More

    13 ವರ್ಷಗಳ ವಿರಸ ಮರೆತು ಒಂದಾದ ಬ್ರಹ್ಮಾವರ-ಮಂಗಳೂರು ದಂಪತಿ

    ಉಡುಪಿ: ಹದಿಮೂರು ವರ್ಷಗಳ ಹಿಂದೆ ಬೇರ್ಪಟ್ಟ ದಂಪತಿ ಉಡುಪಿ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಒಂದಾದರು.

    ಮಂಗಳೂರಿನ ಯುವತಿಯನ್ನು ಬ್ರಹ್ಮಾವರ ನಿವಾಸಿ 2003 ಜೂ.27ರಂದು ಮದುವೆಯಾಗಿದ್ದರು. ನಂತರ ದಂಪತಿ ಬ್ರಹ್ಮಾವರದಲ್ಲಿ ನೆಲೆಸಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ 2 ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದು, ದಂಪತಿಗೆ 2004ರಲ್ಲಿ ಪುತ್ರಿ ಜನಿಸಿದ್ದಳು. ಬಳಿಕ ಪತಿ ತನ್ನನ್ನು ಮತ್ತು ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಮಗಳ ಮೇಲೆ ಪ್ರೀತಿ ತೋರಿಸುತ್ತಿಲ್ಲವೆಂದು ಮಹಿಳೆ 13 ವರ್ಷದ ಹಿಂದೆ ಉಡುಪಿಗೆ ಬಂದು ಪ್ರತ್ಯೇಕವಾಗಿ ವಾಸ ಮಾಡಿಕೊಂಡಿದ್ದರು.

    ಮಹಿಳೆ ಮತ್ತು ಮಗಳು ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ತಮಗೆ ಜೀವನಾಂಶ ನೀಡಬೇಕೆಂದು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ವಕೀಲರು ಚಿಕ್ಕ ವಿಷಯಕ್ಕೆ ಸಂಸಾರ ಬೇರ್ಪಟ್ಟಿದೆ ಎನ್ನುವ ಅಂಶವನ್ನು ಮನಗಂಡು ಮಧ್ಯಸ್ಥಿಕೆ ಕೇಂದ್ರಕ್ಕೆ ರಾಜಿ ಇತ್ಯರ್ಥಕ್ಕೆ ಕಳುಹಿಸಬೇಕೆಂದು ಅರ್ಜಿದಾರರ ಪರ ನ್ಯಾಯಾಲಯದಲ್ಲಿ ಕೋರಿಕೊಂಡರು. ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಲು ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿತ್ತು.

    ವಕೀಲರು ದಂಪತಿ, ಅವರ ವಕೀಲರು ಮತ್ತು ಕುಟುಂಬದ ಹಿರಿಯರನ್ನು ಕರೆಸಿ ಸತತ 4 ಬಾರಿ ಸಂಧಾನ ನಡೆಸಿ ಬೇರ್ಪಟ್ಟ ಕುಟುಂಬವನ್ನು ಒಂದಾಗಿಸಲು ಪ್ರಯತ್ನಿಸಿದರು. ಅಂತಿಮವಾಗಿ ನ್ಯಾಯಾಧೀಶರು ದಂಪತಿಯನ್ನು ಕರೆಸಿ, ಈ ಪ್ರಾಯದಲ್ಲಿ ಬೇರೆ ಬೇರೆ ಇರುವುದು ಸಮಂಜಸವಲ್ಲ ಮತ್ತು ಮಗಳ ಭವಿಷ್ಯದ ಬಗ್ಗೆ ಉಭಯರಿಗೂ ತಿಳಿ ಹೇಳಿದರು. ಅಂತಿಮವಾಗಿ ದಂಪತಿ ಮನ ಪರಿವರ್ತನೆಗೊಂಡು ಜತೆಯಾಗಿ ಜೀವನ ನಡೆಸಲು ಒಪ್ಪಿದರು.

    ಒಂದೇ ದಿನ 34,320 ಪ್ರಕರಣ ಇತ್ಯರ್ಥ: ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಶನಿವಾರ 34,320 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

    ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ-29, ಚೆಕ್ ಅಮಾನ್ಯ-268, ಬ್ಯಾಂಕ್, ಹಣ ವಸೂಲಾತಿ-21, ಎಂವಿಸಿ-86, ಕಾರ್ಮಿಕ ನಷ್ಟ ಪರಿಹಾರ-1, ಎಂಎಂಆರ್‌ಡಿ ಆ್ಯಕ್ಟ್-15, ವೈವಾಹಿಕ ಪ್ರಕರಣ-1, ಸಿವಿಲ್ ಪ್ರಕರಣ-174, ಕ್ರಿಮಿನಲ್ ಪ್ರಕರಣ-2538 ಹಾಗೂ ವ್ಯಾಜ್ಯಪೂರ್ವ ದಾವೆ-31187ಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಿ 12,34,77,966 ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.

    ದ.ಕ. 22,262 ಪ್ರಕರಣ ವಿಲೇವಾರಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿ ಒಂದೇ ದಿನ 22,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

    ಒಟ್ಟು 31,791 ರಾಜಿಯಾಗಬಲ್ಲ ಪ್ರಕರಣಗಳನ್ನು ತೆಗೆದುಕೊಂಡು ಮಾತುಕತೆ ನಡೆಸಲಾಯಿತು. ಆ ಪೈಕಿ 22,262 ಪ್ರಕರಣಗಳಲ್ಲಿ ಒಟ್ಟು 17,39,46,414 ರೂ. ಸೆಟ್ಲ್‌ಮೆಂಟ್ ಮಾಡಲಾಯಿತು. ಇದರಲ್ಲಿ ಚೆಕ್ ಅಮಾನ್ಯ, ಸಿವಿಲ್ ಪ್ರಕರಣ, ಎಂಎಂಆರ್‌ಡಿ ಆ್ಯಕ್ಟ್ ಪ್ರಕರಣ, ಬ್ಯಾಂಕ್ ಹಣ ವಸೂಲಾತಿ ಮೊದಲಾದ ಪ್ರಕರಣಗಳು ಸೇರಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts