More

    ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 8ಕ್ಕೆ

    ಮಂಗಳೂರು: ಅಪಾಯಕಾರಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 8ಕ್ಕೆ ಏರಿದೆ. ಇದರಲ್ಲಿ ಏಳು ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದ್ದು. ಒಂದು ಶಂಕಿತ ಪ್ರಕರಣ. ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದು, ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸೋಂಕಿತರಲ್ಲಿ ಇಬ್ಬರು ದಕ್ಷಿಣ ಕನ್ನಡ ನಿವಾಸಿಗಳಾಗಿದ್ದು, ಇತರರು ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಯವರು. ಕಪ್ಪು ಶಿಲೀಂಧ್ರ ಸೋಂಕು ತೀರಾ ಅಪರೂಪದಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ. ಕರೊನಾ ಸೋಂಕಿನ ದುಷ್ಪರಿಣಾಮ ಅತಿರೇಕ ತಲುಪಿದಾಗ ಮತ್ತು ಸೋಂಕಿತ ದೀರ್ಘ ಕಾಲ ವೆಂಟಿಲೇಟರ್‌ನಲ್ಲಿ ಉಳಿಯುವ ಸಂದರ್ಭ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್.

    ಉಡುಪಿಯಲ್ಲಿ 2 ಪ್ರಕರಣ: ಉಡುಪಿ ಜಿಲ್ಲೆಯ ಇಬ್ಬರಲ್ಲಿ ಬ್ಲಾೃಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಉಡುಪಿ ಸಂತೆಕಟ್ಟೆಯ 60 ವರ್ಷ ಪ್ರಾಯದ ಮಹಿಳೆ ಹಾಗೂ ಕಾಪು ತಾಲೂಕು ನಂದಿಕೂರಿನ 45 ವರ್ಷದ ಪುರುಷನಲ್ಲಿ ಬ್ಲಾೃಕ್ ಫಂಗಸ್ ಪತ್ತೆಯಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕಂಡುಬಂದ ಮೊದಲ ಎರಡು ಪ್ರಕರಣವಿದು. ಕೆಲವು ದಿನಗಳ ಹಿಂದೆ ಅನ್ಯ ಜಿಲ್ಲೆಯಿಂದ ಆಗಮಿಸಿದ 7 ಮಂದಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಸೋಂಕು ದೃಢಪಟ್ಟಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ವೆನ್ಲಾಕ್‌ನಲ್ಲಿದೆ ಫಂಗಸ್ ಕಾಯಿಲೆಗೆ ಚಿಕಿತ್ಸೆ
    ಕೋವಿಡ್ ಸಂಬಂಧಿ ಫಂಗಸ್ ಕಾಯಿಲೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಇದೆ. ಸಾರ್ವಜನಿಕರು ಭಯಪಡಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

    ಕೋವಿಡ್ ಸಮುಚಿತ ವರ್ತನೆ ಪಾಲಿಸಿ ಆರೋಗ್ಯದ ಮೇಲೆ ನಿಗಾವಹಿಸಬೇಕು. ಮುಖ್ಯವಾಗಿ ಗೃಹ ನಿಗಾ ಹಾಗೂ ಗುಣವಾದ ಸೋಂಕಿತರು ಮುಖ, ಕೆನ್ನೆಯ ನೋವು, ರಕ್ತಸಿಕ್ತ ಮತ್ತು ದುರ್ವಾಸನೆ ಬೀರುವ ಮೂಗಿನ ಸ್ರಾವ, ಮೂಗಿನ ಬಿಗಿತ ಮತ್ತು ಕಣ್ಣಿನ ಲಕ್ಷಣಗಳಾದ ಕಣ್ಣುಗುಡ್ಡೆಯ ಎಡಿಮಾ, ಕಣ್ಣು ಕೆಂಪಾಗುವಿಕೆ, ದೃಷ್ಟಿ ದೋಷ ಕಂಡುಬಂದಲ್ಲಿ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರ ಸಂಪರ್ಕಿಸಬೇಕು ಎಂದವರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts