More

    ಬ್ಲಡ್‌ಬ್ಯಾಂಕ್‌ಗಳಲ್ಲಿ ರಕ್ತ, ಪ್ಲೇಟ್‌ಲೆಟ್ ಕೊರತೆ

    ಮಂಗಳೂರು: ನಗರದ ರೆಡ್‌ಕ್ರಾಸ್ ಸಹಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ತೀವ್ರ ಕೊರತೆ ಎದುರಾಗಿದೆ. ಬ್ಲಡ್‌ಬ್ಯಾಂಕ್‌ಗಳು ರಕ್ತದಾನ ನಡೆಸುವಂತಹ ಸಂಘಟನೆಗಳು, ರೋಗಿಗಳ ಸಂಬಂಧಿಕರಿಂದಲೇ ರಕ್ತದ ಬೇಡಿಕೆಯನ್ನು ಪೂರೈಸುವ ಪರಿಸ್ಥಿತಿ ಇದೆ.

    ಜಿಲ್ಲೆಯಲ್ಲಿ ಸಾಮಾನ್ಯವಾಗಿ ಭಾನುವಾರ ಯಾವುದಾದರೂ ಸಂಘಟನೆಗಳು ರಕ್ತದಾನ ಶಿಬಿರದ ಮೂಲಕ ರಕ್ತ ಸಂಗ್ರಹಿಸಿ ರೆಡ್‌ಕ್ರಾಸ್ ಅಥವಾ ಆಸ್ಪತ್ರೆಯ ಬ್ಲಡ್‌ಬ್ಯಾಂಕ್‌ಗಳಿಗೆ ಒದಗಿಸುತ್ತವೆ. ಆದರೆ ಕಳೆದ ವಾರ ಕ್ರಿಸ್‌ಮಸ್, ಗ್ರಾಪಂ, ಚುನಾವಣೆ, ಹೊಸ ವರ್ಷಾಚರಣೆ ಇದ್ದ ಕಾರಣ ರಕ್ತದಾನ ಶಿಬಿರ ನಡೆಯದೆ ಬ್ಲಡ್ ಬ್ಯಾಂಕ್‌ಗಳಿಗೆ ರಕ್ತ ಪೂರೈಕೆ ಆಗಿಲ್ಲ. ಇದರಿಂದಾಗಿ ಪ್ಲಾಸ್ಮಾ, ಪ್ಲೇಟ್‌ಲೆಟ್ ಕೊರತೆಯಾಗಿದೆ. ಇನ್ನೂ ನಾಲ್ಕೈದು ದಿನ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ವೆನ್ಲಾಕ್ ರಕ್ತನಿಧಿ ಮುಖ್ಯಸ್ಥ ಡಾ.ಶರತ್ ಕುಮಾರ್ ತಿಳಿಸಿದ್ದಾರೆ.

    ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಯೂ ರಕ್ತ ಹಾಗೂ ಪ್ಲೇಟ್‌ಲೆಟ್‌ಗಳ ಕೊರತೆ ಉಂಟಾಗಿದ್ದು, ಸದ್ಯ ರೋಗಿಗಳ ಸಂಬಂಧಿಕರಿಂದಲೇ ರಕ್ತ ಪೂರೈಕೆಗೆ ವ್ಯವಸ್ಥೆ ಮಾಡುವ ಮೂಲಕ ಆಸ್ಪತ್ರೆಗಳು ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿವೆ. ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ನಲ್ಲಿ ಸುಮಾರು 60 ಯುನಿಟ್ ಸಂಗ್ರಹವಿದೆ. ಆದರೆ ಈ ರಕ್ತ ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ತುರ್ತು ಸಂದರ್ಭ ಉಚಿತವಾಗಿ ನೀಡಲಾಗುತ್ತದೆ. ಲೇಡಿಗೋಶನ್‌ಗೆ ರೆಡ್‌ಕ್ರಾಸ್‌ನಿಂದ ದಿನವೊಂದಕ್ಕೆ ಕನಿಷ್ಠ 20ರಿಂದ 30 ಯುನಿಟ್ ರಕ್ತದ ಅಗತ್ಯವಿರುತ್ತದೆ. ರೆಡ್‌ಕ್ರಾಸ್‌ನಲ್ಲಿ ಪ್ಲೇಟ್‌ಲೆಟ್ ಜತೆಗೆ ನೆಗೆಟಿವ್ ಮಾದರಿಯ ರಕ್ತದ ಕೊರತೆಯೂ ಇದೆ ಎಂದು ಇಲ್ಲಿನ ಬ್ಲಡ್‌ಬ್ಯಾಂಕ್ ಸಂಯೋಜಕ ಪ್ರವೀಣ್ ತಿಳಿಸಿದ್ದಾರೆ.

    ಉಡುಪಿಯಲ್ಲಿ ಸಮಸ್ಯೆ ಇಲ್ಲ: ಉಡುಪಿ: ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳು ಪ್ರಾರಂಭವಾಗಿದ್ದು, ಬೇಡಿಕೆಗೆ ಆನುಗುಣವಾಗಿ ರಕ್ತ ಸಂಗ್ರಹ ನಡೆಯುತ್ತಿದೆ. ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕ್‌ನಲ್ಲಿ ಪ್ರಸಕ್ತ 150 ಯೂನಿಟ್ ರಕ್ತ ಸಂಗ್ರಹವಿದ್ದು, ದಿನಕ್ಕೆ 40ರಿಂದ 50 ಯೂನಿಟ್ ರಕ್ತ ನೀಡಲಾಗುತ್ತದೆ ಎಂದು ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಮಾಹಿತಿ ನೀಡಿದ್ದಾರೆ. ನಿಟ್ಟೆ, ಕಾರ್ಕಳ, ಭಟ್ಕಳ, ಬಿಆರ್‌ಎಸ್ ಆಸ್ಪತ್ರೆ ಉಪಕೇಂದ್ರಗಳಲ್ಲಿ ಸ್ವಲ್ಪಮಟ್ಟಿಗೆ ರಕ್ತ ಸಂಗ್ರಹಿಸಿಡಲಾಗಿದೆ. ಕುಂದಾಪುರ ರೆಡ್‌ಕ್ರಾಸ್ ರಕ್ತ ನಿಧಿ ಕೇಂದ್ರದಲ್ಲಿ 130 ಯೂನಿಟ್‌ನಷ್ಟು ರಕ್ತ ಸಂಗ್ರಹವಿದೆ ವಿಜಯವಾಣಿಗೆ ತಿಳಿಸಿದ್ದಾರೆ.

    ವಾರದಿಂದೀಚೆಗೆ ಎಲ್ಲಿಯೂ ರಕ್ತದಾನ ಶಿಬಿರ ನಡೆಯದ ಕಾರಣ ಬ್ಲಡ್‌ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಎದುರಾಗಿದೆ. ಈಗಾಗಲೇ ರೆಡ್‌ಕ್ರಾಸ್‌ನಿಂದ ಮೂಡುಬಿದಿರೆ ಘಟಕ ಸೇರಿದಂತೆ ವಿವಿಧ ಕಡೆಗಳಲ್ಲಿ ರಕ್ತದಾನಿಗಳ ಮೂಲಕ ರಕ್ತ ಸಂಗ್ರಹಕ್ಕೆ ಮನವಿ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಕೊರತೆ ನೀಗುವ ಸಾಧ್ಯತೆ ಇದೆ.
    – ಪ್ರಭಾಕರ ಶರ್ಮ, ಕಾರ್ಯದರ್ಶಿ, ರೆಡ್‌ಕ್ರಾಸ್, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts