More

    ಸುಳ್ಳು ಹೇಳಿ ಅಧಿಕಾರ ಹಿಡಿಯುವ ಆಸೆ ನಮಗಿಲ್ಲ: ಕಳಸಾ ಬಂಡೂರಿ, ಮಹದಾಯಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ: ಸಿಎಂ ಬೊಮ್ಮಾಯಿ

    ಗದಗ:

    ಕಳಸಾ ಬಂಡೂರಿ ಕುರಿತು ಮಾತನಾಡುವ ಹಕ್ಕು ಕಾಂಗ್ರೆಸ್ಸಿಗಿಲ್ಲ. ಕರ್ನಾಟಕ ರಾಜ್ಯಕ್ಕೆ ಒಂದು ಹನಿಯೂ ಮಹಾದಾಯಿ, ಕಳಸಾ ಬಂಡೂರಿ ನೀರು ಹರಿಸುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದನ್ನು ಕಾಂಗ್ರೆಸ್ ಮರೆತಂತೆ ನಟಿಸುತ್ತಿದೆ ಎಂದು ಸಿಎಂ ಬೊಮ್ಮಾಯಿ ಆರೋಪಿಸಿದರು.

    ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಶುಕ್ರವಾರ ಜರುಗಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ನವಲಗುಂದದಲ್ಲಿ ರೈತರನ್ನು, ರೈತ ಮಹಿಳೆಯರನ್ನು ಲಾಠಿಯಿಂದ ಹೊಡೆಸಿದ್ದು ಯಾರು ಸ್ವಾಮಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

    ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ, ಪ್ರತಿ ಮಹಿಳೆಗೆ 1 ಸಾವಿರ ರೂ, ಯೋಜನೆ ರೈತ ವಿದ್ಯಾನಿಧಿ ಕಾರ್ಯಕ್ರಮಗಳು ಜನಮಾನಸದಲ್ಲಿವೆ. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ರೈತ ಮಕ್ಕಳ ಶಿಕ್ಷಣಕ್ಕೆ ವಿದ್ಯಾ ನಿಧಿ ನೀಡುವ ಕಲ್ಪನೆಯೆ ಹೊರ ಹೊಮ್ಮಲಿಲ್ಲ. ಕಾರ್ಮಿಕ ಮಕ್ಕಳಿಗೂ ವಿದ್ಯಾನಿಧಿ ಕೊಟ್ಟಿದ್ದೇವೆ. ರೈತರು ಸಹಜವಾಗಿ ನಿಧನಹೊಂದಿದರೂ 2 ಲಕ್ಷ ರೂ, ಯೋಜನೆ, ವಿದ್ಯಾರ್ಥಿನಿಗೆ ಉಚಿತ ಬಸ್ ಪಾಸ್ ಸೇರಿದಂತೆ ಹಲವು ಯೋಜನೆಗಳನ್ನು ಬಿಜೆಪಿ ಜಾರಿ ತಂದಿದೆ. ಜನರು ಸ್ವಾಭಿಮಾನ ಬದುಕು ನಡೆಸುವಂತೆ ಬಿಜೆಪಿ ಕಾರ್ಯ ರೂಪಿಸುತ್ತಿದೆ ಎಂದು ಹೇಳಿದ ಸಿಎಂ ಇಲ್ಲಿ ನೆರದ ಜನ ನೋಡಿದರೆ ಇದು ವಿಜಯ ಸಂಕಲ್ಪ ಯಾತ್ರೆಯಲ್ಲ. ವಿಜಯೋತ್ಸವ ಯಾತ್ರೆ ಎಂದು ಜನರನ್ನು ಹುರುದುಂಬಿಸಿದರು.

    ಸಂಕಲ್ಪ ಯಾತ್ರೆ ನೇತೃತ್ವ ವಹಿಸಿದ್ದ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ನರಗುಂದ ಕ್ಷೇತ್ರಕ್ಕೆ 2000 ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇನೆ. ನರಗುಂದ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ಕ್ಷೇತ್ರ ಎಂದು ಘೋಷಿಸಬಹುದು ಎಂದರು.

    ಮುರಗೇಶ ನಿರಾಣಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಅನಿಲ ಮೆಣಸಿನಕಾಯಿ, ರಾಜು ಕುರಡಗಿ, ಜಿಲ್ಲಾಧ್ಯಕ್ಷ ಮುತ್ತಣ ಲಿಂಗನಗೌಡ್ರ ಇತರರು ಇದ್ದರು.


    ಕೋಟ್:
    ದಲಿತರಿಗೆ, ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ನಿಂದ ಅವಮಾನ ಆಗಿದೆ. ಅಂ
    ಬೇಡ್ಕರ್ ನಿಧನ ಹೊಂದಿದ ನಂತರ ದಿಲ್ಲಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್ ಜಾಗ ನೀಡದೇ ಅಪಮಾನ ಮಾಡಿತು. ಬಿಜೆಪಿ ಸರ್ಕಾರ ಪಜಾ, ಪಪಂ ಗೆ ಮೀಸಲಾತಿ ಹೆಚ್ಚಿಸಿ ಪಜಾ, ಪಪಂ ಗೌರವ ಎತ್ತಿ ಹಿಡಿದೆ.

    • ಗೋವಿಂದ ಕಾರಜೋಳ, ಸಚಿವ

    ಕೋಟ್:
    ಈಡಿಗ, ಗಾಣಿಗ, ಹಡಪದ ಸಮಾಜ ಸೇರಿದಂತೆ ಹಲವು ಸಮಾಜಗಳ ಏಳ್ಗೆಗೆ ಸಿಎಂ ಬೊಮ್ಮಾಯಿ ಶ್ರಮಿಸಿದ್ದಾರೆ. ಸರ್ವ ಸಮುದಾಯ ಅಭಿವೃದ್ಧಿಯನ್ನು ಸಿಎಂ ಯೋಚಿಸುತ್ತಾರೆ. ಹಾಗೆಯೇ ಸಿ.ಸಿ ಪಾಟೀಲ ಕೂಡ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ.

    • ಲಕ್ಷ್ಮಣ ಸವದಿ

    ಬಾಕ್ಸ್
    ಆಣೆ ಮಾಡಿ ಹೇಳಿ ಸಿದ್ದರಾಮಯ್ಯ: ಸಿ.ಸಿ ಪಾಟೀಲ ಸವಾಲ್
    ರೋಣ ಭಾಗದ ಮಲ್ಲಾಪುರ ಭಾಗದಲ್ಲಿ 5 ಕಿಮೀ ಕೆಟ್ಟಿದ್ದನ್ನು ಒಪ್ಪಿಕೊಳ್ಳುತ್ತೇನೆ. ಕ್ಷೇತ್ರದಲ್ಲಿ ಜರುಗಿದ ನಿಮ್ಮ ಪ್ರಜಾಧ್ವನಿ ಯಾತ್ರೆಯಲ್ಲಿ ಅದನ್ನೇ ದೊಡ್ಡದಾಗಿ ಬಿಂಬಿಸಿದ್ದಿರಿ. ಆದರೆ, ಪ್ರತಿಯೊಂದು ಹಳ್ಳಿಗೂ ರಸ್ತೆ ಕಲ್ಪಿಸಿದ್ದೇನೆ. ಅಧಿವೇಶನ ಸಂದರ್ಭದಲ್ಲಿ ಸಿ.ಸಿ. ಪಾಟೀಲ ಉತ್ತಮ ಕೆಲಸ ಮಾಡಿದ್ದಾರೆ ಎಂದು ನೀವೇ ಹೇಳಿದ್ದನ್ನು ಚಾಮುಂಡಿ ತಾಯಿ ಆಣೆ ಮಾಡಿ ಹೇಳಿ ಎಂದು ಸಿದ್ದರಾಮಯ್ಯಗೆ ಸವಾಲೆಸೆದರು.

    ಬಾಕ್ಸ್:
    ಪ್ರಧಾನಿ ಮೋದಿ ಕರೆ:
    ವಿಜಯ ಸಂಕಲ್ಪ ಯಾತ್ರೆ ಆರಂಭದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿದ್ದರು. ಈ ಹಿನ್ನೆಲೆ ಎರೆಡು ನಿಮಿಷಗಳ ಕಾಲದ ನಂತರ ಕಾರ್ಯಕ್ರಮ ಆರಂಭವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts