More

    ನೆಮ್ಮದಿ ಕಸಿದ ರಸ್ತೆ ಧೂಳು: ಬ್ರಹ್ಮಾವರ – ಚೇರ್ಕಾಡಿ ರಸ್ತೆ ಕಾಮಗಾರಿ ನಿಧಾನಗತಿ

    ಶಿವರಾಮ ಆಚಾರ್ಯ ಬಂಡೀಮಠ, ಬ್ರಹ್ಮಾವರ

    ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 28 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಡೆಯುತ್ತಿರುವ ಬ್ರಹ್ಮಾವರ – ಚೇರ್ಕಾಡಿ ರಾಜ್ಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದರೆ, ಕಾಮಗಾರಿಯಿಂದ ಸೃಷ್ಟಿಯಾಗುವ ಧೂಳು ರಸ್ತೆ ಬದಿ ಮನೆಯ ಜನರ ನೆಮ್ಮದಿ ಕಿತ್ತುಕೊಳ್ಳುತ್ತಿದೆ.

    ರಸ್ತೆ ನಿರ್ಮಾಣಕ್ಕೆ ಮೊದಲು ಮರಗಳ ತೆರವಿಗೆ ನ್ಯಾಯಾಲಯದ ತಡೆಯಾಜ್ಞೆಯಿಂದ ವಿಳಂಬವಾಗಿತ್ತು. ಮರಗಳ ತೆರವಿನ ಬಳಿಕ ಬ್ರಹ್ಮಾವರದಿಂದ ಚಾಂತಾರು, ಕುಂಜಾಲು ತನಕ ಒಂದು ಭಾಗ ಅಗೆದು ಮತ್ತೊಂದು ಭಾಗ ವಾಹನ ಸಂಚಾರಕ್ಕೆ ಅನುವು ಮಾಡಿರುವುದು ಅವಾಂತರಕ್ಕೆ ಕಾರಣವಾಗಿದೆ. ವಾಹನಗಳ ಅನಿಯಮಿತ ಸಂಚಾರದಿಂದ ಬರುವ ಧೂಳು ರಸ್ತೆ ಬದಿಯಲ್ಲಿರುವ ಮನೆಗಳು, ಅಂಗಡಿಗಳು ಬಾಗಿಲು ತೆರೆಯದಂತಾಗಿದೆ. ಗುತ್ತಿಗೆದಾರರು ರಸ್ತೆಗೆ ನೀರು ಸಿಂಪಡಿಸಿದರೂ ಧೂಳಿನ ನಿಯಂತ್ರಣ ಆಗುತ್ತಿಲ್ಲ.

    ಬ್ರಹ್ಮಾವರದಿಂದ ಕುಂಜಾಲು ಪ್ರದೇಶ ಹೆಚ್ಚಿನ ಧೂಳಿನ ಸಮಸ್ಯೆ ಎದುರಿಸುತ್ತಿದ್ದು, ಕೆಲವರು ಸುತ್ತು ಬಳಸಿ ಕುಂಜಾಲಿನಿಂದ ಮಟಪಾಡಿ, ಬಲ್ಜಿರಸ್ತೆ ಮೂಲಕ ಇಲ್ಲವೇ ಕೃಷಿಕೇಂದ್ರ ಮಾರಿಕಟ್ಟೆ ಮೂಲಕ ಬ್ರಹ್ಮಾವರಕ್ಕೆ ಬರುತ್ತಾರೆ. ಧೂಳು ತಡೆಯಲಾಗದೆ ಕೆಲವು ಅಂಗಡಿಗಳನ್ನು ಮಾಲೀಕರು 2 ತಿಂಗಳಿನಿಂದ ಮುಚ್ಚಿದ್ದಾರೆ.
    ನಿಧಾನಗರಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ನಾಗರಿಕರು ಆಗ್ರಹಿಸುತ್ತಿದ್ದಾರೆ. ದೂರವಾಣಿ, ಕೇಬಲ್, ಇಂಟರ್ನೆಟ್ ಸಂಪರ್ಕ ಕಡಿತವಾಗಿದ್ದು, ನೀರು ಸರಬರಾಜಿನಲ್ಲೂ ವ್ಯತ್ಯಯವಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಕಂಗೆಟ್ಟಿರುವ ಸ್ಥಳೀಯರು ಗುತ್ತಿಗೆದಾರರ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿಯುವ ಮತ್ತು ಇನ್ನು ಕೆಲವರು ನ್ಯಾಯಾಲಯದ ಮೊರೆಹೋಗುವ ಸಿದ್ಧತೆಯಲ್ಲಿದ್ದಾರೆ.

    ಹೆಬ್ರಿ ರಸ್ತೆ ಚೇರ್ಕಾಡಿ ತನಕ ವಿಸ್ತರಿಸುತ್ತಿರುವುದು ತುಂಬ ಸಂತಸವಾಗಿತ್ತು. ಆದರೆ ಇದೀಗ ನಿಧಾನ ಗತಿಯ ರಸ್ತೆ ಕಾಮಗಾರಿ ಮತ್ತು ಧೂಳಿನಿಂದ ನಮ್ಮ ಮನೆಗೆ ತೆರಳಲು ತೊಂದರೆಪಡುವಂತಾಗಿದೆ. ವೃದ್ಧರು, ಅಸೌಖ್ಯದಿಂದ ಇರುವವರು ತೀರಾ ಬಳಲಿದ್ದಾರೆ. ಕಾಮಗಾರಿ ವೇಗ ಪಡೆಯದಿದ್ದರೆ ಗುತ್ತಿಗೆದಾರರ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.
    ಅಶೋಕ್ ಭಟ್ ಚಾಂತಾರು

    ಕೆಲವು ಸಮಯದಿಂದ ಕಲ್ಲು ಮತ್ತು ಜಲ್ಲಿಯ ಸಾಗಾಟ ಮತ್ತು ಕೊರತೆ ಇದ್ದ ಕಾರಣ ಕಾಮಗಾರಿ ಸ್ವಲ್ಪ ನಿಧಾನಗತಿಯಲ್ಲಿ ನಡೆದಿದೆ. ಧೂಳು ನಿಯಂತ್ರಣ ಮಾಡಿ ಕೂಡಲೆ ರಸ್ತೆ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸುತ್ತೇನೆ.
    ಜಗದೀಶ್ ಭಟ್
    ಸಹಾಯಕ ಕಾರ್ಯಪಾಲಕ ಅಭಿಯಂತ, ಉಡುಪಿ ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts