More

    ಸತತ ಎರಡು ಲೋಕಸಭೆ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿಗೆ ಕೈಗೆಟಕುತ್ತಿಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳು

    ನವದೆಹಲಿ: ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿಗೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಕಷ್ಟವಾಗುತ್ತಿದೆ. ದೆಹಲಿಯಲ್ಲಿ ಅಧಿಕಾರ ಹಿಡಿಯುವ ಯತ್ನವೂ ಇಂದು ಫಲಕೊಡಲಿಲ್ಲ.  ಕಳೆದ ಎರಡು ವರ್ಷಗಳಲ್ಲಿ ಒಟ್ಟು ಆರು ರಾಜ್ಯಗಳಲ್ಲಿ ಅಧಿಕಾರ ಬಿಜೆಪಿಯ ಕೈತಪ್ಪಿದೆ.

    2018ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ್​ಗಳನ್ನು ಕಳೆದುಕೊಂಡ ಬಿಜೆಪಿಗೆ, 2019ರಲ್ಲಿ ಮಹಾರಾಷ್ಟ್ರ, ಜಾರ್ಖಂಡ ಕೈತಪ್ಪಿದ್ದವು. ಈ ಮಧ್ಯೆ 2018ರಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ ಮೈತ್ರಿ ಕಳಚಿಕೊಂಡಿತ್ತು. ಈಗ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ಕನಸೂ ಭಗ್ನಗೊಂಡಿತು.

    ದೆಹಲಿಯಲ್ಲಿ ಕಳೆದ 2015ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿದೆ. ಆದರೆ ಆಪ್​ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ.

    ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಕಳೆದೆರಡು ವರ್ಷಗಳಿಂದ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇಂದು ದೆಹಲಿಯಲ್ಲಿ ಬಿಜೆಪಿ ಸೋಲುವ ಮೂಲಕ ಒಟ್ಟು 12 ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರ ಇರುವಂತಾಗಿದೆ.
    ಇತ್ತೀಚೆಗೆ ಜಾರ್ಖಂಡ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಕೂಡ ಬಿಜೆಪಿಗೆ ಹಿನ್ನಡೆಯಾಗಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆಗೆ ಬೇಕಾಗುವಷ್ಟು ಸೀಟುಗಳು ಇರಲಿಲ್ಲ. ಅಲ್ಲಿ ನಡೆದಿದ್ದ ಹೈಡ್ರಾಮಾ ದೇಶಾದ್ಯಂತ ಸುದ್ದಿಯಾಗಿತ್ತು. ಕೊನೆಗೂ ಎನ್​ಸಿಪಿ-ಶಿವಸೇನಾ-ಕಾಂಗ್ರೆಸ್​ ಮೈತ್ರಿ ಸರ್ಕಾರ ಅಲ್ಲಿ ಅಧಿಕಾರ ಹಿಡಿದಿದೆ.

    ಸದ್ಯ ಎನ್​ಡಿಎ ಸರ್ಕಾರ(ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು) ಒಟ್ಟು 16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ.  ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ್​, ಪಂಜಾಬ್​, ಪುದುಚೇರಿ, ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್​ ಸರ್ಕಾರ ಇದೆ. ಅದರಲ್ಲಿ ಕೆಲವು ಕಡೆ ಸ್ವತಃ ಸರ್ಕಾರ ರಚನೆ ಮಾಡಿದ್ದರೆ, ಇನ್ನೂ ಒಂದಷ್ಟು ಕಡೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದೆ. 2019ರವರೆಗೂ ಜಾರ್ಖಂಡ್​ನಲ್ಲಿ ಬಿಜೆಪಿ ಸರ್ಕಾರ ಇತ್ತು. ಆದರೆ 2019ರ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಅಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ಬದಿಗೆ ಇಡುವುದೇ ಉದ್ದೇಶವನ್ನಾಗಿಟ್ಟುಕೊಂಡಿರುವ ಕಾಂಗ್ರೆಸ್​ ಹೀಗೆ ಮೈತ್ರಿಗೆ ಸಾರಾ ಸಗಾಟವಾಗಿ ಮುಂದಾಗುತ್ತಿದೆ.

    ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷ ಮೂರನೇ ಬಾರಿಗೆ ಅಧಿಕಾರಕ್ಕೇರುತ್ತಿದೆ. ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಕೇರಳದಲ್ಲಿ ಸಿಪಿಎಂ ನೇತೃತ್ವದ ಸಮ್ಮಿಶ್ರ ಸರ್ಕಾರ, ಆಂಧ್ರಪ್ರದೇಶದಲ್ಲಿ ವೈಎಸ್​ಆರ್​ ಕಾಂಗ್ರೆಸ್​, ಒಡಿಶಾದಲ್ಲಿ ಬಿಜೆಡಿ ಹಾಗೂ ತೆಲಂಗಾಣದಲ್ಲಿ ಟಿಆರ್​ಎಸ್​ ಪಕ್ಷಗಳು ಸರ್ಕಾರ ರಚನೆ ಮಾಡಿದ್ದರೆ, ತಮಿಳುನಾಡಿನಲ್ಲಿ ಎಐಎಡಿಎಂಕೆ ಅಧಿಕಾರದಲ್ಲಿದೆ.

    ಆಂಧ್ರಪ್ರದೇಶದಲ್ಲಿ ಬಿಜೆಪಿ-ಟಿಡಿಪಿ ಮೈತ್ರಿ ಇತ್ತು. ಆದರೆ 2018ರ ಮಾರ್ಚ್​ನಲ್ಲಿ ಟಿಡಿಪಿಯ ಚಂದ್ರಬಾಬು ನಾಯ್ಡು ಎನ್​ಡಿಎಯಿಂದ ಹೊರಬಂದಿದ್ದರು. ಅದಾದ ಬಳಿಕ 2019ರ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ವೈ.ಎಸ್​. ಜಗನ್​ಮೋಹನ್​ ರೆಡ್ಡಿಯವರ ವೈಎಸ್​ಆರ್​ ಪಕ್ಷ ಬಹುಮತಗಳೊಂದಿಗೆ ಸರ್ಕಾರ ರಚನೆ ಮಾಡಿತು.

    ಮಹಾರಾಷ್ಟ್ರದಲ್ಲಿ ಈ ಬಾರಿಯ ಚುನಾವಣೆಯ ಬಳಿಕ ಎನ್​ಡಿಎ ಕೂಟದಿಂದ ಹೊರಬಿದ್ದ ಶಿವಸೇನಾ ಎನ್​ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಿತು. ಅಲ್ಲಿಯವರೆಗೂ ಇದ್ದ ಬಿಜೆಪಿ ಸರ್ಕಾರದ ಆಡಳಿತ ಕೊನೆಗೊಂಡಿತು.

    2017ರ ಡಿಸೆಂಬರ್​ನಲ್ಲಿ ಒಟ್ಟು 19 ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳು(ಎನ್​ಡಿಎ) ಅಧಿಕಾರದಲ್ಲಿದ್ದವು. 2018ರಲ್ಲಿ ಮಧ್ಯಪ್ರದೇಶ, ಛತ್ತೀಸ್​ಗಢ ಹಾಗೂ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿತು. ಬಿಜೆಪಿಗೆ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಒಂದಾದ ಮೇಲೆ ಒಂದರಂತೆ ಸೋಲುಗಳು ಎದುರಾಗುತ್ತಿವೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts