More

    ಸಮಸ್ಯೆ ಪರಿಹರಿಸುವಲ್ಲಿ ಬ್ರಾಹ್ಮಣರು ಸಿದ್ಧಹಸ್ತರು: ಬಿಎಸ್‌ವೈ

    ಶಿವಮೊಗ್ಗ: ಹಿಂದು ಧರ್ಮ ಸನಾತನವಾದುದು. ಅಷ್ಟೇ ಪುರಾತನವಾಗಿರುವುದು ಬ್ರಾಹ್ಮಣ ಸಮಾಜ. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ವೇದ, ಉಪನಿಷತ್ತಿನಲ್ಲಿ ಪರಿಹಾರವಿದೆ. ಇದನ್ನು ಬಳಸಿಕೊಂಡು ವಿಪ್ರ ಸಮಾಜ ಎಲ್ಲ ಸಮಸ್ಯೆಗೂ ಪರಿಹಾರ ಸೂಚಿಸುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.

    ವಿಪ್ರ ಸ್ನೇಹ ಬಳಗದಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬ್ರಾಹ್ಮಣರು ಸಂಖ್ಯೆಯಲ್ಲಿ ಮಾತ್ರ ಅಲ್ಪಸಂಖ್ಯಾತರು. ಆದರೆ ಸಮಸ್ಯೆಗೆ ಪರಿಹಾರ ಸೂಚಿಸುವಲ್ಲಿ ಸಿದ್ಧಹಸ್ತರು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಬ್ರಾಹ್ಮಣರು ಬಹಳ ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಇದನ್ನು ಕೇಂದ್ರ ಸರ್ಕಾರ ಈಡೇರಿಸಿದೆ ಎಂದರು.
    ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳನ್ನು ಸಮಾನವಾಗಿ ಗೌರವಿಸಲಾಗಿದೆ. ಎಲ್ಲ ಸಮಾಜಕ್ಕೂ ಸಮುದಾಯ ಭವನ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಶಿವಮೊಗ್ಗಕ್ಕೆ ತರುವಲ್ಲಿ ಬಿ.ವೈ.ರಾಘವೇಂದ್ರ ಶ್ರಮಿಸಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಅಭಿವೃದ್ಧಿ ಹಾಗೂ ಆಡಳಿತದ ಸ್ಥಿರತೆ ಇಂದಿನ ಆದ್ಯತೆಯಾಗಿದೆ ಎಂದು ಹೇಳಿದರು.
    ಪರಿಶ್ರಮದಿಂದ ರಾಜಕೀಯ ಸಾಧನೆ ಮಾಡಿದವರು ಬಿ.ಎಸ್.ಯಡಿಯೂರಪ್ಪ. ಅವರು ಹಿಂದುತ್ವದ ರಕ್ಷಣೆಗಾಗಿ ಶ್ರಮಿಸಿದ್ದಾರೆ. 45 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಸದೃಢವಾಗಿ ಬೆಳೆಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
    ಯಡಿಯೂರಪ್ಪ ಅವರನ್ನು ಮುಂಗೋಪಿ ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ಅವರದ್ದು ಸಾತ್ವಿಕ ಕೋಪ. ಅವರಿಗೆ ಕೋಪ ಬರುವುದು ನಿಜ. ಹಾಗೆಂದು ಅವರು ದ್ವೇಷ ಸಾಧನೆ ಮಾಡಿದವರಲ್ಲ. ಏನಾದರೂ ಮಾಡಬೇಕೆಂದು ತೀರ್ಮಾನಿಸಿದರೆ ನಿಶ್ಚಿತವಾಗಿಯೂ ಅದನ್ನು ಸಾಕಾರಗೊಳಿಸುವ ಛಲಗಾರ ಎಂದು ಬಣ್ಣಿಸಿದರು.
    ರಾಷ್ಟ್ರೀಯತೆಗೆ ದೊಡ್ಡ ಶಕ್ತಿ: ರಾಷ್ಟ್ರೀಯತೆಗೆ ದೊಡ್ಡ ಶಕ್ತಿ ನೀಡಿದ್ದು ವಿಪ್ರ ಸಮಾಜ. ದೇಶ ಹಿತಕ್ಕಾಗಿ ಬದುಕುತ್ತಿರುವ ಸಮಾಜವಿದು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂದು ಭಾವಿಸಿ ಬದುಕು ಸಾಗುತ್ತಿರುವವರು ಬ್ರಾಹ್ಮಣರು. ಶಿವಮೊಗ್ಗ ಕ್ಷೇತ್ರದಲ್ಲಿ ನಿರಂತರವಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲುವಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ದೊಡ್ಡದಿದೆ. ಇಂದು ಅಂತಹ ಸಮಾಜದಿಂದ ಅಭಿವೃದ್ಧಿ ಹರಿಕಾರರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರನ್ನು ಅಭಿನಂದಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
    ವಿಶ್ವಾಸ, ನಂಬಿಕೆ ಉಳಿಸಿಕೊಳ್ಳುತ್ತೇನೆ: ವಿಪ್ರ ಸಮಾಜ ನನ್ನ ಮೇಲೆ ಇರಿಸಿರುವ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಭವಿಷ್ಯದಲ್ಲಿ ಶಿವಮೊಗ್ಗಕ್ಕೆ ಏನು ಕೆಲಸಗಳಾಗಬೇಕು ಎಂಬುದನ್ನು ಇಂದಿನ ಸಭೆಯಲ್ಲಿ ಅನೇಕರು ಪ್ರಸ್ತಾಪಿಸಿದ್ದಾರೆ. ಅದನ್ನು ಅನುಷ್ಠಾನಗೊಳಿಸಲು ಮುಂದೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
    ರಾಜ್ಯಕ್ಕೆ ಸಂದೇಶ ರವಾನೆಯಾಗಲಿ: ಇಂದು ಶಿವಮೊಗ್ಗದಿಂದ ಇಡೀ ರಾಜ್ಯಕ್ಕೆ ಈ ಕಾರ್ಯಕ್ರಮದ ಮೂಲಕ ಒಂದು ಸಂದೇಶ ರವಾನೆಯಾಗಬೇಕಿದೆ. ಬ್ರಾಹ್ಮಣರು ಸನಾತನ ಧರ್ಮವನ್ನು ರಕ್ಷಣೆ ಮಾಡುವವರಿಗೆ ಬೆಂಬಲ ನೀಡಿದ್ದಾರೆಯೇ ಹೊರತು ಜಾತಿಯನ್ನು ಗಮನಿಸಲ್ಲ. ಮುಂದಿನ ವಾರ ಚುನಾವಣೆ ಘೋಷಣೆಯಾಗುವ ಸಂಭವವಿದೆ. ಹೀಗಾಗಿ ಸ್ಪಷ್ಟ ಸಂದೇಶ ರವಾನೆಯಾಗಬೇಕಿದೆ ಎಂದು ಅಶೋಕ ಹಾರ‌್ನಹಳ್ಳಿ ತಿಳಿಸಿದರು. 370ನೇ ವಿಧಿ ರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಮ್ಮು, ಕಾಶ್ಮೀರಕ್ಕೆ ತೆರಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲಿ ಕಲ್ಲೆಸೆಯುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಮೋದಿಯನ್ನು ಹಿಂದುಗಳ ಪರಮೋಚ್ಚ ನಾಯಕ ಎಂದು ಜಗತ್ತೇ ಗುರುತಿಸುತ್ತಿದೆ. ಶೀಘ್ರದಲ್ಲೇ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ಇನ್ನೂ ಅನೇಕ ಕೆಲಸಗಳು ನಡೆಯಬೇಕಿದೆ ಎಂದರು.
    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ‌್ನಹಳ್ಳಿ, ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್, ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್.ಪದ್ಮನಾಭ ಭಟ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಪ್ರಮುಖರಾದ ಎ.ಜೆ.ರಾಮಚಂದ್ರ, ಎಸ್.ದತ್ತಾತ್ರಿ, ಡಾ. ಪಿ.ನಾರಾಯಣ್, ಡಾ. ಕೆ.ಆರ್.ಶ್ರೀಧರ್, ವೆಂಕಟೇಶ ರಾವ್ ಮುಂತಾದವರಿದ್ದರು.

    ಬಿವೈಆರ್ ಟಾಪ್ ಸಂಸದ
    ದೇಶದಲ್ಲಿ 10 ಅತ್ಯುತ್ತಮ ಸಂಸದರನ್ನು ಆಯ್ಕೆ ಮಾಡಿದರೆ ಅದರಲ್ಲಿ ಖಂಡಿತವಾಗಿಯೂ ಬಿ.ವೈ.ರಾಘವೇಂದ್ರ ಹೆಸರು ಇರುತ್ತದೆ. ಅವರು ಅತ್ಯುತ್ತಮ ಕೆಲಸಗಾರ. ನಿರಂತರವಾಗಿ ಕೇಂದ್ರ ಸಚಿವರನ್ನು ಭೇಟಿಯಾಗಿ ತನ್ನ ಕ್ಷೇತ್ರಕ್ಕೆ ಏನಾದರೂ ಯೋಜನೆ ತರುವಲ್ಲಿ ರಾಘವೇಂದ್ರ ಸಿದ್ಧಹಸ್ತರು. ನನ್ನನ್ನು ಆಯ್ಕೆ ಮಾಡಿದ ಜನರಿಗೆ ಏನಾದರೂ ಕೊಡುಗೆ ನೀಡಲೇಬೇಕೆಂಬ ತುಡಿತ ಅವರ ಮನಸ್ಸಿನಲ್ಲಿ ಸದಾ ತುಂಬಿರುತ್ತದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts