More

    Web Exclusive | ಕರೊನಾ ಕಾಲದಲ್ಲಿ ರಕ್ತ ಸಂಗ್ರಹದ ಮಹತ್ಕಾರ್ಯ: ವಿಶ್ವ ಹಿಂದು ಪರಿಷತ್ ಕರೆಗೆ ಸ್ಪಂದಿಸಿದ ಯುವಜನ

    ಜಗದೀಶ ಹೊಂಬಳಿ ಬೆಳಗಾವಿ

    ಇಡೀ ವಿಶ್ವವೇ ಕರೊನಾ ಮಹಾಮಾರಿಯಿಂದ ತತ್ತರಿಸುತ್ತಿದ್ದು, ಎಲ್ಲೆಲ್ಲೂ ಜೀವಭಯ ಆವರಿಸುತ್ತಿದೆ. ಕರೊನಾ ನಿಯಂತ್ರಣಕ್ಕಾಗಿ ಮತ್ತೊಮ್ಮೆ ಮನುಕುಲ ಲಾಕ್​ಡೌನ್ ಬಂಧನಕ್ಕೆ ಒಳಗಾಗುವ ಲಕ್ಷಣ ಗೋಚರವಾಗುತ್ತಿವೆ. ಎಲ್ಲರೂ ಕರೊನಾ ಸಾವು-ನೋವುಗಳ ಸಂಗತಿಯಲ್ಲೇ ಮುಳುಗಿದ್ದರೆ ಇತ್ತ ಬೆಳಗಾವಿಯಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಪದಾಧಿಕಾರಿಗಳು ರಕ್ತ ಸಂಗ್ರಹಿಸುವ ಮಹತ್ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 

    ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಜನತಾ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಎಲ್ಲ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ರದ್ದಾಗಿವೆ. ಹೀಗಾಗಿ ಕರೊನಾ ಸಂಕಷ್ಟ ಸಂದರ್ಭದಲ್ಲಿ ರಕ್ತದ ಕೊರತೆ ಆಗಬಾರದೆಂಬ ಉದ್ದೇಶದಿಂದ ಬೆಳಗಾವಿಯ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ನೇತೃತ್ವದಲ್ಲಿ ಜಿಲ್ಲಾದ್ಯಂತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ರಕ್ತದಾನದಂತಹ ಮಹತ್ಕಾರ್ಯದಲ್ಲಿ ಜಿಲ್ಲೆಯಲ್ಲಿ ಯುವಕರು ಸದ್ದಿಲ್ಲದೆ ತೊಡಗಿದ್ದಾರೆ.

    Web Exclusive | ಕರೊನಾ ಕಾಲದಲ್ಲಿ ರಕ್ತ ಸಂಗ್ರಹದ ಮಹತ್ಕಾರ್ಯ: ವಿಶ್ವ ಹಿಂದು ಪರಿಷತ್ ಕರೆಗೆ ಸ್ಪಂದಿಸಿದ ಯುವಜನರಕ್ತದಾನಕ್ಕೆ ಕರೆ: ಎಲ್ಲೆಡೆ ಕರೊನಾ ವರ್ತಮಾನವೇ ಮುನ್ನೆಲೆಯಲ್ಲಿ ಇರುವುದರಿಂದ ರಕ್ತದಾನ ಶಿಬಿರಗಳೂ ಸ್ಥಗಿತಗೊಂಡಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಕ್ತದ ಕೊರತೆ ಉಂಟಾಗಬಹುದೆಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳವು ಶಿಬಿರವನ್ನು ಏರ್ಪಡಿಸಿ, 40 ವರ್ಷದೊಳಗಿನವರು ರಕ್ತದಾನದಲ್ಲಿ ತೊಡಗುವಂತೆ ಕರೆ ನೀಡಿದ್ದರು. ಕೆಲವೇ ದಿನಗಳಲ್ಲಿ ಸಾವಿರಾರು ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಮಹಿಳೆಯರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ವಿಶೇಷವಾಗಿದೆ.

    ಯುವಕರಲ್ಲಿ ಜಾಗೃತಿ: ಜಿಲ್ಲೆಯಾದ್ಯಂತ ಇರುವ ವಿಎಚ್​ಪಿ ಹಾಗೂ ಬಜರಂಗ ದಳ ಕಾರ್ಯಕರ್ತರು, ತಮ್ಮ ವರಿಷ್ಠರ ಸೂಚನೆಯಂತೆ ವಿವಿಧ ಗ್ರಾಮಗಳಿಗೆ ತೆರಳಿ ಯುವಕರಲ್ಲಿ ಜಾಗೃತಿ ಮೂಡಿಸಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದಾರೆ. ಬೆಳಗಾವಿ ನಗರದಲ್ಲಿ 120 ಯುವಕರು ರಕ್ತದಾನ ಮಾಡಿದ್ದಾರೆ. ರಾಯಬಾಗ 77, ತಿಗಡಿ 45, ರಾಮದುರ್ಗ 90, ಖಾನಾಪುರದಲ್ಲಿ 150 ಜನರು ರಕ್ತ ನೀಡಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ರಕ್ತದಾನ ಶಿಬಿರ ನಡೆದಿವೆ. ಬೆಳಗಾವಿ ನಗರದಲ್ಲಿ ವಿವಿಧ ಮಹಿಳಾ ಸಂಘಟನೆಗಳೂ ರಕ್ತದಾನಕ್ಕೆ ಸಿದ್ಧರಾಗಿದ್ದಾರೆ. ವಿಎಚ್​ಪಿ ಹಾಗೂ ಬಜರಂಗ ದಳದವರು ವಾಟ್ಸ್ ಆಪ್, ಎಸ್​ಎಂಎಸ್ ಮೂಲಕ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಸಂದೇಶ ಕಳುಹಿಸುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

    ಆಸ್ಪತ್ರೆಗಳಿಗೆ ರವಾನೆ: ಸಂಗ್ರಹಿಸಿದ ರಕ್ತವನ್ನು ಜಿಲ್ಲಾಸ್ಪತ್ರೆ, ಕೆಎಲ್​ಇ ಆಸ್ಪತ್ರೆ ಹಾಗೂ ನಗರದ ಮಹಾವೀರ ಬ್ಲಡ್ ಬ್ಯಾಂಕ್, ರಾಷ್ಟ್ರೋತ್ಥಾನ ರಕ್ತ ಭಂಡಾರ ಸೇರಿ ತುರ್ತು ಅಗತ್ಯವಿರುವ ಕಡೆ ನೀಡಲಾಗುತ್ತಿದೆ. ಬಜರಂಗದಳ ಜಿಲ್ಲಾ ಸಂಯೋಜಕ ಬಾವಕಣ್ಣ ಲೋಹಾರ, ನಗರ ಸಂಯೋಜಕ ಆದಿನಾಥ ಗಾವಡೆ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ಕರ್ನಾಕಟ ಉತ್ತರ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ರಕ್ತ ಸಂಗ್ರಹಿಸಲಾಗುತ್ತಿದೆ.

    ರಕ್ತದಾನ ನಿಯಮಾವಳಿ ಸಡಿಲ

    ದೇಶಾದ್ಯಂತ ಕರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಆದೇಶಿಸಿದೆ. ಆದರೆ, ಲಸಿಕೆ ಪಡೆದವರು ಕನಿಷ್ಠ 60 ದಿನವಾದರೂ ರಕ್ತದಾನ ಮಾಡಬಾರದು ಎಂದು ಹೇಳಲಾಗುತ್ತಿತ್ತು. ಬಹುತೇಕ ರಕ್ತ ನೀಡುವವರು 30ರಿಂದ 45 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಇದೀಗ ಈ ವಯೋಮಾನದವರೇ ಲಸಿಕೆ ಪಡೆಯಬೇಕಾಗಿದ್ದರಿಂದ ಅವರು ರಕ್ತದಾನ ಮಾಡುವಂತಿಲ್ಲ. ಹೀಗಾಗಿ ರಕ್ತದ ಅಭಾವವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ರಕ್ತದಾನ ನಿಯಮಾವಳಿ ಸಡಿಲಿಸಿ ಕರೊನಾ ಲಸಿಕೆ ಪಡೆದವರು 28 ದಿನಗಳ ಬಳಿಕ ರಕ್ತದಾನ ಮಾಡಬಹುದು ಎಂದು ಈ ಹಿಂದೆ ತಿಳಿಸಿತ್ತು. ಆದರೂ ರಕ್ತ ಸಂಗ್ರಹಕ್ಕೆ ತೊಡಕಾಗುವ ಹಿನ್ನೆಲೆಯಲ್ಲಿ ಮೇ 5ರಂದು ಮತ್ತೆ ರಕ್ತದಾನ ನಿಯಮ ಸಡಿಲಿಸಿದೆ. ಲಸಿಕೆ ಪಡೆದವರು 28 ದಿನದ ಬದಲಾಗಿ ಎರಡು ವಾರ (14 ದಿನ)ದ ಬಳಿಕ ರಕ್ತ ನೀಡಬಹುದು ಎಂದು ತಿಳಿಸಿದೆ.

    ಇಡೀ ದೇಶವೇ ಕೋವಿಡ್ ಸಂಕಷ್ಟದಿಂದ ಪರದಾಡುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ರಕ್ತದ ಕೊರತೆ ಆಗಬಾರದೆಂಬ ಉದ್ದೇಶದಿಂದ ಕರೊನಾ ಲಸಿಕೆ ಪಡೆಯುವುದಕ್ಕೆ ಮುನ್ನ ರಕ್ತದಾನ ಮಾಡುವಂತೆ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುತ್ತಿದ್ದೇವೆ. ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದೆ ಬರುತ್ತಿದ್ದಾರೆ. ಈವರೆಗೆ 500ಕ್ಕೂ ಹೆಚ್ಚು ಯುವಕರು ರಕ್ತ ನೀಡಿದ್ದಾರೆ.

    | ಕೃಷ್ಣ ಭಟ್ ಕರ್ನಾಟಕ ಉತ್ತರ ಪ್ರಾಂತ ಸಹ ಕೋಶಾಧ್ಯಕ್ಷ, ವಿಎಚ್​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts