಡಾಯಿಸಿದ್ದಾರೆ. ಈ ನಡುವೆ ಬೆಳಗಾವಿಯಲ್ಲಿ ವಿರೋಧದ ಧ್ವನಿ ಕೇಳಿ ಜಗದೀಶ ಶೆಟ್ಟರ್ ದಿಗಿಲುಗೊಂಡು ದೆಹಲಿಗೆ ಪ್ರಯಾಣ ಬೆಳೆಸಿ, ವರಿಷ್ಠರ ಭೇಟಿ ಮಾಡಿ ವಾಪಸಾಗಿದ್ದಾರೆ.

    ಸದಾನಂದಗೌಡಗೆ ಚಿಕ್ಕಬಳ್ಳಾಪುರ ಆಫರ್: ಅಸಮಾಧಾನಿತ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರನ್ನು ಮೊಬೈಲ್​ನಲ್ಲಿ ಸಂರ್ಪಸಿದ ಬಿ.ವೈ.ವಿಜಯೇಂದ್ರ ಚಿಕ್ಕಬಳ್ಳಾಪುರ ಕ್ಷೇತ್ರದ ಆಫರ್ ನೀಡಿದರು ಎಂದು ಮೂಲಗಳು ತಿಳಿಸಿವೆ. ದೆಹಲಿಗೆ ತೆರಳುವ ಮುನ್ನ ಬಿಎಸ್​ವೈ ನಿವಾಸದಲ್ಲಿ ನಡೆದ ಸಭೆ ಸಲಹೆಯಂತೆ ವಿಜಯೇಂದ್ರ ಮಾತನಾಡಿದ್ದಾರೆ. ಈ ಆಫರ್ ಒಪ್ಪದ ಡಿವಿಎಸ್ ಬೆಂಗಳೂರು ಉತ್ತರ ಕ್ಷೇತ್ರದ ಬೇಡಿಕೆಯನ್ನೇ ಪುನರುಚ್ಚರಿಸಿದ್ದು, ವರಿಷ್ಠರ ಗಮನಕ್ಕೆ ತರಲು ತೀರ್ವನಿಸಲಾಯಿತು ಎನ್ನಲಾಗಿದೆ.

    ಈಶ್ವರಪ್ಪ ತಂದಿಟ್ಟ ಪೇಚು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಡಾಯ ಮೇಲ್ನೋಟಕ್ಕೆ ಬಿ.ಎಸ್.ಯಡಿಯೂರಪ್ಪ ವಿರೋಧದಂತೆ ಕಂಡು ಬರುತ್ತಿದ್ದರೂ ವರಿಷ್ಠರನ್ನು ಪೇಚಿಗೆ ಸಿಲುಕಿಸಿದೆ ಎಂದು ಪಕ್ಷದ ನಾಯಕರು ಹೇಳುತ್ತಾರೆ. ಹಾವೇರಿ ಸೇರಿ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನ ದೆಹಲಿ ನಾಯಕರು ಈಶ್ವರಪ್ಪಗೆ ಸಂರ್ಪಸಿ, ಹಾವೇರಿ ಅಥವಾ ಕೊಪ್ಪಳದಲ್ಲಿ ಸ್ಪರ್ಧೆಯ ಆಫರ್ ನೀಡಿದ್ದರು. ಆದರೆ ಈಶ್ವರಪ್ಪ ನನಗೆ ಬೇಡ, ಹಾವೇರಿಯಲ್ಲಿ ಪುತ್ರ ಕಾಂತೇಶ್ ಅವಕಾಶ ನೀಡಬೇಕು ಎಂದು ಕೋರಿದಾಗ ವರಿಷ್ಠರು ಏನನ್ನೂ ಹೇಳಿಲ್ಲ. ಕೇಂದ್ರ ನಾಯಕರು ತರಿಸಿಕೊಂಡ ಸಮೀಕ್ಷೆ ವರದಿ ಕಾಂತೇಶ್ ಪರವಾಗಿ ಇಲ್ಲದ್ದಕ್ಕೆ ದೆಹಲಿ ನಾಯಕರು ಮೌನವಹಿಸಿದರು ಎಂದು ಮೂಲಗಳು ಹೇಳಿವೆ.

    ಜಗದೀಶ ಶೆಟ್ಟರ್ ವಿರೋಧಿ ಬಣ ಭೇಟಿ: ಬಿಜೆಪಿಯ ರಾಜ್ಯ ಲೋಕಸಭೆ ಚುನಾವಣೆ ಉಸ್ತುವಾರಿ ಡಾ.ರಾಧಾ ಮೋಹನದಾಸ್ ಅಗರ್ವಾಲ್ ಅವರನ್ನು ಶೆಟ್ಟರ್ ವಿರೋಧಿ ಬಣ ಭೇಟಿ ಮಾಡಿ ತನ್ನ ಕೋರಿಕೆ ಮಂಡಿಸಿದೆ. ಶೆಟ್ಟರ್ ಬದಲು ಸ್ಥಳೀಯರಿಗೆ ಅವಕಾಶ ಕೊಡಿ. ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದು, ವರಿಷ್ಠರ ಗಮನಕ್ಕೆ ತರುವುದಾಗಿ ಅಗರ್ವಾಲ್ ಭರವಸೆ ನೀಡಿದ್ದಾರೆ. ನಿಯೋಗದಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕರಾದ ಮಹಾಂತೇಶ ಕವಟಗಿಮಠ, ಅನಿಲ್ ಬೆನಕೆ ಇನ್ನಿತರರಿದ್ದರು.

    ಪಕ್ಷದ ಕಾರ್ಯಕರ್ತರು ಅಸಮಾಧಾನಿತರಾದಾಗ ಹಿರಿಯ ನಾಯಕರಾದ ಸದಾನಂದಗೌಡ ಹೇಗೆಲ್ಲ ಸಮಾಧಾನ ಮಾಡಿದ್ದಾರೆ ಎಂದು ಗೊತ್ತಿದೆ. ಆದರೆ ಅವರೇ ಅಸಮಾಧಾನಿತರಾಗಿದ್ದಾರೆ ಎನ್ನುವುದು ಊಹಾಪೋಹ. ಯಡಿಯೂರಪ್ಪ ಮತ್ತು ಈಶ್ವರಪ್ಪ 45 ವರ್ಷಗಳ ರಾಜಕೀಯ ಸಂಬಂಧ ಇಟ್ಟುಕೊಂಡು ಜತೆಗೆ ಕೆಲಸ ಮಾಡಿದವರು. ಈಶ್ವರಪ್ಪ ಬಂಡಾಯವನ್ನು ಯಡಿಯೂರಪ್ಪನವರೇ ಸಮರ್ಥವಾಗಿ ನಿರ್ವಹಣೆ ಮಾಡುತ್ತಾರೆ.

    | ಸಿ.ಟಿ.ರವಿ ಮಾಜಿ ಸಚಿವ

    ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದೇನೆ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಗುರುವಾರ ಅಥವಾ ಶುಕ್ರವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಹಾವೇರಿ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ನಾನು ಅಥವಾ ಈಶ್ವರಪ್ಪ ಪುತ್ರ ಅಭ್ಯರ್ಥಿಯಾಗುತ್ತೇವೆ ಅನ್ನೋ ಮಾಹಿತಿ ಇಲ್ಲ.

    | ಜಗದೀಶ ಶೆಟ್ಟರ್ ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts