More

    ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಬೇಸರ, ಸ್ಥಳೀಯರು ನಿರಾಳ ಪತ್ರಬರಹಗಾರರು, ಸಾರ್ವಜನಿಕರಿಗೆ ಬೇಸರ

    ಸುಗ್ಗರಾಜು ಜಿ.ಕೆ. ನೆಲಮಂಗಲ
    ನಗರದ ಪರಮಣ್ಣ ಬಡಾವಣೆಯ ಖಾಸಗಿ ಕಟ್ಟಡದಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಸಿದ್ಧತೆ ನಡೆಯುತ್ತಿದ್ದು, ಪತ್ರ ಬರಹಗಾರರು, ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

    ಕಟ್ಟಡವನ್ನು ಬಾಡಿಗೆ ಕೊಡುವಾಗ ಮಾಡಿಕೊಂಡಿದ್ದ ಕರಾರಿನ ನಿಯಮದಂತೆ ಕಟ್ಟಡ ಮಾಲೀಕರು ಕಚೇರಿ ಖಾಲಿ ಮಾಡುವಂತೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ವಿಚಾರವನ್ನು ಮುದ್ರಿಸಿ ಕಚೇರಿ ಆವರಣದಲ್ಲಿ ಫಲಕ ಹಾಕಿರುವುದು ಒಂದೆಡೆಯಾದರೆ ಕಚೇರಿ ತೆರವಿಗೆ ಕಾಲಾವಕಾಶ ನೀಡಿದ್ದು, ಕಚೇರಿಯ ಅಧಿಕಾರಿ ಸಿಬ್ಬಂದಿ ಹೊಸ ಕಟ್ಟಡದ ಹುಡುಕಾಟಕ್ಕೆ ಮುಂದಾಗಿದ್ದಾರೆ.

    6 ವರ್ಷಗಳ ಹಿಂದೆ ತಾಲೂಕು ಕಚೇರಿಯಲ್ಲಿ ಚಿಕ್ಕ ಕೊಠಡಿಯಲ್ಲಿದ್ದ ಕಚೇರಿಯನ್ನು ಬಡಾವಣೆ ನಿವಾಸಿಗಳು ಹಾಗೂ ಕೆಲ ಪತ್ರಬರಹಗಾರರ ವಿರೋಧದ ನಡುವೆಯೂ ಪರಮಣ್ಣ ಬಡಾವಣೆಗೆ ಸ್ಥಳಾಂತರಿಸಲು ಜಿಲ್ಲಾ ನೊಂದಣಾಧಿಕಾರಿಗಳು ಆದೇಶಿಸಿದ್ದರು. ವಿಧಿಯಿಲ್ಲದೆ ಕೆಲ ಸ್ಥಿತಿವಂತ ಪತ್ರಬರಹಗಾರರು ಪರಮಣ್ಣ ಬಡಾವಣೆಗೆ ಕಚೇರಿ ವರ್ಗಾವಣೆ ಮಾಡಿಕೊಂಡಿದ್ದರು. ಉಳಿದ ಪತ್ರಬರಹಗಾರರು ದುಬಾರಿ ಬಾಡಿಗೆ ಕಟ್ಟಲು ಸಾಧ್ಯವಾಗದೆ ಹಳೆಯ ಕಚೇರಿಗಳಿಂದಲೇ ಕೆಲಸ ಮಾಡುತ್ತಿದ್ದರು. ವಸತಿ ಬಡಾವಣೆಯಲ್ಲಿದ್ದರೂ ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಸಮೀಪವಾಗಿದ್ದು, ಎಲ್ಲರಿಗೂ ಅನುಕೂಲವಾಗಿತ್ತು. ಈಗ ಮತ್ತೆ ಸ್ಥಳಾಂತರಗೊಳ್ಳುತ್ತಿರುವುದು ಬೇಸರ ಉಂಟು ಮಾಡಿದೆ.

    ಬಾಡಿಗೆ ವಿಳಂಬ: ಕಟ್ಟಡ ಬಾಡಿಗೆಯನ್ನು ಲೋಕೋಪಯೋಗಿ ಇಲಾಖೆ ನಿರ್ಧರಿಸಲಿದ್ದು ಕರೊನಾ ಹಿನ್ನೆಲೆಯಲ್ಲಿ 8 ತಿಂಗಳ ಕಚೇರಿ ಬಾಡಿಗೆ ವಿಳಂಬವಾಗಿರುವುದು ಒಂದೆಡೆಯಾದರೆ ಬಾಡಿಗೆ ಕಡಿಮೆ ಎಂಬ ಕಾರಣಕ್ಕೆ ಕಟ್ಟಡದ ಮಾಲೀಕರು ಕಚೇರಿಯನ್ನು ಖಾಲಿ ಮಾಡಿಸಲು ಮುಂದಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

    ಬಡಾವಣೆ ನಿವಾಸಿಗಳು ನಿರಾಳ: ವಸತಿ ಬಡಾವಣೆಗೆ ಸ್ಥಳಾಂತರಗೊಂಡಿದ್ದ ಸಬ್‌ರಿಜಿಸ್ಟ್ರಾರ್ ಕಚೇರಿಯಿಂದಾಗಿ ನಿತ್ಯ ಅಧಿಕ ಸಂಖ್ಯೆ ಜನಸಂಚಾರ, ವಾಹನ ದಟ್ಟಣೆಯಿಂದಾಗಿ ಪರಮಣ್ಣ ಬಡಾವಣೆ ನಿವಾಸಿಗಳು ಬೇಸತ್ತಿದ್ದರು. ಈ ಭಾಗದ ಜನಪ್ರತಿನಿಧಿ, ಕಟ್ಟಡದ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಗಲಾಟೆಗಳಿಗೆ ಎಡೆಯಾಗಿತ್ತು. ಆದರೀಗ ಕಚೇರಿ ಸ್ಥಳಾಂತರಗೊಳ್ಳುತ್ತಿರುವ ವಿಚಾರ ನಿವಾಸಿಗಳಲ್ಲಿ ನಿರಾಳತೆ ತಂದಿದೆ.

    ಭಿನ್ನಮಂಗಲ ಗ್ರಾಮದ ಮುಖ್ಯರಸ್ತೆಯಲ್ಲಿರುವ ಖಾಸಗಿ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಮಾತುಗಳು ಪತ್ರಬರಹಗಾರರ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ಮೂಲಭೂತವಾಗಿ ಬಸ್ ಸೌಕರ್ಯ, ಪಾರ್ಕಿಂಗ್ ವ್ಯವಸ್ಥೆ ಸೇರಿ ವಸತಿಯೇತರ ಪ್ರದೇಶದಲ್ಲಿ ಕಚೇರಿ ಸ್ಥಾಪಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬುದು ಪತ್ರಬರಹಗಾರರು, ಸಾರ್ವಜನಿಕ ಅಭಿಪ್ರಾಯ.

    ಕಚೇರಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಶೀಘ್ರದಲ್ಲಿ ಸೂಕ್ತ ಕ್ರಮವಹಿಸಲಾಗುವುದು. ಬಸ್‌ಸೌಕರ್ಯ ಮತ್ತು ಪಾರ್ಕಿಂಗ್ ಸೇರಿ ವಸತಿಯೇತರ ಪ್ರದೇಶದಲ್ಲಿ ಕಚೇರಿ ಆರಂಭಕ್ಕೆ ಆದ್ಯತೆ ನೀಡಲಾಗುವುದು.
    ರವೀಂದ್ರೇಗೌಡ, ಹಿರಿಯ ಉಪನೋಂದಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts