More

    ಕೆಟ್ಟು ನಿಂತ ಕಸ ವಿಲೇವಾರಿ ವಾಹನಗಳು

    ಎಚ್.ಡಿ.ಕೋಟೆ: ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸುವ ಮೂಲಕ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪುರಸಭೆಯ ಬಹುತೇಕ ವಾಹನಗಳು ಕೆಟ್ಟು ನಿಂತಿರುವುದರಿಂದ ಕಸ ವಿಲೇವಾರಿ ಸಮಸ್ಯೆ ಹೆಚ್ಚಾಗಿದೆ.

    ವಾಹನಗಳು ಮನೆ ಬಳಿ ಬಂದು ಕಸವನ್ನು ಸಂಗ್ರಹಿಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕಸದ ರಾಶಿ ಹೆಚ್ಚಾಗಿದೆ. ಇದರಿಂದಸ್ಥಳೀಯರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದ್ದರೂ ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲಿ ಕ್ರಮ ವಹಿಸದಿರುವುದು ದುರಂತವೇ ಸರಿ.

    ಇಲ್ಲಿನ ಪುರಸಭೆ ವ್ಯಾಪ್ತಿಗೆ 23 ವಾರ್ಡ್ ಬರಲಿದ್ದು, ನಿತ್ಯ ಪ್ರತಿ ಮನೆಯಿಂದ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ತುಂಬಿಕೊಂಡು ಹೋಗುವ ಏಳು ಆಟೋ ಟಿಪ್ಪರ್‌ಗಳು ಪುರಸಭೆ ಮುಂಭಾಗ ಮೂರು ನಾಲ್ಕು ತಿಂಗಳಿಂದ ಕೆಟ್ಟು ನಿಂತಿದೆ. ಇದರಿಂದ ಪಟ್ಟಣದಲ್ಲಿ ಅಶುಚಿತ ಹೆಚ್ಚಾಗಿದ್ದು, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಪ್ರತಿ ವಾರ್ಡ್‌ಗೆ ವಾರಕ್ಕೊಂದು ದಿನ ಕಸ ತುಂಬಿಕೊಂಡು ಹೋಗಲು ಟ್ರಾೃಕ್ಟರ್ ಬರಲಿದ್ದು, ಪೌರಕಾರ್ಮಿಕರು ರಸ್ತೆಯಲ್ಲಿ ನಿಂತು ಪೀಪಿ ಊದುವ ಮೂಲಕ ನಿವಾಸಿಗಳಿಗೆ ಕಸ ತರುವಂತೆ ಸೂಚಿಸುತ್ತಿದ್ದಾರೆ. ಸ್ಟೇಡಿಯಂ ಬಡಾವಣೆ, ವಿಶ್ವನಾಥ, ಬೋವಿ ಕಾಲನಿ ಸೇರಿದಂತೆ ಕೆಲವು ವಾರ್ಡ್‌ಗಳಿಗೆ ಈ ವ್ಯವಸ್ಥೆಯೂ ಇಲ್ಲದಿರುವ ಹಿನ್ನೆಲೆಯಲ್ಲಿ ಖಾಲಿ ಜಾಗದಲ್ಲಿ ಕಸ ಸುರಿಯುವಂತಾಗಿದೆ. ಇದರಿಂದ ಕಸದ ರಾಶಿ ಹೆಚ್ಚಾಗಿ ಅನೈರ್ಮಲ್ಯ ಕಾಡತೊಡಗಿದೆ. ಅಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ. ಇದೆಲ್ಲದರ ನಡುವೆ ಕಸವನ್ನು ದನಕರುಗಳು, ಹಂದಿ, ನಾಯಿಗಳು ರಸ್ತೆ ತುಂಬೆಲ್ಲ ಹರಡುವುದರಿಂದ ಕೆಟ್ಟ ವಾಸನೆ ಹೆಚ್ಚಾಗಿದೆ. ಪರಿಣಾಮ ನಿವಾಸಿಗಳು, ದಾರಿಹೋಕರು, ವಾಹನ ಸಂಚಾರರು ಕಿರಿಕಿರಿ ಅನುಭವಿಸುವಂತಾಗಿದೆ. ಇಷ್ಟಾದರೂ ಕೂಡ ಪುರಸಭಾ ಆಡಳಿತ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದಿರುವುದು ಜನರ ಆಕ್ರೋಶವನ್ನು ಹೆಚ್ಚಾಗುವಂತೆ ಮಾಡಿದೆ.

    ಆರು ವರ್ಷಗಳ ಹಿಂದೆ ಸರ್ಕಾರದಿಂದ ಲಕ್ಷಾಂತರ ರೂ.ಅನುದಾನ ಬಿಡುಗಡೆಗೊಂಡಿದ್ದು, ಸ್ವಚ್ಛತೆ ಮತ್ತು ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ಸಲುವಾಗಿ ಏಳು ಆಟೋ ಟಿಪ್ಪರ್‌ಗಳನ್ನು ಪುರಸಭೆಯಿಂದ ಖರೀದಿಸಲಾಗಿತ್ತು. ಆದರೆ ಈಗ ಆ ವಾಹನಗಳೆಲ್ಲವೂ ಕೆಟ್ಟು ನಿಂತಿವೆ. ಆಟೋ ಟಿಪ್ಪರ್ಗಳನ್ನು ಖರೀದಿಸುವಾಗಲೇ ಉತ್ತಮ ಕಂಪನಿಯ ವಾಹನಗಳನ್ನು ಖರೀದಿಸಿದ್ದರೆ ಇನ್ನೂ ಅನೇಕ ವರ್ಷ ವಾಹನಗಳು ಕೆಲಸ ನಿರ್ವಹಿಸುತ್ತಿದ್ದವು ಎಂಬುದು ಹಲವರ ಅನಿಸಿಕೆ. ಆದರೆ ಅಂದಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಳಪೆ ಗುಣಮಟ್ಟದ ವಾಹನಗಳನ್ನು ಖರೀದಿ ಮಾಡಿದ್ದರಿಂದ ಇಂದು ಪುರಸಭೆ ವ್ಯಾಪ್ತಿಯ ಜನಸಾಮಾನ್ಯರು ಪರದಾಡು ಪರಿಸ್ಥಿತಿ ಎದುರಾಗಿದೆ.

    ಪುರಸಭೆ ಅಧೀನದಲ್ಲಿರುವ ಒಂದು ಟ್ರಾೃಕ್ಟರ್‌ನಿಂದ ಪ್ರಸ್ತುತ ಕಸ ಸಂಗ್ರಹಿಸಲಾಗುತ್ತಿದೆ. ಎಚ್.ಡಿ.ಕೋಟೆ ಪಟ್ಟಣ, ಹ್ಯಾಂಡ್ ಪೋಸ್ಟ್, ಎರಳ್ಳಿ, ಚಾಕಳ್ಳಿ, ಕೃಷ್ಣಾಪುರ ಸೇರಿದಂತೆ 23 ವಾರ್ಡ್‌ಗಳಿಂದ ಕಸವನ್ನು ತೆಗೆದುಕೊಂಡು ಹೋಗಲು ಸಾಧ್ಯವೇ ಎಂಬುದು ಸ್ಥಳೀಯರ ಪ್ರಶ್ನೆ. ಹೀಗಾಗಿಯೇ ಹಲವರು ರಸ್ತೆಯ ಬದಿಗಳಲ್ಲಿ ಕಸ ಸುರಿಯುವಂತಾಗಿದೆ. ಪಟ್ಟಣದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದ್ದ ಪುರಸಭೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ವಿಚಾರದಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಬೇಕಿದೆ. ಅಲ್ಲದೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಹಾಗೂ ತಾಲೂಕು ಆಡಳಿತ ೀ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಶಯ.

    ದುಪ್ಪಟ್ಟು ಹಣ ನೀಡಬೇಕಾದ ಅನಿವಾರ್ಯತೆ: ಪುರಸಭಾ ವ್ಯಾಪ್ತಿಯಲ್ಲಿ ಶೌಚಗೃಹ ಶುಚಿ ಮಾಡುವ ಯಂತ್ರ ಕೆಟ್ಟು ನಿಂತು ಎರಡು ವರ್ಷಗಳ ಕಳೆದಿದ್ದರೂ ಅದನ್ನು ಸರಿಪಡಿಸುವುದಾಗಲೀ ಆಥವಾ ಹೊಸದನ್ನು ಖರೀದಿ ಮಾಡುವ ಗೋಜಿಗೆ ಯಾರೊಬ್ಬರೂ ಹೋಗಿಲ್ಲ. ಪರಿಣಾಮ ಪುರಸಭಾ ವ್ಯಾಪ್ತಿಯ ನಿವಾಸಿಗಳು ಶೌಚಗೃಹ ಶುಚಿ ಮಾಡುವ ಯಂತ್ರವನ್ನು ಹುಣಸೂರು, ಸರಗೂರಿನಿಂದ ಕರೆತರೆಸಿ ಶುಚಿ ಮಾಡಿಸಬೇಕಾದ ಅನಿವಾರ್ಯತೆ ಇದೆ.

    ಪುರಸಭೆಯಲ್ಲಿದ್ದ ಶೌಚಗೃಹ ಶುಚಿಗೊಳಿಸುವ ವಾಹನಕ್ಕೆ ಒಂದರಿಂದ ಎರಡು ಸಾವಿರ ರೂ. ನೀಡಿ ಶುಚಿ ಮಾಡಿಸಲಾಗುತ್ತಿತ್ತು. ಆದರೆಈಗ ನೆರೆಯ ಸ್ಥಳೀಯ ಸಂಸ್ಥೆಗಳಿಗೆ ದುಪ್ಪಟ್ಟು ಹಣ ನೀಡಿ ಯಂತ್ರ ತರಿಸಿ ಶುಚಿ ಮಾಡಿಸಬೇಕಾದ ಅನಿವಾರ್ಯ ಬಂದೊದಗಿದೆ.
    ಹುಣಸೂರು ಮತ್ತು ಸರಗೂರು ಶುಚಿ ಯಂತ್ರಗಳು ಸರಿಯಾದ ಸಮಯಕ್ಕೆ ಸಿಗದೆ ಇರುವ ಕಾರಣ ಸಾರ್ವಜನಿಕರು ಹುಣಸೂರಿನಲ್ಲಿರುವ ಖಾಸಗಿ ಯಂತ್ರಕ್ಕೆ ಒಂದಕ್ಕಿಂತ ಎರಡರಷ್ಟು ಹಣ ನೀಡುವಂತಾಗಿದೆ. ಉಳ್ಳವರು ಹೆಚ್ಚು ಹಣ ನೀಡಿ ಶುಚಿ ಮಾಡಿಸಿಕೊಂಡರೆ ಬಡವರು, ಮಧ್ಯಮ ವರ್ಗದ ಜನರು ದುಪ್ಪಟ್ಟು ಹಣ ನೀಡಲಾಗದೆ ತೊಂದರೆಗೆ ಸಿಲುಕಿದ್ದಾರೆ.

    ಈ ಸಂಬಂಧ ಪುರಸಭಾ ಮುಖ್ಯಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ಗಮನಕ್ಕೆ ಹಲವಾರು ಬಾರಿ ತಂದರೂ ಸಮಸ್ಯೆ ಬಗೆಹರಿಸುವ ಮನಸ್ಸು ಮಾಡಿಲ್ಲ. ಜತೆಗೆ ಕೆಟ್ಟು ನಿಂತಿರುವ ವಾಹನವನ್ನು ಸರಿಪಡಿಸಲು ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

    ಪುರಸಭಾ ಮುಖ್ಯಾಧಿಕಾರಿಯ ನಿರ್ಲಕ್ಷ್ಯದಿಂದಾಗಿ ಪಟ್ಟಣದ ಜನರು ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಐದಾರು ವರ್ಷಗಳಿಂದ ಶೌಚಗೃಹ ಶುಚಿ ಮಾಡುವ ವಾಹನ ಕೆಟ್ಟು ನಿಂತ್ತಿದ್ದರೂ ಇದನ್ನು ಸರಿ ಪಡಿಸುವ ಕೆಲಸ ಮಾತ್ರ ಈವರೆಗೂ ಆಗಿಲ್ಲ.
    ಸಾರ್ವಜನಿಕರ ಅನುಕೂಲಕ್ಕೆ ಇಲ್ಲದಿರುವ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಆಡಳಿತ ಯಾವ ಪುರುಷಾರ್ಥಕ್ಕಾಗಿ ಬೇಕಾಗಿದೆ. ಜನಸಾಮಾನ್ಯರಿಗೆ ಮೂಲ ಸೌಕರ್ಯವನ್ನೇ ಒದಗಿಸದ ಪುರಸಭೆ ಆಡಳಿತ ಇನ್ನು ಅಭಿವೃದ್ಧಿ ಕೆಲಸಗಳನ್ನು ಮಾಡಲು ಹೇಗೆ ಸಾಧ್ಯ. ಅಲ್ಲದೆ ಪುರಸಭೆಯಲ್ಲಿ ಹೇಳುವವರು, ಕೇಳುವವರಿಲ್ಲದಂತಾಗಿದೆ.
    ಆಕಾಶ್ ಸ್ಟೇಡಿಯಂ ಬಡಾವಣೆ ನಿವಾಸಿ

    ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ಏಳು ಆಟೋ ಟಿಪ್ಪರ್‌ಗಳ ಪೈಕಿ 6 ಉಪಯೋಗಿಸಲು ಸಾಧ್ಯವಿಲ್ಲದ ರೀತಿಯಲ್ಲಿದೆ. 3 ಟ್ರಾೃಕ್ಟರ, 1 ಆಟೋ ಟಿಪ್ಪರ್ ಬಳಸಿ ಪಟ್ಟಣದ 23 ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. 3 ವಾಹನ ಖರೀದಿ ಮಾಡುವಂತೆ ಆಡಳಿತಾಧಿಕಾರಿಯಾಗಿರುವ ಹುಣಸೂರು ಉಪ ವಿಭಾಗಾಧಿಕಾರಿ ಗಮನಕ್ಕೆ ತರಲಾಗಿದೆ. ಮುಂದಿನ ವಾರ ಟೆಂಡರ್ ಕರೆದು ವಾಹನ ಖರೀದಿ ಮಾಡಲು ಕ್ರಮ ವಹಿಸಲಾಗುವುದು.
    ಸುರೇಶ್ ಮುಖ್ಯಾಧಿಕಾರಿ, ಎಚ್.ಡಿ.ಕೋಟೆ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts