More

    ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ!

    ವಿಜಯಪುರ: ಜನತಾ ಪರಿವಾರ ಒಂದಾಗಿದ್ದರೆ ಯಾವ ಕಾರಣಕ್ಕೂ ಇವತ್ತಿಗೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ವಿಜಯಪುರದಲ್ಲಿ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ ನೀಡಿ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದ್ದಾರೆ.

    ವಿಜಯಪುರದಲ್ಲಿ ರಾಜ್ಯ ಸರ್ಕಾರದ ಬಗೆಗಿನ ತಮ್ಮ ಅಸಮಾಧಾನವನ್ನು ಹೊರ ಹಾಕಿದ ಬಿಜೆಪಿ ಹಿರಿಯ ನಾಯಕ ರಮೇಶ್​ ಜಿಗಜಿಣಗಿ, ‘ಜನತಾ ಪರಿವಾರ ಒಣದಾಗಿದ್ದರೆ ಇಂದು ಒಂದು ಸಲ ಕಾಂಗ್ರೆಸ್ ಒಂದು ಸಲ ಜನತಾ ಪರಿವಾರವೇ ರಾಜ್ಯವನ್ನು ಮುಂದುವರಿಸಿಕೊಂಡು ಹೋಗ್ತಿತ್ತು. ನನ್ನ ಪಕ್ಷದ ಬಗ್ಗೆ ಅಭಿಮಾನವಿದೆ. ನಾನು ಎಂದೂ ಕೂಡಾ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ. ನಮ್ಮ ನಾಯಕ ನರೇಂದ್ರ ಮೋದಿ ಬಗ್ಗೆ ಅತ್ಯಂತ ಅಭಿಮಾನವಿದೆ’ ಎಂದಿದ್ದಾರೆ.

    ರಾಜ್ಯ ರಾಜಕಾರಣದಿಂದ, ಸರ್ಕಾರದಿಂದ ಹಿರಿಯರು ದೂರ ಉಳಿಯುತ್ತಿದ್ದು ಈ ಸಂದರ್ಭ ರಾಜ್ಯ ರಾಜಕಾರಣಲ್ಲಿ ಎಲ್ಲವೂ ಸರಿಯಾಗಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ರಾಜ್ಯ ಸರ್ಕಾರದಲ್ಲಿ ಯಾವುದೂ ನಿರ್ಣಯವಾಗಿರಲಿಲ್ಲ. ನಿರ್ಣಯ ಆಗೋಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಸರಿಯಾಗಿ ನಡೆದಿಲ್ಲ. ನಾನು ಸರ್ಕಾರದಿಂದ ದೂರವಿದ್ದೇನೆ, ಸಣ್ಣಪುಟ್ಟ ಯಾವುದೇ ಕೆಲಸಗಳು ಆಗ್ತಿಲ್ಲ. ಸರ್ಕಾರ ಸರಿಯಾಗಿ ನಡೆದಿಲ್ಲ’ ಎಂದು ಸಂಸದರು ಅಸಮಾಧಾನ ಹೊರಹಾಕಿದ್ದಾರೆ.

    ‘ನಾನು ಬೇರೆ ರಾಜಕಾರಣಿಗಳಿಗಿಂತ ಭಿನ್ನವಾಗಿದ್ದೇನೆ.‌ ರಮೇಶ ಜಿಗಜಿಣಗಿಯದು ಬಿಜೆಪಿಗೆ ಕೊಡುಗೆ ಏನು ಅನ್ನೋದು ಹಿರಿಯ ನಾಯಕರಿಗೆ ಗೊತ್ತಿದೆ. ಆದ್ರೆ ಛೋಟಾ ಮೋಟಾ ಲೀಡರ್ ಇರ್ತಾರಲ್ಲ. ಅವರು ಇವನ (ರಮೇಶ ಜಿಗಜಿಣಗಿ) ಕೊಡುಗೆ ಏನಪ್ಪಾ? ವಿಜಯಪುರಕ್ಕೆ 1ಲಕ್ಷ ಕೋಟಿ ತಂದಿದ್ದರೂ ಏನು ಮಾಡಿದ್ದಾರೆ ಅಂತ ಕೇಳುತ್ತಾರೆ. ರಾಜ್ಯದಲ್ಲಿ ಎರಡನೇ ಹಂತದ ನಾಯಕರು ರಮೇಶ ಜಿಗಜಿಣಗಿ ಕೊಡುಗೆ ಏನು ಅಂತ ಕೇಳ್ತಾರೆ. ಇದು ಬಹಳ ಸಣ್ಣತನ ಅವರದು. 2004ರಲ್ಲಿ ರಾಮಕೃಷ್ಣ ಹೆಗಡೆ ನಿಧನ ಹೊಂದಿದ ಮೇಲೆ. ನಾನು ಮೊಟ್ಟ ಮೊದಲ ಬಿಜೆಪಿಗೆ ಸೇರ್ಪಡೆಯಾದ ವ್ಯಕ್ತಿ.

    ಆಗ ಇಡೀ ರಾಜ್ಯದ ದಲಿತ ಜನ ನನ್ನನ್ನು ತೆಗಳಿದ್ರು. ಯಾಕೆ ಬಿಜೆಪಿಗೆ ಹೋಗ್ತೀರಿ ಅದು ಜಾತಿವಾದಿ ಪಕ್ಷ, ಅಂತಹದ್ದು ಇಂತಹದ್ದು ಎಂದು ಬೈದರು. ನನ್ನ ಸಮಾಜದ ತೆಗಳಿಕೆ ಮೀರಿ ಬಿಜೆಪಿಗೆ ಸೇರ್ಪಡೆಯಾದೆ. ಅಲ್ಲಿತನ ಒಬ್ಬರೇ ಬಿಜೆಪಿಗೆ ಸೇರ್ಪಡೆ ಆಗಿದ್ರಾ? ದಲಿತರಷ್ಟೇ ಅಲ್ಲ ಯಾವ ಲಿಂಗಾಯತರು ಬಿಜೆಪಿಗೆ ಸೇರ್ಪಡೆ ಆಗಿರಲಿಲ್ಲ. ಎಲ್ಲರೂ ನನ್ನ ಕಡೆ ನೋಡಿಕೊಂಡು ಕುಳಿತ್ತಿದ್ದರು. ಜನತಾ ಪರಿವಾರದಲ್ಲಿ ಅಂದು ರಮೇಶ ಜಿಗಜಿಣಗಿ ಮುಖ್ಯವಾದ ಮನುಷ್ಯನಾಗಿದ್ದ. ರಾಮಕೃಷ್ಣ ಹೆಗಡೆ, ಪಟೇಲರ ಶಿಷ್ಯನಾಗಿ ಬೆಳೆದವನು ನಾನು. ಮುಖ್ಯವಾದವನೇ ಸುಮ್ಮನೆ ಇದ್ದಾನೆ ಅಂದ್ರೆ ಎಲ್ಲಿಯೂ ಹೋಗೋದು ಬೇಡ ಎಂದು ಇಡೀ ಜನತಾ ಪರಿವಾರ ಸುಮ್ಮನೆ ಇತ್ತು. ಇದೆಲ್ಲಾ ಮೀರಿ ಬಿಜೆಪಿಗೆ ಸೇರ್ಪಡೆಯಾಗಿದ್ದು ನನ್ನ ದೊಡ್ಡ ಕೊಡುಗೆ ಅಲ್ವಾ?’ ಎಂದು ಒಳಗೆ ಹುದುಗಿದ್ದ ಅಸಮಾಧಾನವನ್ನು ಅವರು ಹೊರಹಾಕಿದರು.

    ‘ಬನ್ನಿ ಯಾರು ಪ್ರಶ್ನೆ ಮಾಡ್ತೀರಿ ಹೇಳ್ತಿನಿ’ ಎಂದು ರಮೇಶ್ ಜಿಗಜಿಣಗಿ ಸವಾಲು ಹಾಕಿದ್ದು ‘ಅವೊತ್ತು ಒಂದು ವೇಳೆ ನಮ್ಮ ಜನತಾ ಪರಿವಾರದ ದೇವೇಗೌಡರ ಪಕ್ಷ ನಾನು ಸೇರ್ಪಡೆ ಆಗಿದ್ದರೆ ಇವತ್ತು ಬಿಜೆಪಿ ಅಧಿಕಾರಕ್ಕೆ ಬರ್ತಿತ್ತಾ? ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿಕ್ಕೆ ನಾನೂ ಒಬ್ಬ ಕಾರಣ’ ಎಂದು ಸಂಸದ ರಮೇಶ ಜಿಗಜಿಣಗಿ. ಹೇಳಿದರು.

    ‘ರಾಮಕೃಷ್ಣ ಹೆಗಡೆ, ಪಟೇಲರು ಬದುಕಿದ್ದಾಗ ಯಡಿಯೂರಪ್ಪ, ಅನಂತಕುಮಾರ್, ಸದಾನಂದ ಗೌಡರು, ಶಿವಮೊಗ್ಗದ ಹಿಂದುಳಿದ ನಾಯಕ ಎಲ್ಲರೂ ರಾಜ್ಯದ ತುಂಬಾ ಚಪ್ಪಲು(ಪಾದರಕ್ಷೆ), ಅಂಗಿ ಹರಕೊಂಡು ಓಡಾಡಿದ್ರು. ಆಗ ಬಿಜೆಪಿ ಅಧಿಕಾರಕ್ಕೆ ಯಾಕೆ ಬರಲಿಲ್ಲ? 2004ರಲ್ಲಿ ನಾವೆಲ್ಲ ಬಿಜೆಪಿಗೆ ಸೇರ್ಪಡೆಯಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದನ್ನು ಮರೆತಿದ್ದಾರೆ, ದೊಡ್ಡವರೆಲ್ಲರಿಗೂ ಇದು ಗೊತ್ತಿದೆ ಕೊಡುಗೆ ಏನು ಅನ್ನೋದು. ಆದ್ರೆ ಈ ಛೋಟಾ ಮೋಟಾ ಸಣ್ಣವರು ಕೇಳ್ತಾರೆ’ ಎಂದು ರಮೇಶ್​ ಜಿಗಜಿಣಗಿ ಟಾಂಗ್​ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts