More

    ಹುಸಿ ಬಾಂಬ್ ಬೆದರಿಕೆ ಕರೆ

    ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲಾಗಿದೆ ಎಂದು ಬುಧವಾರ ಕಿಡಿಗೇಡಿಯೋರ್ವ ಕರೆ ಮಾಡಿದ್ದು, ಪೂರ್ಣ ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿದೆ.
    ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ರಾವ್ ಅವರಿಗೆ ಈ ಕರೆ ಬಂದಿದ್ದು, ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಾಚರಣೆಗಿಳಿದ ಸಿಐಎಸ್‌ಎಫ್ ಸಿಬ್ಬಂದಿ ಹಾಗೂ ಪೊಲೀಸರು ನಿಲ್ದಾಣ ಹಾಗೂ ಆವರಣದಲ್ಲಿ ತಪಾಸಣೆ ನಡೆಸಿದರು. ಆದರೆ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಕರೆ ಎನ್ನುವ ನಿರ್ಧಾರಕ್ಕೆ ಬಂದ ವಿಮಾನ ನಿಲ್ದಾಣ ಅಧಿಕಾರಿಗಳು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.

    ವಾಸುದೇವ ರಾವ್ ಮೊಬೈಲ್‌ಗೆ ಬುಧವಾರ ಮಧ್ಯಾಹ್ನ 12.44ಕ್ಕೆ ಎಸ್‌ಎಂಎಸ್ ಬಂದಿತ್ತು. ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂದು ಕಿಡಿಗೇಡಿ ಸಂದೇಶ ಕಳುಹಿಸಿದ್ದ. 12.51ಕ್ಕೆ ಮತ್ತೆ ಆತ ಅದೇ ಸಂದೇಶ ಕಳುಹಿಸಿದ್ದ. ಸಂದೇಶ ನೋಡಿದ ರಾವ್ ವಾಪಸ್ ಆ ಸಂಖ್ಯೆಗೆ ಕರೆ ಮಾಡಬೇಕು ಎನ್ನುವಷ್ಟರಲ್ಲಿ ಅದೇ ಸಂಖ್ಯೆಯಿಂದ ಬಾಂಬ್ ಇಡಲಾಗಿದೆ ಎಂಬ ಕರೆ ಬಂತು. ಕೂಡಲೆ ನಾನು ಏರ್‌ಪೋರ್ಟ್ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾಗಿ ಅವರು ತಿಳಿಸಿದರು.

    ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಿಗೆ ಕರೆ ಬಂದಿದ್ದು ನಿಜ. ತಕ್ಷಣ ತಪಾಸಣೆ ಕೈಗೊಂಡಿದ್ದೇವೆ. ಇದೊಂದು ಹುಸಿ ಕರೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್ ಪ್ರತಿಕ್ರಿಯಿಸಿದ್ದಾರೆ. ಇದೇ ವರ್ಷ ಜ.20ರಂದು ಆದಿತ್ಯ ರಾವ್ ಎಂಬಾತ ಮಂಗಳೂರು ವಿಮಾನ ನಿಲ್ದಾಣದ ಹೊರಗಡೆ ಬಾಂಬ್ ಇಟ್ಟದ್ದು ರಾಜ್ಯವನ್ನೇ ತಲ್ಲಣಗೊಳಿಸಿತ್ತು.

    ವ್ಯಕ್ತಿ ವಶ, ವಿಚಾರಣೆ?
    ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕರೆ ಬಂದ ಮೊಬೈಲ್ ಸಂಖ್ಯೆಯಿಂದ ವಿಳಾಸ ಪತ್ತೆ ಮಾಡಲಾಗಿದೆ. ಸತ್ಯಾಸತ್ಯತೆ ಮತ್ತಿತರ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts