More

    ಮಳೆ ಬಂದರೆ ದೇವರೇ ಗತಿ

    ಮನು ಬಳಂಜ ಬೆಳ್ತಂಗಡಿ
    ಬ್ರಿಟಿಷರ ಕಾಲದ ಗಾಡಿ ರಸ್ತೆಯಾಗಿದ್ದ ಮಿತ್ತಬಾಗಿಲು ಗ್ರಾಮದ ಕಲ್ಲಂಡ- ಕಡ್ತಿಮೇರ್ ಸಂಪರ್ಕಕ್ಕಿದ್ದ ಏಳುವರೆ ಹಳ್ಳಕ್ಕೆ ಅಡ್ಡಲಾಗಿ ಸಂಪರ್ಕ ಸೇತುವೆ ನಿರ್ಮಾಣವಾಗದೆ, ಮಳೆಗಾಲ ಸನಿಹವಾಯಿತೆಂದರೆ ಕಡ್ತಿಕುಮೇರ್ ಸುತ್ತಮುತ್ತಲ 40 ಮನೆಗಗಳಿಗೆ ದ್ವೀಪದ ವಾಸ ಎದುರಾಗುತ್ತಿದೆ.
    ಸೇತುವೆ ಅವಶ್ಯಕತೆ ಕುರಿತು ಊರಿನ ಮಂದಿ ಹಲವು ವರ್ಷಗಳಿಂದ ಸ್ಥಳೀಯಾಡಳಿತ ಸೇರಿದಂತೆ ಅಧಿಕಾರಿ ವರ್ಗದ ಹಿಂದೆ ಬಿದ್ದರೂ ಫಲಿಸಲಿಲ್ಲ. ಕಳೆದ ಆಗಸ್ಟ್‌ನಲ್ಲಿ ಸುರಿದ ಮಹಾಮಳೆಗೆ ಏಳುವರೆ ಹಳ್ಳ ಮತ್ತಷ್ಟು ವಿಸ್ತಾರವಾಗಿದೆ. ಪ್ರತಿ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಸ್ಥಳೀಯರೇ ಕಾಲುಸಂಕ ನಿರ್ಮಿಸುತ್ತಿದ್ದರು. ಈ ವರ್ಷ ಹಳ್ಳ ವಿಸ್ತಾರವಾಗಿ ಅದೂ ಸಾಧ್ಯವಾಗದಂತಾಗಿದೆ.

    40 ಮನೆಗಳಿಗೆ ಸಂಪರ್ಕ: ಮಿತ್ತಬಾಗಿಲು- ಮಲವಂತಿಗೆ ಗ್ರಾಮದ ಮಧ್ಯಭಾಗದಲ್ಲಿ ಏಳುವರೆ ಹಳ್ಳ ಹರಿಯುತ್ತಿದೆ. 167 ಸರ್ವೇ ನಂಬರ್‌ನಲ್ಲಿರುವ ಕಲ್ಲಂಡ ಎಂಬಲ್ಲಿ ಸೇತುವೆ ನಿರ್ಮಾಣದ ಬೇಡಿಕೆ ಇಡಲಾಗಿದೆ. ಬೇಸಿಗೆಯಲ್ಲಿ ಅಗತ್ಯ ವಸ್ತು ಸಾಗಾಟಕ್ಕೆ ವಾಹನಗಳು ಇದೇ ಹೊಳೆಯಾಗಿ ಸಾಗಬೇಕು. ಆದರೆ ಮಳೆಗಾಲದಲ್ಲಿ ವಿಪರೀತ ಮಳೆಯಾದರೆ ದೇವರೇ ಗತಿ. ಆಸ್ಪತ್ರೆ ಭೇಟಿ, ಕೃಷಿ ಚಟುವಟಿಕೆ ಸೇರಿದಂತೆ ಹೈನುಗಾರರಿಗೆ ಸಾಗಲು, ವಿದ್ಯಾರ್ಥಿಗಳು ಶಾಲೆಗೆ ತೆರಳಲು ನೆರೆ ನೀರು ಇಳಿದ ಬಳಿಕ ಸಂಚಾರ ಆರಂಭಿಸಬೇಕು. ಶೀಘ್ರ ಸೇತುವೆ ನಿರ್ಮಾಣವಾದಲ್ಲಿ ಮಿತ್ತಬಾಗಿಲು, ಮಲವಂತಿಗೆ ಗ್ರಾಮ ವ್ಯಾಪ್ತಿಗೆ ಬರುವಂತೆ ಕಡ್ತಿಕುಮೇರು, ಬದನಾಜೆ, ಎಲ್ಯರಕಂಡ, ಮಕ್ಕಿ ಪರ್ಲ, ಕೇದೆ, ಕೋಡಿ, ಅಮೈ, ಮೂಡಲ, ಮಲೆಜೋಡಿ, ಬಾನೊಟ್ಟು, ಕಕ್ಕೆನೇಜಿ ಸುತ್ತಮುತ್ತ ಮಂದಿಯ ಬಹುವರ್ಷಗಳ ಬೇಡಿಕೆ ಫಲಿಸಿದಂತಾಗಲಿದೆ.

    ಪ್ರವಾಸೋದ್ಯಮ ಹಾದಿ
    ಒಂದೆಡೆ ರಾಷ್ಟ್ರೀಯ ಉದ್ಯಾನವನ ಮತ್ತೊಂದು ಭಾಗದಲ್ಲಿ ರಮಣೀಯ ಸರಣಿ ಜಲಪಾತಗಳು, ಅದರ ಮಧ್ಯೆ 150 ಎಕರೆಗೂ ಅಧಿಕ ಹಸಿರೊದ್ದ ಕೃಷಿ ಪ್ರದೇಶ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಹೇಳಿ ಮಾಡಿಸಿದಂತಿದೆ. ಎರ್ಮಾಯಿ ಜಲಪಾತಕ್ಕೆ ಸಾಗಲು ಇದೇ ರಸ್ತೆಯನ್ನು ಅವಲಂಬಿಸಿದೆ. ಇಲ್ಲಿ ಕಿರು ಸೇತುವೆ ನಿರ್ಮಾಣಗೊಂಡರೆ ಇಲ್ಲಿನ ಮಂದಿಗೆ ಕೃಷಿ ಸಲಕರಣೆ, ಹೈನುಗಾರರು, 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

    ಹಲವು ವರ್ಷಗಳಿಂದ ಸ್ಥಳೀಯರೇ ಕಾಲು ಸಂಕ ನಿರ್ಮಿಸಿ ಮಳೆಗಾಲದಲ್ಲಿ ದಾಟುತ್ತಿದ್ದೆವು. ಕಳೆದ ವರ್ಷ ಪ್ರವಾಹಕ್ಕೆ ಹಳ್ಳ ನದಿ ಸ್ವರೂಪ ಪಡೆದಿದೆ. ಕಿರು ಸೇತುವೆ ನಿರ್ಮಾಣಗೊಂಡಲ್ಲಿ 40 ಮನೆಗಳು ಇದರ ಪ್ರಯೋಜನ ಪಡೆಯಲಿದೆ.
    ಅಶೋಕ ಕಡ್ತಿಕುಮೇರ್, ಸ್ಥಳೀಯರು

    ಕಲ್ಲಂಡದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಕಾಲುಸಂಕ ನಿರ್ಮಾಣಕ್ಕೆ ಗ್ರಾಪಂನಿಂದ ಮೂರು ಸಾವಿರ ರೂ. ವೇತನ ನೀಡುತ್ತಿತ್ತು. ಈಗಾಗಲೆ ಏಳುವರೆ ಹಳ್ಳ ಕುಕ್ಕಾವು ಸಮೀಪದ ಸೇತುವೆಗೆ 25 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧವಾಗಿದೆ. ಕಲ್ಲಂಡ ಸೇತುವೆಗೂ ಶೀಘ್ರ ಅನುದಾನ ಒದಗಿಸುವಂತೆ ಶಾಸಕರ ಬಳಿ ಮನವಿ ಮಾಡಲಾಗುವುದು.
    ಜಯಕೀರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಿತ್ತಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts