More

    ರಾಜ್ಯದಲ್ಲಿ ಬಿಜೆಪಿಗೆ ಬಹುಮತ ತರಲು ಶ್ರಮಿಸಿ

    ಚಿತ್ರದುರ್ಗ: ಪಕ್ಷದ ಗೆಲುವಿನಲ್ಲಿ ಇತರೆಲ್ಲ ಕಾರ‌್ಯಕರ್ತರಂತೆ ನಿಮ್ಮ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸೋಷಿಯಲ್ ಮೀಡಿಯಾ ವಾರಿಯರ್ಸ್‌ ಆಗಿರುವ ನೀವು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಹುಮತದಿಂದ ಗೆಲ್ಲಿಸಲು ಶ್ರಮಿಸಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದರು.

    ರಾಜ್ಯ ಬಿಜೆಪಿ ಡಿಜಿಟಲ್ ಮಾಧ್ಯಮ ಪ್ರಕೋಷ್ಠ ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ದಾವಣಗೆರೆ ವಿಭಾಗದ ಚಿತ್ರದುರ್ಗ, ಮಧುಗಿರಿ, ದಾವಣಗೆರೆ ಹಾಗೂ ತುಮಕೂರು ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಡಿಜಿಟಲ್ ಮಾಧ್ಯಮ ಕಾರ‌್ಯಕರ್ತರಿಗೆ ಗುರುವಾರ ಏರ್ಪ ಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಎಲ್ಲರ ಬಳಿ ಇಂದು ಸೆಲ್‌ಪೋನ್‌ಗಳಿವೆ. ತೆರೆಯ ಹಿಂದಿದ್ದರೂ ಡಿಜಿಟಲ್ ಕಾರ‌್ಯಕರ್ತರ ಶ್ರಮ ಅಪಾರ. ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸುವ ಮೂಲಕ ಪ್ರಧಾನಿ ಆಶಯದಂತೆ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.

    ಜನ ತಿರಸ್ಕರಿಸಿದ್ದರೂ ಅನೈತಿಕ ಹೊಂದಾಣಿಕೆಯೊಂದಿಗೆ 2018ರಲ್ಲಿ ಮೊದಲ ಒಂದೂವರೆ ವರ್ಷ ಕಾಂಗ್ರೆಸ್-ಜೆಡಿಎಸ್ ಆಡಳಿತ ನಡೆಸಿತ್ತು. ನಂತರ ಬಂದ ಯಡಿಯೂರಪ್ಪ ಸರ್ಕಾರ ಹಿಂದೆಂದೂ ಕಾಣದಂತಹ ಕೋವಿಡ್ ಮಹಾಮಾರಿ ಹಾಗೂ ಅತಿವೃಷ್ಠಿಯನ್ನು ಸಮರ್ಥವಾಗಿ ಎದುರಿಸಿತು ಎಂದರು.

    ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ವಿರೋಧಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಇದಕ್ಕೆ ಸಮರ್ಥ ಉತ್ತರ ನೀಡಬೇಕಿದೆ ಎಂದು ಹೇಳಿದರು.
    ದಾವಣಗೆರೆ ವಿಭಾಗದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 22ನ್ನು ಗೆಲ್ಲಬೇಕಿದೆ. ಆ ಮೂಲಕ ಮೇ 13ರಂದು ರಾಜ್ಯದಲ್ಲಿ ಕಮಲ ಮತ್ತೆ ಅರಳಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಾಗಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ರಾಘವೇಂದ್ರ ನಾಗೂರ, 10 ವಿಭಾಗಗಳಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಹೇಳಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಡಿಜಿಟಿಲ್ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರ್,ಪ್ರಶಾಂತ್ ಜಾದವ್, ವಿನಯ್, ಮನೋಜ್ ಹೊಸಮನಿ, ರವಿಕಿರಣ್, ಕೋಟ್ರೇಶ್ ಗೌಡ, ಸಂತೋಷ್, ಸಂಪತ್‌ಕುಮಾರ್ ಇತರರು ಇದ್ದರು.

    ಮೀಸಲು ಹಂಚಿಕೆ ಪರ ಬ್ಯಾಟಿಂಗ್

    ಮೀಸಲು ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಕೆ.ಅಣ್ಣಾಮಲೈ ತಿಳಿಸಿದರು. ಸದಾಶಿವ ಆಯೋಗ ಹಾಗೂ ಸಿಎಂ ಕಮಿಟಿ ವರದಿ ಆಧರಿಸಿ ಮೀಸಲು ಹಂಚಿಕೆ ತೀರ್ಮಾನಿಸಿದ್ದಾರೆ. ಎಲ್ಲ ಸಮುದಾಯಗಳನ್ನು ಸಮನಾಗಿ ನೋಡಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ

    ಮುಸ್ಲಿಮರಿಗೂ ಅನ್ಯಾಯವಾಗಿಲ್ಲ. ಅವರಿಗಿದ್ದ ಶೇ.4 ಮೀಸಲನ್ನು ಇಡಬ್ಲುೃಎಸ್ (ಶೇ.10)ಗೆ ಶಿಫ್ಟ್ ಮಾಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೆ ವಿನಾಕಾರಣ ಆರೋಪಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಈ ಕುರಿತ ಅಸಮಾಧಾನಗಳನ್ನು ಸಿಎಂ ನಿವಾರಿಸಲಿದ್ದಾರೆ. ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸಿನ ಸೋಲು ಖಚಿತ ಎಂದು ಅಭಿಪ್ರಾಯಪಟ್ಟರು.

    ಶಿಕಾರಿಪುರ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಪೊಲೀಸರು ಕಾಂಗ್ರೆಸ್ ಮುಖಂಡರನ್ನು ಬಂಧಿಸಿದ್ದಾರೆ. ಎಸ್‌ಡಿಪಿಐ ಭಾರತವನ್ನು ಯಾವ ರೀತಿ ನೋಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಮೂರ‌್ನಾಲ್ಕು ಕಡೆ ಆ ಪಾರ್ಟಿ ಸ್ಪರ್ಧಿಸಬಹುದು ಆದರೆ ಗೆಲ್ಲುವುದಿಲ್ಲ. ಸಮೀಕ್ಷೆಗಳು ಯಾವುದೇ ಪಕ್ಷಗಳ ಪರ-ವಿರುದ್ಧ ಇದ್ದರೂ ಅಂತಿಮವಾಗಿ ಜನ ನಿರ್ಧರಿಸಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಹಜ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts