More

    ಮತಗಟ್ಟೆಗಳಲ್ಲಿ ಕ್ಯಾಮರಾ ಕಣ್ಗಾವಲು

    ಬೆಳಗಾವಿ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸುಸೂತ್ರವಾಗಿ ನೆರವೇರಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಮತಗಟ್ಟೆ ಗುರುತಿಸಿದ್ದು, ಅವುಗಳನ್ನು ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳೆಂದು ವಿಂಗಡಿಸಿದ್ದಾರೆ.

    ಇಂತಹ ಮತಗಟ್ಟೆಗಳಲ್ಲಿ ಮತದಾನ ವ್ಯವಸ್ಥಿತವಾಗಿ ಜರುಗಲು ಚುನಾವಣಾ ಅಧಿಕಾರಿಗಳು ವಿಡಿಯೋ ಚಿತ್ರೀಕರಣ ವ್ಯವಸ್ಥೆಗೆ ಮುಂದಾಗಿದ್ದಾರೆ. ಅಲ್ಲದೆ, ಸೂಚಿತ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳತ್ತ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.

    ಮತಗಟ್ಟೆ ವಿಂಗಡಣೆ: ಈ ಹಿಂದಿನ ಚುನಾವಣೆಯ ಮತದಾನದ ವೇಳೆ ಮತದಾರರಿಗೆ ಬೆದರಿಕೆ ಹಾಕಿರುವುದು, ಇಂಥದ್ದೇ ಪಕ್ಷಕ್ಕೆ ಮತ ಹಾಕುವಂತೆ ಒತ್ತಾಯ ಮಾಡಿದ ಪ್ರಕರಣ ಘಟಿಸಿದ್ದರೆ ಹಾಗೂ ದೊಂಬಿ, ಗಲಾಟೆ, 100ರಷ್ಟು ಮತದಾನವಾದ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 799 ಸೂಕ್ಷ್ಮ ಹಾಗೂ 360 ಅತಿ ಸೂಕ್ಷ್ಮಮತಗಟ್ಟೆಗಳಿವೆ.
    ಈ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲಾಗುತ್ತಿದೆ.

    ಮತಗಟ್ಟೆಗಳ ವಿವರ: ಚಿಕ್ಕೋಡಿ ತಾಲೂಕಿನಲ್ಲಿ 251 ಸೂಕ್ಷ್ಮ, 58 ಅತಿ ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ. ಗೋಕಾಕ ತಾಲೂಕಿನಲ್ಲಿ 98 ಸೂಕ್ಷ್ಮ, 43 ಅತಿಸೂಕ್ಷ್ಮ, ಹುಕ್ಕೇರಿ 134 ಸೂಕ್ಷ್ಮ, 95 ಅತಿಸೂಕ್ಷ್ಮ, ಕಾಗವಾಡದಲ್ಲಿ ಸೂಕ್ಷ್ಮ 11, ಅತಿಸೂಕ್ಷ್ಮ 6, ಖಾನಾಪುರ 38 ಸೂಕ್ಷ್ಮ, 21 ಅತಿಸೂಕ್ಷ್ಮ, ಕಿತ್ತೂರು 20 ಸೂಕ್ಷ್ಮ, ನಿಪ್ಪಾಣಿ 26 ಸೂಕ್ಷ್ಮ ಹಾಗೂ ಸವದತ್ತಿಯಲ್ಲಿ 43 ಸೂಕ್ಷ್ಮ, ಬೆಳಗಾವಿ ತಾಲೂಕು 38 ಸೂಕ್ಷ್ಮ, 104 ಅತಿ ಸೂಕ್ಷ್ಮ, ರಾಮದುರ್ಗ 41 ಸೂಕ್ಷ್ಮ, 8 ಅತಿ ಸೂಕ್ಷ್ಮ, ರಾಯಬಾಗ 49 ಸೂಕ್ಷ್ಮ, ಬೈಲಹೊಂಗಲ 41 ಸೂಕ್ಷ್ಮ, 7 ಅತಿ ಸೂಕ್ಷ್ಮ, ಮೂಡಲಗಿ 9 ಸೂಕ್ಷ್ಮ, 18 ಅತಿ ಸೂಕ್ಷ್ಮ ಮತಗಟ್ಟೆಗಳಿವೆ.

    ಚುನಾವಣಾ ಆಯೋಗದ ನಿರ್ದೇಶನದಂತೆ ವ್ಯವಸ್ಥೆ

    ಹಣ-ಹೆಂಡ ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಮತಗಟ್ಟೆ ಗುರುತಿಸಿ ಅವುಗಳ ಆಧಾರದ ಮೇಲೆ ಭದ್ರತಾ ಮತ್ತಿತರ ವಿಚಕ್ಷಣಾ ತಂಡ ನಿಯೋಜಿಸಲಾಗುತ್ತಿದೆ. ಅಬಕಾರಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ತಾಲೂಕುವಾರು ಚೆಕ್‌ಪೋಸ್ಟ್ ಸ್ಥಾಪಿಸಲಾಗುತ್ತಿದೆ. ಉಳಿದಂತೆ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಎಲ್ಲ ರೀತಿ ವ್ಯವಸ್ಥೆ ಮಾಡಲಾಗುವುದು. ಅಂತಾರಾಜ್ಯ, ಅಂತರ್‌ಜಿಲ್ಲೆ ಹಾಗೂ ಅಂತರ್ ತಾಲೂಕು ಮಾದರಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಗಡಿ ತಾಲೂಕುಗಳಿಗೆ ಸಂಬಂಧಿಸಿದಂತೆ ನೆರೆಯ ರಾಜ್ಯದ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

    ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ನಿರಾತಂಕವಾಗಿ ನೆರವೇರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆ ತಾಲೂಕುವಾರು ಮತದಾರರ ಮೇಲೆ ಪ್ರಭಾವ ಬೀರುವ ಮತಗಟ್ಟೆ ಪಟ್ಟಿ ಸಿದ್ಧ ಪಡಿಸಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಮತದಾನ ಸಿದ್ಧತೆ ಪರಿಶೀಲಿಸಿದ್ದೇನೆ.
    | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ, ಬೆಳಗಾವಿ

    | ಜಗದೀಶ ಹೊಂಬಳಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts