More

    ಬಿಜೆಪಿ ಯುವ ಮುಖಂಡ ರಾಜು ಚಿಕ್ಕನಗೌಡರ ನಿಧನ

    ಬೆಳಗಾವಿ: ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ರಾಜು ಚಿಕ್ಕನಗೌಡರ (40) ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

    4 ದಿನಗಳ ಹಿಂದೆ ನಗರದ ಕೆಲಸ ನಿಮಿತ್ತ ಬಂದಿದ್ದ ಚಿಕ್ಕನಗೌಡರ, ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಬೆಳಗ್ಗೆ 8.30ಕ್ಕೆ ಅಪಾರ್ಟ್‌ಮೆಂಟ್ ಸಿಬ್ಬಂದಿಗೆ ಕಾಫಿ ತರುವಂತೆ ಹೇಳಿದ್ದರು. 20 ನಿಮಿಷಗಳ ಬಳಿಕ ಕಾಫಿ ತೆಗೆದುಕೊಂಡು ಹೋದಾಗ ಬಾಗಿಲು ತೆಗೆದಿಲ್ಲ. ಶೌಚಗೃಹಕ್ಕೆ ಹೋಗಿರಬೇಕೆಂದು ನೌಕರ ವಾಪಸ್ ಹೋಗಿದ್ದಾನೆ. ಆನಂತರ ಉಪಾಹಾರ ಆರ್ಡರ್ ಮಾಡಿಲ್ಲ. ಮಧ್ಯಾಹ್ನ ಊಟವನ್ನೂ ಕೇಳಿಲ್ಲ. ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನ ಬಂದು ಕಿಟಕಿಯಲ್ಲಿ ನೋಡಿದಾಗ ಬೆಡ್‌ನಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ವಿಷಯ ತಿಳಿದ ಕಬ್ಬನ್‌ಪಾರ್ಕ್ ಪೊಲೀಸರು ಸ್ಥಳಕ್ಕೆ ಹೋಗಿ ಬಾಗಿಲು ತೆಗೆದು ನೋಡಿದಾಗ ಚಿಕ್ಕನಗೌಡರ ಅಸುನೀಗಿರುವುದು ಗೊತ್ತಾಗಿದೆ. ಶವ ಪರೀಕ್ಷೆ ನಡೆಸಿದ ವೈದ್ಯರು ಹೃದಯಾಘಾತ ಆಗಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ ಎಂದು ಕಬ್ಬನ್ ಪಾರ್ಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

    ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದರಾಗಿದ್ದ ರಾಜು ಚಿಕ್ಕನಗೌಡರ, ಬೆಳಗಾವಿಯ ಆಜಂ ನಗರದಲ್ಲಿ ತಾಯಿ ಜತೆ ವಾಸಿಸುತ್ತಿದ್ದರು. ಅವಿವಾಹಿತರಾಗಿದ್ದ ರಾಜು 21 ವರ್ಷಗಳಿಂದ ಎಬಿವಿಪಿ, ಆರ್‌ಎಸ್‌ಎಸ್ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬೆಳಗಾವಿ ಜಿಲ್ಲಾ ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿಜೆಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ, ಯುವ ಮೋರ್ಚಾ ಕಾರ್ಯದರ್ಶಿ ಸೇರಿದಂತೆ ಪಕ್ಷದ ವಿವಿಧ ವಿಭಾಗಗಳಲ್ಲಿ ರಾಜು ಕೆಲಸ ಮಾಡಿದ್ದರು. ಮೃತರಿಗೆ ತಾಯಿ, ಸಹೋದರ, ಸಹೋದರಿ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts