More

    ಟ್ವಿಟರ್​ನಲ್ಲಿ ಮಾತಾಡ್ತೀರಿ, ಇಲ್ಲೂ ಪ್ರತಿಕ್ರಿಯೆ ನೀಡಿ! ಮಹಾ ಸಚಿವ ನವಾಬ್​​ ಮಲಿಕ್​​ರ ಅಫಿಡೆವಿಟ್​ ಕೇಳಿದ ಹೈಕೋರ್ಟ್​

    ಮುಂಬೈ: ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ)ದ ಅಧಿಕಾರಿ ಸಮೀರ್​ ವಾಂಖೆಡೆ ಅವರ ತಂದೆ ಧ್ಯಾನ್​ದೇವ್ ವಾಂಖೆಡೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಮಂಗಳವಾರದೊಳಗೆ ಅಫಿಡೆವಿಟ್ ಮೂಲಕ ಪ್ರತಿಕ್ರಿಯೆ ಸಲ್ಲಿಸಬೇಕೆಂದು ಮಹಾರಾಷ್ಟ್ರ ಸಚಿವ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ನವಾಬ್​ ಮಲಿಕ್​ ಅವರಿಗೆ ಬಾಂಬೆ ಹೈಕೋರ್ಟ್​ ಸೂಚಿಸಿದೆ.

    ಕ್ರೂಸ್​ ಶಿಪ್​ ಡ್ರಗ್ಸ್​ ಪಾರ್ಟಿ ಕೇಸಿನಲ್ಲಿ ಬಾಲಿವುಡ್​ ನಟ ಶಾರುಖ್​ ಖಾನ್​ರ ಪುತ್ರ ಆರ್ಯನ್​ ಖಾನ್​ ಅವರನ್ನು ಅ.3 ರಂದು ಬಂಧಿಸಿದಾಗಿನಿಂದ ಆ ಪ್ರಕರಣದ ಮೇಲ್ವಿಚಾರಣೆ ವಹಿಸಿದ್ದ ಎನ್​​ಸಿಬಿ ಮುಂಬೈ ವಲಯ ನಿರ್ದೇಶಕರಾಗಿರುವ ಸಮೀರ್​​ ವಾಂಖೆಡೆ ವಿರುದ್ಧ ಮಲಿಕ್​​​ ಹಲವು ರೀತಿಯ ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಧ್ಯಾನ್​ದೇವ್​​ ವಾಂಖೆಡೆ ತಮ್ಮ ಕುಟುಂಬದ ವರ್ಚಸ್ಸು ಹಾಳುಮಾಡಿದ್ದಕ್ಕಾಗಿ ಮಲಿಕ್​​ರಿಂದ 1.25 ಕೋಟಿ ರೂಪಾಯಿ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ.

    ಇದನ್ನೂ ಓದಿ: ಕ್ರೂಸ್​ ಪಾರ್ಟಿಗೆ ಆರ್ಯನ್​ನ ಕರ್ಕೊಂಡು ಹೋಗಿದ್ರು! ಮಹಾ ಸಚಿವನಿಂದ ಮತ್ತಷ್ಟು ಸ್ಫೋಟಕ ಹೇಳಿಕೆ​

    ಇಂದು ಈ ಮೊಕದ್ದಮೆಯು ನ್ಯಾಯಮೂರ್ತಿ ಮಾಧವ್​ ಜಾಮ್​​ದಾರ್​​ ಅವರನ್ನೊಳಗೊಂಡ ರಜಾಕಾಲೀನ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಧ್ಯಾನ್​​ದೇವ್ ವಾಂಖೆಡೆ ವಕೀಲ ಅರ್ಷದ್​ ಶೈಖ್​ ಅವರು, ಮಲಿಕ್​​ ಪ್ರತಿದಿನ ಸುಳ್ಳು ಮತ್ತು ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ. ಅವು ಸಾಮಾಜಿಕ ಮಾಧ್ಯಮದಲ್ಲಿ ಮತ್ತಷ್ಟು ಅವಹೇಳನಕಾರಿ ಕಾಮೆಂಟುಗಳಿಗೆ ಆಸ್ಪದ ನೀಡುತ್ತಿವೆ. ಇಂದು ಕೂಡ ಸಮೀರ್​ ಸಂಬಂಧಿಯ ಬಗ್ಗೆ ಟ್ವೀಟ್​ ಮಾಡಿದ್ದು, ಈ ಮೊಕದ್ದಮೆ ನಡೆಯುತ್ತಿರುವಾಗಲಾದರೂ ಮಲಿಕ್​ ಮತ್ಯಾವುದೇ ಹೇಳಿಕೆ ನೀಡದಂತೆ ಆದೇಶಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

    ನವಾಬ್​ ಮಲಿಕ್​ರ ವಕೀಲ ಅತುಲ್​ ದಾಮ್ಲೆ, ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ಹಾಗೂ ಪ್ರಾಪ್ತ ವಯಸ್ಕರಾದ ತಮ್ಮ ಮಕ್ಕಳ ಪರವಾಗಿ ಅರ್ಜಿದಾರ ಧ್ಯಾನ್​ದೇವ್​ ಮಾತನಾಡಲು ಸಾಧ್ಯವಿಲ್ಲ ಎಂದರು. “ನೀವು(ನವಾಬ್​ ಮಲಿಕ್) ನಿಮ್ಮ ಪ್ರತಿಕ್ರಿಯೆಯನ್ನು ನಾಳೆ ಫೈಲ್​ ಮಾಡಿ. ನೀವು ಟ್ವಿಟರ್​​ನಲ್ಲಿ ರಿಪ್ಲೈ ಮಾಡಬಲ್ಲಿರಾದರೆ, ಇಲ್ಲಿಯೂ ಮಾಡಬಲ್ಲಿರಿ” ಎಂದು ನ್ಯಾಯಮೂರ್ತಿಗಳು ಹೇಳಿದರು. ಯಾವುದೇ ಮಧ್ಯಂತರ ಆದೇಶ ಮಾಡದೆ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು ಎನ್ನಲಾಗಿದೆ. (ಏಜೆನ್ಸೀಸ್)

    ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು; ಬೆಲೆ ಎಷ್ಟು ಗೊತ್ತೇ?

    ಬಸ್​ ಹತ್ತುವಾಗ ಪ್ರಯಾಣಿಕರ ಮೊಬೈಲ್​​ ಎಗರಿಸುತ್ತಿದ್ದ ಖದೀಮರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts