More

    ಬಿಎಸ್‌ಎನ್‌ಎಲ್ ದೂರವಾಣಿ ಸೇವೆ ಕಣ್ಣಾಮುಚ್ಚಾಲೆ: ಗ್ರಾಹಕರು ಹೈರಾಣ

    ಕನಕಪುರ: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಸಂಸ್ಥೆ ಕನಕಪುರದಲ್ಲಿ ಅಧ್ವಾನವಾಗಿದೆ. ದೂರವಾಣಿ ಸೇವೆ ಕಣ್ಣಾಮುಚ್ಚಾಲೆಯಿಂದ ಗ್ರಾಹಕರು ಹೈರಾಣಾಗಿದ್ದು, ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

    ಗ್ರಾಹಕರಿಗೆ ಕಡಿಮೆ ದರದಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡುತ್ತ ಬಂದಿದೆಯಾದರೂ ಖಾಸಗಿ ಮೊಬೈಲ್ ಸಂಸ್ಥೆಗಳ ಎದುರು ಬಿಎಸ್‌ಎನ್‌ಎಲ್ ಕಡೆಗಣನೆಗೆ ಒಳಗಾಗುತ್ತಿದೆ. ಹೀಗಿದ್ದರೂ ಮೂಲ ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸಲು ಸಂಸ್ಥೆ ವಿಲವಾಗಿದ್ದು, ದಿನೇದಿನೆ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಾಗ ದೂರವಾಣಿ ಸೇವೆಯೂ ದೊರಕುವುದಿಲ್ಲ. ಗ್ರಾಹಕರು ತಿಂಗಳಿಂದ ಸಮಸ್ಯೆ ಎದುರಿಸುತ್ತಿದ್ದರೂ ಪರಿಹಾರ ಮಾತ್ರ ಸಿಕ್ಕಿಲ್ಲ.

    ಇನ್ನು ವಾರದ ಒಂದೆರೆಡು ದಿನಗಳಲ್ಲಿ ಸೇವೆ ದೊರೆತರೆ, ಉಳಿದ ದಿನಗಳಲ್ಲಿ ನಾಟ್ ರೀಚಬಲ್. ಹೀಗಾಗಿ ಗ್ರಾಹಕರು ಬಿಎಸ್‌ಎನ್‌ಎಲ್ ಸಹವಾಸವೇ ಬೇಡ ಎನ್ನುವಂತಾಗಿದೆ. ತಾಲೂಕು ವ್ಯಾಪ್ತಿಯ 400 ಕಿ.ಮೀ. ಸುತ್ತಳತೆಯಲ್ಲಿ ವಿಸ್ತಾರ ಹೊಂದಿದ್ದರೂ ಬಹುತೇಕ ಗ್ರಾಮಗಳಲ್ಲಿ ಸೇವೆ ನಿಷ್ಕ್ರಿಯಗೊಂಡಿದೆ. ಹೀಗಾಗಿ ಗ್ರಾಹಕರು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಿದ್ದರೆ, ಕೆಲವರು ಇಂದಲ್ಲ ನಾಳೆ ಸರಿಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

    ಸಿಬ್ಬಂದಿ ಕೊರತೆ: ಕನಕಪುರ ಬಿಎಸ್‌ಎನ್‌ಎಲ್ ಕಚೇರಿಯ 10 ಸಿಬ್ಬಂದಿಯು ಒಂದೇ ಬಾರಿಗೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸದ್ಯ ಒಂದಿಬ್ಬರು ದಿನಗೂಲಿ ನೌಕಕರನ್ನು ಬಿಟ್ಟರೆ ಬೇರೆ ಸಿಬ್ಬಂದಿ ಇಲ್ಲಿಲ್ಲ. ಸಿಬ್ಬಂದಿ ಕೊರತೆಯಿಂದ ಗ್ರಾಹಕರಿಗೆ ಸರಿಯಾಗಿ ಸಂಪರ್ಕ ಸೇವೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ.

    ಗುತ್ತಿಗೆದಾರರ ಕಾಟ: ಅಭಿವೃದ್ಧಿ ಹೆಸರಿನಲ್ಲಿ ಕನಕಪುರ ತಾಲೂಕಿನಲ್ಲಿ ಗುತ್ತಿಗೆದಾರರು ಕಾಮಗಾರಿ ನಡೆಸುವಾಗ ಬಿಎಸ್‌ಎನ್‌ಎಲ್ ಕಚೇರಿಗೆ ತಿಳಿಸದೆ ಎಲ್ಲೆಂದರಲ್ಲಿ ದೂರವಾಣಿ ಕೇಬಲ್‌ಗಳನ್ನು ಕತ್ತರಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ ಸಂಪರ್ಕ ಸೇವೆ ಕಲ್ಪಿಸಲು ಆಗುತ್ತಿಲ್ಲ ಎಂಬುದು
    ಬಿಎಸ್‌ಎನ್‌ಎಲ್ ಸಿಬ್ಬಂದಿ ಗೋಳು.

    ಬಿಎಸ್‌ಎನ್‌ಎಲ್ ಸಂಪರ್ಕ ಸೇವೆ ವ್ಯತ್ಯಯದಿಂದ ಗ್ರಾಹಕರಿಗೆ ತೊಂದರೆ ಆಗಿರುವುದು ನಿಜ. ಶೀಘ್ರವೇ ಉತ್ತಮ ಸೇವೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    -ಕುಮಾರಸ್ವಾಮಿ, ಎಜಿಎಂ, ಬೆಂಗಳೂರು ಕೇಂದ್ರ ಕಚೇರಿ

    ವಿದ್ಯುತ್ ಕಡಿತಗೊಂಡು ಬಿಎಸ್‌ಎನ್‌ಎಲ್ ಸಂಪರ್ಕ ಸೇವೆಯಲ್ಲಿ ವ್ಯತ್ಯಯವಾದಾಗ ಜನರೇಟರ್ ಸೌಲಭ್ಯ ಬಳಸಬೇಕು. ಎಲ್ಲ ಅವ್ಯವಸ್ಥೆ ಸರಿಪಡಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು.
    -ಟಿ.ಸಿ.ವೆಂಕಟೇಶ್, ಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts