More

    ಪ್ಲಾಸ್ಟಿಕ್ ನಿರ್ವಹಣೆಗೆ ಬಾಟಲಿ ಬೂತ್

    ಪುರುಷೋತ್ತಮ ಪೆರ್ಲ ಕಾಸರಗೋಡು
    ಕಾಸರಗೋಡು ನಗರವನ್ನು ಪ್ಲಾಸ್ಟಿಕ್‌ಮುಕ್ತಗೊಳಿಸುವ ಯೋಜನೆಯೊಂದಿಗೆ ಕೈಗೊಳ್ಳುತ್ತಿರುವ ಅಭಿಯಾನದ ಅಂಗವಾಗಿ ನಗರಸಭೆ ಮುಂಭಾಗದ ವಿವಿಧೆಡೆ ಪ್ಲಾಸ್ಟಿಕ್ ಬೂತ್ ಅಳವಡಿಸಲಾಗುತ್ತಿದೆ.
    ಪ್ಲಾಸ್ಟಿಕ್ ಕೈಚೀಲಗಳು, ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ತ್ಯಾಜ್ಯ ನಗರದೆಲ್ಲೆಡೆ ತುಂಬಿಕೊಳ್ಳುತ್ತಿದ್ದು, ಇವುಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಒಂದೇ ಕಡೆ ದಾಸ್ತಾನು ಮಾಡಲು ಪ್ಲಾಸ್ಟಿಕ್ ಬೂತ್ ಅಳವಡಿಸಲಾಗಿದೆ. ಬಾಟಲಿ ಆಕೃತಿಯಲ್ಲಿ ಈ ಪ್ಲಾಸ್ಟಿಕ್ ಬೂತ್ ನಿರ್ಮಿಸಲಾಗಿದ್ದು, ಜನಾಕರ್ಷಣೆಗೂ ಕಾರಣವಾಗುತ್ತಿದೆ. ನೀರಿನ ಬಾಟಲಿ, ವಿವಿಧ ತಂಪು ಪಾನೀಯ ಬಾಟಲಿಗಳನ್ನು ಮಾತ್ರ ಇಲ್ಲಿ ದಾಸ್ತಾನು ಮಾಡಬೇಕು. ಪ್ರಸಕ್ತ ಕಾಸರಗೋಡು ನಗರದಲ್ಲಿ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಾಸರಗೋಡು ನಗರಸಭೆ ಕಚೇರಿ ವಠಾರ, ಸಂಧ್ಯಾರಾಗ ತೆರೆದ ಸಭಾಂಗಣ, ಕಸಬಾ ಬೀಚ್, ಲೈಟ್‌ಹೌಸ್, ತಾಯಲಂಗಾಡಿ ಸೀವ್ಯೆ ಪಾರ್ಕ್ ಮುಂತಾದೆಡೆ ಬಾಟಲಿ ಸಂಗ್ರಹ ಬೂತ್ ಸ್ಥಾಪಿಸಲಾಗಿದೆ.

    ಗಬ್ಬು ನಾರುತ್ತಿರುವ ಪ್ಲಾಸ್ಟಿಕ್ ಸಂಗ್ರಹ ಕೇಂದ್ರ: ಜಿಲ್ಲೆಯ ವಿವಿಧ ಕಡೆ ಸ್ಥಳೀಯಾಡಳಿತ ಸಂಸ್ಥೆ ವತಿಯಿಂದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಸಂಗ್ರಹಕ್ಕೆ ಅಳವಡಿಸಲಾಗಿರುವ ಎಂಸಿಎಫ್(ಮೆಟೀರಿಯಲ್ ಕಲೆಕ್ಷನ್ ಫೆಸಿಲಿಟೀಸ್) ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿದೆ. ರಸ್ತೆ ಬದಿ ಹಲವಾರು ಎಂಸಿಎಫ್ ಕೇಂದ್ರಗಳನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಳವಡಿಸಲಾಗಿದ್ದು, ಇವುಗಳಲ್ಲಿ ತುಂಬಿಕೊಳ್ಳುವ ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸದೆ ಸಂಗ್ರಹ ಕೇಂದ್ರದ ಸುತ್ತ ಹರಡಿಕೊಳ್ಳುವಂತಾಗಿದೆ. ಪ್ಲಾಸ್ಟಿಕ್, ಗಾಜು, ಥರ್ಮಾಕೋಲ್, ಇ-ವೇಸ್ಟ್ ಮುಂತಾದುವುಗಳನ್ನು ಸಂಗ್ರಹಿಸಿ ಈ ಎಂಸಿಎಫ್‌ನೊಳಗೆ ಅಳವಡಿಸಬೇಕೆಂಬ ನಿಬಂಧನೆಯಿದ್ದರೂ ಇದರಲ್ಲಿ ಘನ-ದ್ರವ ತ್ಯಾಜ್ಯವನ್ನೂ ಸುರಿಯಲಾಗುತ್ತಿದೆ.

    ಕಾಸರಗೋಡು ನಗರಸಭಾ ವ್ಯಾಪ್ತಿಯ ಏಳು ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬಾಟಲಿ ಬೂತ್ ಅಳವಡಿಸಲಾಗಿದೆ. ಸರ್ಕಾರದ ಆದೇಶ ಪ್ರಕಾರ ಈ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಯೋಜನೆ ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅಗತ್ಯ. ಬೂತಿನಲ್ಲಿ ಸಂಗ್ರಹಗೊಳ್ಳುವ ಬಾಟಲಿಗಳನ್ನು ಸಂಸ್ಕರಣೆಗಾಗಿ ಕಳುಹಿಸಲಾಗುವುದು. ಇದಕ್ಕಾಗಿ ಖಾಸಗಿ ಹಾಗೂ ಸರ್ಕಾರಿ ಏಜೆನ್ಸಿಗಳೂ ಕಾರ್ಯನಿರ್ವಹಿಸಲಿದೆ.
    ವಿ.ಎಂ ಮುನೀರ್
    ಅಧ್ಯಕ್ಷರು ಕಾಸರಗೋಡು ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts