More

    ಕೆಟ್ಟು ನಿಂತ ಲಿಫ್ಟ್ ಮೆಟ್ಟಿಲೇ ಗತಿ

    ಭಟ್ಕಳ: ತಾಲೂಕಿನ ಸಾರ್ವಜನಿಕರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಬಂದು ಹೋಗುವ ತಾಲೂಕು ಆಡಳಿತ ಕಚೇರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಲಿಫ್ಟ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಮೇಲಿನ ಮಹಡಿಗಳಿಗೆ ತೆರಳಲು ವೃದ್ಧರು, ಮಹಿಳೆಯರು ಪರದಾಡುವಂತಾಗಿದೆ.

    ತಾಲೂಕು ಆಡಳಿತ ಕಚೇರಿ (ಮಿನಿ ವಿಧಾನಸೌಧ)ಗೆ ಪ್ರತಿದಿನ ಸಾವಿರಾರು ಜನರು ಬೇಟಿ ನೀಡುತ್ತಾರೆ. ಇಲ್ಲಿ ಸಾರ್ವಜನಿಕರ ಅತಿ ಅವಶ್ಯಕತೆಯ ಕಂದಾಯ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೇ ಕಚೇರಿ, ಖಜಾನೆ, ಚುನಾವಣೆ ಕಚೇರಿ, ಪಹಣಿ ಪತ್ರ ಸೇರಿ ಅನೇಕ ಕಚೇರಿಗಳ ಕೆಲಸಗಳಿಗೆ ಸಾರ್ವಜನಿಕರು ಬಂದು ಹೋಗುತ್ತಾರೆ.

    ಒಂದೊಂದು ಮಹಡಿಯಲ್ಲಿ ಒಂದೊಂದು ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಮಹಡಿಯಿಂದ ಮತತ್ತೊಂದು ಮಹಡಿಗೆ ತೆರಳಲು ಮೆಟ್ಟಿಲು ಹತ್ತುವದು ಅನಿವಾರ್ಯವಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಲ್ಲಿ ಲಿಫ್ಟ್ ವ್ಯವಸ್ಥೆ ಅಳವಡಿಸಿದೆ. ಆದರೆ, ಕಳೆದೊಂದು ತಿಂಗಳಿನಿಂದ ಇದು ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ದೂರು ನೀಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎನ್ನುತ್ತಾರೆ ಸಾರ್ವಜನಿಕರು.

    ಲಿಫ್ಟ್ ನಿರ್ವಹಣೆಗೆ 1 ಲಕ್ಷ ರೂ.: ಲಿಫ್ಟ್ ನಿರ್ವಹಣೆ ಮಾಡಿದ ಸಂಸ್ಥೆಗೆ ತಾಲೂಕು ಆಡಳಿತ ವರ್ಷಕ್ಕೆ 1 ಲಕ್ಷ ರೂ. ಪಾವತಿ ಮಾಡುತ್ತದೆ. ತಾಲೂಕು ಆಡಳಿತ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕಚೇರಿಗಳು ಸೇರಿ ಅಭಿವೃದ್ಧಿ ಕಮಿಟಿ ಎಂದು ರಚಿಸಿಕೊಂಡಿವೆ.

    ಈ ಕಮಿಟಿ ಇಂತಹ ಸಣ್ಣಪುಟ್ಟ ವೆಚ್ಚ, ಲಿಫ್ಟ್ ನಿರ್ವಹಣೆ, ದುರಸ್ತಿ ಮಾಡಿಸಲು ಹಣ ಹೊಂದಿಸಿ ಪಾವತಿಸಬೇಕು. ಆದರೆ, ಈ ಕಮಿಟಿ ಭಟ್ಕಳದಲ್ಲಿ ಅಸ್ತಿತ್ವಕ್ಕೆ ಬಂದಿದೆಯೋ ಇಲ್ಲವೋ ಎಂಬ ಅನುಮಾನ ಜನರಲ್ಲಿ ಮೂಡಿದೆ.

    ಏಕೆಂದರೆ ಒಂದು ತಿಂಗಳಿನಿಂದ ಲಿಫ್ಟ್ ನಿರ್ವಹಣೆ ಇಲ್ಲದೆ ನಿಂತಿದ್ದರೂ ಯಾವೊಂದು ಇಲಾಖೆಯೂ ಈ ಕುರಿತು ಚಕಾರ ಎತ್ತದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಲಿಫ್ಟ್ ಸರಿಪಡಿಸಬೇಕು ಎಂಬುದು ಹಿರಿಯ ನಾಗರಿಕರ ಆಗ್ರಹವಾಗಿದೆ.

    ಒಂದು ತಿಂಗಳಿನಿಂದ ಲಿಫ್ಟ್ ಕೆಟ್ಟು ನಿಂತಿದೆ. ಸಾರ್ವಜನಿಕರು ದೂರಿದರು ಅಧಿಕಾರಿಗಳು ಗಮನ ಹರಿಸಿಲ್ಲ. ಇದು ಬೇಜವಾಬ್ದಾರಿಯ ಪರಮಾವಧಿ. ಕಚೇರಿಗೆ ಬರುವ ವೃದ್ಧರು, ಅಂಗವಿಕಲರು ಮೆಟ್ಟಿಲು ಹತ್ತಿ ಮಹಡಿ ಏರಬೇಕಾದರೆ ಅವರ ಪರಿಸ್ಥಿತಿ ದೇವರಿಗೆ ಪ್ರೀತಿ. ಕೂಡಲೇ ಇದನ್ನು ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಇದನ್ನು ಸಚಿವರ ಗಮನಕ್ಕೆ ತರಲಾಗುವುದು.
    > ನಾಗೇಶ ಎನ್., ಸಾಮಾಜಿಕ ಕಾರ್ಯಕರ್ತ

    ನಿರ್ವಹಣೆ ಇಲ್ಲದೆ ಲಿಫ್ಟ್ ಕಟ್ಟು ನಿಂತಿರುವದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗಿದ್ದಕ್ಕೆ ವಿಷಾದವಿದೆ. ನಾನು ಕೆಲ ದಿನಗಳಿಂದ ರಜೆಯಲ್ಲಿದ್ದೆ. ಕಚೇರಿಗೆ ತೆರಳಿದ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುತ್ತೇನೆ. ಮೊದಲು ಲಿಫ್ಟ್ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು.

    ಮಮತಾದೇವಿ ಎಸ್., ಉಪವಿಭಾಗಾಧಿಕಾರಿ ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts