ಬ್ಯಾಡಗಿ: ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರ ಷ.ಬ್ರ.ಮೂಕಪ್ಪಸ್ವಾಮಿಗಳು ದರ್ಶನಾಶೀರ್ವಾದ ಧಾರ್ಮಿಕ ಕಾರ್ಯಕ್ರಮ ಸೆ. 3 ರಂದು ಜರುಗಲಿದೆ.
ಇಲ್ಲಿನ ಮುಪ್ಪಿನೇಶ್ವರ ಮಠದಲ್ಲಿ ಬೆಳಗ್ಗೆ 10 ಗಂಟೆಗೆ ಮಲ್ಲೂರು ರಸ್ತೆಯ ಮೂಲಕ ಮುಖ್ಯರಸ್ತೆಯ ಮೂಲಕ ವಾದ್ಯಭಜಂತ್ರಿ ಹಾಗೂ ಜಾಂಜ್ ಮೇಳಗಳ ಮೆರವಣಿಗೆ ಮೂಲಕ ಶ್ರೀಗಳು ಆಗಮಿಸಲಿದ್ದು, ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 1 ಗಂಟೆಯವರೆಗೂ ಭಕ್ತರು ಆಶೀರ್ವಾದ ಪಡೆಯಬಹುದಾಗಿದೆ. ಬಳಿಕ ಇಲ್ಲಿನ ಪಾಠಶಾಲೆಯ ವಟುಗಳಿಂದ ಶಾಸ್ತ್ರೋಕ್ತವಾಗಿ ಮಂತ್ರ ಘೋಷಣೆ, ಪೂಜಾ ಕಾರ್ಯಗಳು ಜರುಗಲಿವೆ.
ನಂದಿ ದರ್ಶನ ಮಹತ್ವ: ಶ್ರಾವಣಮಾಸ ಸೇರಿದಂತೆ ವಿಶಿಷ್ಟ ದಿನಗಳಲ್ಲಿ ಜೋಡು ನಂದೀಶ್ವರ ದರ್ಶನ ಹಾಗೂ ಆಶೀರ್ವಾದದಿಂದ ಭಕ್ತರ ಸಂಕಲ್ಪ ಈಡೇರಲಿವೆ ಎಂಬ ಪ್ರತೀತಿಯಿದೆ. ನಾಡಿನ ಮೂಲೆಮೂಲೆಯಿಂದ ಭಕ್ತರು ಶ್ರೀಗಳ ಆಶೀರ್ವಾದಕ್ಕೆ ಧಾವಿಸುತ್ತಿದ್ದಾರೆ. ಸಂತಾನ ಆಗದಿರುವರು, ರೋಗದಿಂದ ಬಳಲುವರು, ವಿವಿಧ ಸಂಕಷ್ಟಗಳು, ನಾನಾ ತೊಂದರೆಯಲ್ಲಿರುವ ಭಕ್ತರು ಜೋಡು ಶ್ರೀಗಳಿಂದ ಆಶೀರ್ವಾದ ಪಡೆದು, ಮಡೇಸ್ನಾನ ಮಾಡಿಕೊಂಡಲ್ಲಿ ಸಂಕಲ್ಪಗಳು ಈಡೇರಲಿವೆ. ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಅಜ್ಜಯನವರಿಗೆ ರಾಜ್ಯ ಹೊರರಾಜ್ಯಗಳಲ್ಲಿ ಲಕ್ಷ ಲಕ್ಷ ಭಕ್ತರಿದ್ದಾರೆ. ಇವರು ಮಾನವರೂಪಿಯಾಗಿರದೆ, ವೃಷಭ ರೂಪಿಗಳು ಎಂಬುವುದು ವಿಶೇಷವಾಗಿದೆ ಎಂದು ಶ್ರಾವಣ ಮಾಸ ಉತ್ಸವ ಸಮಿತಿ ಅಧ್ಯಕ್ಷ, ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.