More

    ರಾಜ್ಯದಲ್ಲಿ ಬಿಜೆಪಿ ಸಿಂಗಲ್ ಡಿಜಿಟ್

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸಾಧನೆ ಸಿಂಗಲ್ ಡಿಜಿಟ್​ಗೆ ಸೀಮಿತಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

    ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಸತ್ಯ-ಸುಳ್ಳು, ಪ್ರೀತಿ-ದ್ವೇಷ ಹಾಗೂ ಜೋಡಣೆ-ವಿಭಜನೆ ನಡುವಿನ ಹೋರಾಟವಾಗಿದೆ. ಬಿಜೆಪಿಯವರು ಮೀಸಲಾತಿ ಹಾಗೂ ಸಂವಿಧಾನ ವಿರೋಧಿಗಳು. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂದು ತೋರಿಕೆಗೆ ಜಾಹೀರಾತು ಕೊಟ್ಟಿದ್ದಾರೆ ಎಂದು ಟೀಕಿಸಿದರು.

    ರಾಜಕೀಯ ಲಾಭ ಇದ್ದಾಗ ಮಾತ್ರ ಬಿಜೆಪಿಯವರು ಮಹಿಳೆಯರ ಮೇಲಿನ ಲೈಂಗಿಕ, ದೌರ್ಜನ್ಯ ಪ್ರಕರಣವನ್ನು ಬಳಸಿಕೊಳ್ಳುತ್ತಾರೆ. ಸಂಸದ ಬ್ರಿಜ್​ಭೂಷಣ ಸಿಂಗ್ ಮೇಲೆ ಮಹಿಳಾ ಕುಸ್ತಿ ಪಟುಗಳು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೇಲಾಗಿ ಅವರ ಪುತ್ರನಿಗೆ ಟಿಕೆಟ್ ನೀಡಲಾಗಿದೆ. ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೂ ಮೌನ ವಹಿಸಿದರು ಎಂದು ಆರೋಪಿಸಿದರು.

    ರಾಕ್ಷಸ ರಾಜ್ಯ

    ಭಾರತೀಯರು ನಮ್ಮ ದೇಶದ ಪ್ರಜೆಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅಮೆರಿಕಾ ಮತ್ತು ಕೆನಡಾ ದೇಶಗಳು ಆರೋಪಿಸಿರುವುದು ಗಂಭೀರ ವಿಚಾರವಾಗಿದೆ. ನೇಪಾಳದಂಥ ಹಿಂದು ರಾಷ್ಟ್ರ, ಮಾಲ್ದೀವ್ಸ್, ಭೂತಾನ್​ನಂಥ ನೆರೆ ರಾಷ್ಟ್ರಗಳ ಜತೆಯೂ ನಮ್ಮ ಸಂಬಂಧಗಳು ಉತ್ತಮವಾಗಿಲ್ಲ. ಮೋದಿ ಅವರ ಕಾಲದಲ್ಲಿ ಭಾರತ ಒಂದು ರಾಕ್ಷಸ ರಾಜ್ಯವಾಗುತ್ತಿದೆ ಎಂದು ದೂರಿದರು.

    ದೇಶದ ಗಡಿ ಭಾಗವನ್ನು ಅತಿಕ್ರಮಿಸಿದರೂ ಚೀನಾ ವಿರುದ್ಧ ಪ್ರಧಾನಿ ಮಾತನಾಡುತ್ತಿಲ್ಲ. ಆ ದೇಶದಿಂದ ಭಾರತಕ್ಕೆ ಆಮದಾಗುತ್ತಿರುವ ವಸ್ತುಗಳ ಪ್ರಮಾಣ ಹೆಚ್ಚಾಗಿದೆ. ಇದೆಲ್ಲ ಬಿಜೆಪಿ ಸರ್ಕಾರ ದ್ವಂದ್ವ ನೀತಿಯನ್ನು ಬಿಂಬಿಸುತ್ತದೆ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಪ್ರಮುಖರಾದ ಅನಿಲಕುಮಾರ ಪಾಟೀಲ, ಮೋಹನ ಹಿರೇಮನಿ, ಅಲ್ತಾಫ್ ಹಳ್ಳೂರ, ಕವಿತಾ ರೆಡ್ಡಿ, ರಾಜೇಶ್ವರಿ ಪಾಟೀಲ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts