More

    ಹಾವೇರಿ ಡಿಡಿಪಿಐ ಕಚೇರಿಯಲ್ಲಿ ಲಂಚದ ಹಾವಳಿ

    ಹಾವೇರಿ: ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಮಾಡಬೇಕಾದ ಮಹತ್ತರವಾದ ಸ್ಥಾನದಲ್ಲಿದ್ದ ಶಿಕ್ಷಣ ಇಲಾಖೆಯ ಉಪನಿರ್ದೇಶಕರೇ ನಿವೃತ್ತ ಶಿಕ್ಷಕರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ದಾಳಿಗೆ ಒಳಗಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಡಿಡಿಪಿಐ ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿರುವ ಆರೋಪಕ್ಕೆ ಇದು ಕೈಗನ್ನಡಿಯಂತಿದೆ.

    ರಟ್ಟಿಹಳ್ಳಿಯ ನಿವೃತ್ತ ಶಿಕ್ಷಕ ಮಹಮ್ಮದ ಜಾಫರ್ ಖಾನ್ ಲೋದಿ ಎಂಬುವವರ ನಿವೃತ್ತಿ ವೇತನದ ಫೈಲ್​ಅನ್ನು ಎಜಿ ಕಚೇರಿಗೆ ರವಾನಿಸಲು ಡಿಡಿಪಿಐ ಅಂದಾನಪ್ಪ ವಡಗೇರಿ ಹಾಗೂ ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜು. 21ರಂದು ಸಂಜೆ ಕಚೇರಿಯಲ್ಲಿ 7 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಇಬ್ಬರೂ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

    ಅಂದಾನಪ್ಪ ವಡಗೇರಿ ಈ ಹಿಂದೆ ನಾಲ್ಕು ವರ್ಷಗಳ ಕಾಲ ಜಿಲ್ಲೆಯಲ್ಲಿ ಡಿಡಿಪಿಐ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಬಳ್ಳಾರಿಗೆ ವರ್ಗಗೊಂಡಿದ್ದರು. ನಂತರ ಬಂದಿದ್ದ ಡಿಡಿಪಿಐ ಜಗದೀಶ್ವರ ಅವರ ಮೇಲೂ ಕೆಲ ಆಪಾದನೆಗಳಿದ್ದವು. 2022ರ ಏಪ್ರಿಲ್​ನಲ್ಲಿ ಎಸಿಬಿ ಪೊಲೀಸರು ಡಿಡಿಪಿಐ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಡಿಡಿಪಿಐ ಬಳಿ ಅನಧಿಕೃತವಾಗಿ 50 ಸಾವಿರ ರೂ. ಹಾಗೂ ಸಿಬ್ಬಂದಿ ಬಳಿಯೂ ಅನಧಿಕೃತ ಹಣ ಪತ್ತೆಯಾಗಿತ್ತು.

    ಈ ಕುರಿತು ಪರಿಶೀಲಿಸಲು ಇತ್ತೀಚೆಗೆ ಡಿಡಿಪಿಐ ಕಚೇರಿಗೆ ಹೋಗಿದ್ದ ಲೋಕಾಯುಕ್ತ ಪೊಲೀಸರ ಕೈಗೆ ಸಿಗದಂತೆ ಜಗದೀಶ್ವರ ತಪ್ಪಿಸಿಕೊಂಡಿದ್ದರು. ಕಾರಣ ಲೋಕಾಯುಕ್ತ ಪೊಲೀಸರು ಡಿಡಿಪಿಐ ಕಚೇರಿ ಬಾಗಿಲಿಗೆ ನೋಟಿಸ್ ಅಂಟಿಸಿದ್ದ ಪ್ರಸಂಗವೂ ನಡೆದಿತ್ತು. ಇದಾದ ಬಳಿಕ ಕಳೆದ ತಿಂಗಳು ಜಗದೀಶ್ವರ ವರ್ಗಾವಣೆಗೊಂಡಿದ್ದಾರೆ. 15 ದಿನಗಳ ಹಿಂದೆ ಮತ್ತೆ ಜಿಲ್ಲೆಗೆ ಬಂದಿರುವ ಡಿಡಿಪಿಐ ಅಂದಾನಪ್ಪ ಈಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ.

    ಈ ಎರಡೂ ಪ್ರಕರಣಗಳು ಅಧಿಕೃತವಾಗಿ ಬೆಳಕಿಗೆ ಬಂದಿದ್ದು, ಮೇಲಧಿಕಾರಿಗಳಿಗೆ ಹೆದರಿ ಬೆಳಕಿಗೆ ಬಾರದ ಅನೇಕ ಪ್ರಕರಣಗಳು ಮರೆಯಾಗಿರುವ ಆರೋಪವಿದೆ. ಡಿಡಿಪಿಐ ಕಚೇರಿಗೆ ನಿತ್ಯವೂ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಖಾಸಗಿ ಶಾಲೆ, ಪ್ರೌಢಶಾಲೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿ ವಿವಿಧ ಕೆಲಸಗಳಿಗೆ ಬರುತ್ತಾರೆ. ಹೊಸ ಶಾಲೆಗಳಿಗೆ ಅನುಮತಿ, ನವೀಕರಣ, ನಿವೃತ್ತಿ ಹಣ, ಪಿಂಚಣಿ ಪಡೆಯಲು, ಮತ್ತಿತರ ಕಾರಣಗಳಿಗಾಗಿ ಆಗಮಿಸುತ್ತಾರೆ. ಹಣ ಕೊಟ್ಟರೆ ಮಾತ್ರ ವೇಗವಾಗಿ ಕೆಲಸ ನಡೆಯುತ್ತದೆ. ಉಳಿದವರ ಕೆಲಸ ತಡವಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿವೆ.

    ಈ ಕುರಿತು ಜಿಲ್ಲಾಡಳಿತ, ಸರ್ಕಾರ ಮುತುವರ್ಜಿ ವಹಿಸಬೇಕು. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ದಕ್ಷ ಡಿಡಿಪಿಐ ನೇಮಿಸಬೇಕು. ಡಿಡಿಪಿಐ ಕಚೇರಿಗೆ ಅಂಟಿರುವ ಕಳಂಕವನ್ನು ತೊಲಗಿಸಬೇಕು ಎಂಬುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.

    ಹಣಕಾಸಿನ ಹರಿವು ಹೆಚ್ಚಾಗಿರುವ ಇಲಾಖೆಗಳಲ್ಲಿ ಲೋಕಾಯುಕ್ತರ ದಾಳಿ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಶಿಕ್ಷಣ ಇಲಾಖೆಯಲ್ಲಿ ಡಿಡಿಪಿಐ ಲಂಚ ಪಡೆದದ್ದು ಹೇಯ ಕೃತ್ಯ. ಇದೇ ರೀತಿ ಮುಂದುವರಿದರೆ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಡುತ್ತದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ಕೊಡಿಸಬೇಕು. ದಕ್ಷ ಅಧಿಕಾರಿಯನ್ನು ಜಿಲ್ಲೆಗೆ ನೇಮಿಸಬೇಕು.

    | ಕೆ.ಎನ್. ಪಾಟೀಲ, ಸಿಂಡಿಕೇಟ್ ಮಾಜಿ ಸದಸ್ಯ, ಕರ್ನಾಟಕ ಜಾನಪದ ವಿವಿ

    ಎರಡು ದಿನದಲ್ಲಿ ಜಿಲ್ಲೆಯ ಎಲ್ಲ ಬಿಇಒ ಹಾಗೂ ಡಿಡಿಪಿಐ ಕಚೇರಿ ಅಧಿಕಾರಿಗಳ ಸಭೆ ನಡೆಸಲಾಗುವುದು. ನಿವೃತ್ತಿ ಆದ ಶಿಕ್ಷಕರೆಷ್ಟು, ಎಷ್ಟು ಜನರ ಪಿಂಚಣಿ, ಇತರ ಹಣ ಬಾಕಿ ಇದೆ ಎಂಬಿತ್ಯಾದಿ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು.

    | ರಘುನಂದನಮೂರ್ತಿ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts