More

    ಬಾಲಕನ ಕೊಲೆಯಲ್ಲಿ ಮೂರನೇ ಕೈ? 

    ಉಳ್ಳಾಲ: ಪಬ್‌ಜಿ ಆಟದ ವಿಚಾರದಲ್ಲಿ ಗೆಳೆಯರ ನಡುವೆ ವೈಮನಸ್ಸು, ಹೊಡೆದಾಟ ಹಿನ್ನೆಲೆಯ ಆಕಿಫ್ ಕೊಲೆ ಪ್ರಕರಣಕ್ಕೆ ತಿರುವು. ಆರೋಪಿಯ ಬಂಧನದ ಮರುದಿನ, ಕೊಲೆಯಲ್ಲಿ ಮೂರನೇ ವ್ಯಕ್ತಿಯ ಕೈವಾಡ ಬಗ್ಗೆ ಮೃತ ಬಾಲಕನ ಮನೆಮಂದಿ ಶಂಕೆ ವ್ಯಕ್ತಪಡಿಸಿ, ಸಮಗ್ರ ತನಿಖೆಗೆ ಪಟ್ಟುಹಿಡಿದಿದ್ದಾರೆ.
    ಕೊಲೆಯಾದ ಬಾಲಕ ಆಕಿಫ್ ಶನಿವಾರ ರಾತ್ರಿ 8.30ಕ್ಕೆ ಮದರಸದಿಂದ ಮನೆಗೆ ಬಂದಿದ್ದ. ಕೆಲ ಹೊತ್ತಲ್ಲಿ ದೂರವಾಣಿ ಕರೆ ಬಂದು, 8.40ಕ್ಕೆ ಮನೆಯಿಂದ ಹೊರಹೋದ. ಹಿಂದಿರುಗಿ ಬಾರದ ಕಾರಣ 9.10ಕ್ಕೆ ಮನೆಯವರು ಆತನ ದೂರವಾಣಿಗೆ ಕರೆ ಮಾಡಿದರು. ಆಗ  ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಮನೆಮಂದಿ ಹುಡುಕಾಟ ಆರಂಭಿಸಿದರು. ಮನೆಯಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಆರೋಪಿ ಜತೆ ಆತ ಹೋಗಿದ್ದ ದೃಶ್ಯ ದಾಖಲಾಗಿದೆ. ಆರೋಪಿಯ ಮನೆಗೂ ಹೋಗಿ ವಿಚಾರಿಸಲಾಯಿತು. ಆ ವೇಳೆ ಮನೆಯ್ಲಲಿದ್ದ ಆತನ ಮುಖದಲ್ಲಿ ಹೆದರಿಕೆ ಅಥವಾ ಆತನ ನಡತೆಯಲ್ಲಿ ಅನುಮಾನ ಕಾಣಲಿಲ್ಲ. ತಾನು ಎಂಟು ಗಂಟೆಗೆ ಆಕಿಫ್‌ನನ್ನು ನೋಡಿದ್ದೆ ಎಂದು ತಿಳಿಸಿದ್ದಾಗಿ ಮನೆಮಂದಿ ಹೇಳುತ್ತಾರೆ.
    ಆಡಲು ಸಮಯವೇ ಇರಲಿಲ್ಲ: ಆಕಿಫ್‌ನ ಮನೆಗೂ, ಕೊಲೆ ನಡೆದ ಸ್ಥಳಕ್ಕೂ ಒಂದುವರೆ ಕಿ.ಮೀ.ಅಂತರವಿದೆ. ನಡೆದುಕೊಂಡು ಹೋಗಲು 30 ನಿಮಿಷ ಬೇಕು. ಆತನಲ್ಲಿದ್ದ ಮೊಬೈಲ್ 9.10ಕ್ಕೇ ಸ್ವಿಚ್‌ಆಫ್ ಆಗಿದೆ. ಹೀಗಿರುವಾಗ ಅಲ್ಲಿ ಇಬ್ಬರು ಪಬ್‌ಜಿ ಆಡಲು ಸಮಯವಿಲ್ಲ. ಆಕಿಫ್ ಜತೆ ಮೊದಲು ಆರೋಪಿಯಿದ್ದರೂ, ಬಳಿಕ ಮೂರನೇ ವ್ಯಕ್ತಿ ಅಥವಾ ಆರೋಪಿಯೇ ದ್ವಿಚಕ್ರ ಅಥವಾ ಇತರ ವಾಹನದಲ್ಲಿ ಕರೆದುಕೊಂಡು ಹೋಗಿರುವ ಸಾಧ್ಯತೆಗಳಿವೆ. ಕೊಲೆಯ ಹಿಂದೆ ಬೇರೆ ಯಾವುದಾದರೂ ದುರುದ್ದೇಶ ಇರಬಹುದು ಎಂಬುದು ಮನೆಮಂದಿಯ ಹೇಳಿಕೆ.
    ಆರೋಪಿಗೆ ಸಹಕಾರ ನೀಡಿದರೇ ಪಾಲಕರು?: ಮೃತದೇಹ ಪತ್ತೆಯಾದ ಸ್ಥಳದಲ್ಲಿ ಆರೋಪಿಯ ಪಾಲಕರಿದ್ದರು. ಜನ ಸೇರಿದಾಗ ತಪ್ಪಿಸಿಕೊಂಡರು. ಮೃತದೇಹ ಹುಡುಕುವ ಸಂದರ್ಭ ಆರೋಪಿ ಜತೆಯಲ್ಲಿದ್ದರೂ, ಆತ ವಿಷಯ ತಿಳಿಸಲಿಲ್ಲ. ಪೊಲೀಸರು ಬಂಧಿಸಿದ ಬಳಿಕವೂ ಆತನಲ್ಲಿ ಅಪರಾಧಿ ಭಾವನೆ ಕಂಡು ಬಂದಿಲ್ಲ. ಕೊಲೆ ನಡೆದ ಸ್ಥಳದಿಂದ ಶವವನ್ನು 100 ಮೀಟರ್ ದೂರಕ್ಕೆ ಎಳೆದುಕೊಂಡು ಹೋದ ಕುರುಹು ಲಭಿಸಿದೆ. ಆರೋಪಿಯೊಬ್ಬನೇ ಶವವನ್ನು ಎಳೆದೊಯ್ಯಲು ಸಾಧ್ಯವಿಲ್ಲ. ಹೀಗಿರುವಾಗ ಹೆತ್ತವರೂ ಸಹಕಾರ ನೀಡಿರಬಹುದು. ಮೃತದೇಹ ಬೇರೆಡೆ ಸಾಗಿಸಲು ಯೋಚಿಸಿ ಭಾನುವಾರ ಬೆಳಗ್ಗೆ ಹಿಂದಿನ ದಿನ ಮೃತದೇಹ ಇಟ್ಟಿದ್ದ ಸ್ಥಳಕ್ಕೆ ಬಂದಿರಬಹುದು ಎನ್ನುವುದು ಸ್ಥಳೀಯರ ಅನುಮಾನ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts