More

    ರೈಲ್ವೆ ಮೇಲ್ಸೇತುವೆ ದುರಸ್ತಿಯಾಗದಿದ್ರೆ ಅಪಾಯ

    ರೈಲ್ವೆ ಮೇಲ್ಸೇತುವೆ ದುರಸ್ತಿಯಾಗದಿದ್ರೆ ಅಪಾಯ

    ಚಿಕ್ಕಮಗಳೂರು: ಕಬ್ಬಿಣದ ಸರಳುಗಳು ಕಾಣುವಂತೆ ಕಿತ್ತುಹೋಗಿರುವ ರೈಲ್ವೆ ಮೇಲ್ಸೇತುವೆಯನ್ನು ದುರಸ್ತಿ ಪಡಿಸದಿದ್ದರೆ ಅನಾಹುತ ಕಟ್ಟಿಟ್ಟಬುತ್ತಿ. ನಗರ ಹೊರವಲಯದ ಹಿರೇಮಗಳೂರು, ಲಕ್ಷ್ಮೀಪುರ ಸುತ್ತಮುತ್ತ ಹೊಲಗದ್ದೆಗಳಿಗೆ ಸಂಪರ್ಕ ಕಲ್ಪಿಸಲು ನಿರ್ವಿುಸಿರುವ ರೈಲ್ವೆ ಮೇಲ್ಸೇತುವೆಯಲ್ಲಿ ಸರಕು ಸಾಗಣೆ ವಾಹನಗಳ ಸಂಚಾರ ಹೆಚ್ಚಾದ ಪರಿಣಾಮ ಕಾಂಕ್ರೀಟ್ ಪದರ ಕಿತ್ತುಹೋಗಿ ರಾಡ್​ಗಳು ಕಾಣಿಸುತ್ತಿವೆ.

    ರೈಲು ಸಂಚಾರ ಆರಂಭವಾದಾಗ ಲಕ್ಷ್ಮೀಪುರದ ಜಮೀನಿಗೆ 1.5 ಕಿಮೀ ಸುತ್ತಿಬಳಸಿಕೊಂಡು ಹೋಗಬೇಕಿತ್ತು. ರೈತರು ಜಮೀನು ಕೆಲಸಕ್ಕೆ ತೆರಳಲು ಜಾನುವಾರುಗಳೊಂದಿಗೆ ರೈಲ್ವೆ ಹಳಿ ದಾಟುವ ಪರಿಸ್ಥಿತಿ ಇತ್ತು. ಈ ವೇಳೆ ರೈಲು ಸಂಚರಿಸಿದರೆ ಜನ-ಜಾನುವಾರುಗಳಿಗೆ ಅಪಾಯವಾಗುತ್ತದೆ ಎಂಬ ಆತಂಕ ಮನೆಮಾಡಿತ್ತು. ರೈಲ್ವೆ ಸರಕು ಸಾಗಣೆ ಲಾರಿಗಳು ಕೋಟೆಯ ಕಿರಿದಾದ ರಸ್ತೆಯಲ್ಲಿ ಹಾದು ರೈಲ್ವೆ ನಿಲ್ದಾಣಕ್ಕೆ ತಲುಪಬೇಕಿತ್ತು. ಈ ಸಮಸ್ಯೆಗಳ ಬಗ್ಗೆ ಹಿರೇಮಗಳೂರು ಗ್ರಾಮಸ್ಥರು ಹಾಗೂ ರೈತರು ರೈಲ್ವೆ ಇಲಾಖೆಗೆ ಒತ್ತಡ ಹಾಕಿದ್ದರಿಂದ ಮೇಲ್ಸೇತುವೆ ನಿರ್ವಿುಸಲಾಗಿತ್ತು.

    ರೈಲಿನ ಸರಕು ಸಾಗಿಸಲು ಇಲಾಖೆ ಸೂಚಿಸಿದ ಮಿತಿಯಲ್ಲಿ ಆ ವಾಹನ ಸಾಗುತ್ತವೆ. ಈ ರಸ್ತೆಯಲ್ಲಿ ಮರಳು, ಜೆಲ್ಲಿ ಟಿಪ್ಪರ್​ಗಳ ಸಂಚಾರ ಹೆಚ್ಚಾಗಿದೆ. ಮೈಸೂರು, ಹಾಸನ ಮಾರ್ಗದಿಂದ ನಗರ ಹೊರವಲಯದ ಗೌಡನಹಳ್ಳಿ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಸಾಗುವ ಲಾರಿಗಳಲ್ಲಿ ದುಪ್ಪಟ್ಟು ಮರದ ದಿಮ್ಮಿಗಳನ್ನು ತುಂಬಿಕೊಂಡು ತೆರಳುತ್ತಿರುವುದರಿಂದ ಸೇತುವೆ ಮತ್ತು ಈ ಭಾಗದ ರಸ್ತೆ ಗುಂಡಿ ಬಿದ್ದು ಹಾಳಾಗಿದೆ ಎಂಬುದು ಗ್ರಾಮಸ್ಥರ ದೂರು.

    ಮಳೆಗಾಲವಾದ್ದರಿಂದ ಮೇಲ್ಸೇತುವೆ ಗುಂಡಿಗಳಲ್ಲಿ ನೀರು ಸಂಗ್ರಹವಾಗಿರುತ್ತದೆ. ರೈತರು ಬರಿಗಾಲಿನಲ್ಲಿ ಹೊಲಗದ್ದೆಗಳಿಗೆ ಜಾನುವಾರುಗಳೊಂದಿಗೆ ತೆರಳುವಾಗ ಕಬ್ಬಿಣದ ಸರಳುಗಳು ಕಾಲಿಗೆ ತಾಕಿದರೆ ಅನಾಹುತ ನಿಶ್ಚಿತ. ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕದಿದ್ದರೆ ಸೇತುವೆಗೆ ಅಪಾಯ ತಂದೊಡ್ಡಬಹುದೆಂಬ ಆತಂಕ ಇದೆ ಎಂಬುದು ರೈತ ವೀರೇಶ್ ಅಭಿಮತ.

    ಮೇಲ್ಸೇತುವೆಯಲ್ಲಿ ಸರಳು ಕಾಣುತ್ತಿರುವುದಾಗಿ ವಿಭಾಗೀಯ ಇಂಜಿನಿಯರ್ ನನ್ನ ಗಮನಕ್ಕೆ ತಂದಿದ್ದಾರೆ. ಮೇಲ್ಪದರ ಹಾನಿಯಾಗಿದ್ದು, ಎರಡು ದಿನಗಳಲ್ಲಿ ಸರಿಪಡಿಸಲಾಗುತ್ತದೆ. ರೈಲ್ವೆ ಸಂಪರ್ಕ ರಸ್ತೆಯಾಗಿರುವುದರಿಂದ ಭಾರಿ ವಾಹನ ಸಂಚಾರ ನಿರ್ಬಂಧಿಸಬೇಕಿದೆ. ದುಪ್ಪಟ್ಟು ಸರಕು ತುಂಬಿದ ಖಾಸಗಿ ವಾಹನಗಳು ಓಡಾಡುತ್ತಿರುವ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೈಋತ್ಯ ರೈಲ್ವೆ ವಿಭಾಗದ ಕಾರ್ಯಪಾಲಕ ಅಭಿಯಂತ ಪಿ.ಬಿ.ಮಂಜುನಾಥಪ್ಪ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts