More

    ದಲಿತರ ಅನುದಾನಕ್ಕೆ ಕಾಂಗ್ರೆಸ್ ಕನ್ನ

    ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ೧೧,೫೦೦ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಬಳಸಿ ಪರಿಶಿಷ್ಟರಿಗೆ ದೊಡ್ಡ ಹೊಡೆತ ನೀಡಿರುವುದನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.
    ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ನಿರಂತರ ದಲಿತರನ್ನು ತುಳಿಯುವ ಪ್ರಯತ್ನ ನಡೆದಿದೆ. ಬಾಯಿ ಮಾತಿನಲ್ಲಿ ಕಾಳಜಿ ತೋರಿಸುತ್ತಿರುವ ಕಾಂಗ್ರೆಸಿಗರು, ಆಡಳಿತದಲ್ಲಿ ದಲಿತರ ಅಭಿವೃದ್ಧಿಯನ್ನೇ ಮರೆತ್ತಿದ್ದಾರೆ. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಮೋಸ ಮಾಡಿದ್ದಾರೆ. ದಲಿತರ ಹಿತರಕ್ಷಣೆ ಮಾಡಬೇಕಿದ್ದ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಅನ್ಯಾಯದ ವಿರುದ್ಧ ಚಕಾರ ಎತ್ತುತ್ತಿಲ್ಲ ಎಂದು ಹರಿಹಾಯ್ದರು.

    ಎಸ್ಸಿ, ಎಸ್ಟಿ ಗೃಹ ನಿರ್ಮಾಣ ಸ್ಥಗಿತವಾಗಿದ್ದು, ರೈತ ನಿಧಿಯಡಿ ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಬಂದ್ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿ ೪,೦೦೦ ರೂ. ನೀಡದೆ ಸಂಕಷ್ಟದಲ್ಲಿರುವ ದಲಿತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿದರು.

    ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಮೇಯರ್ ವಿಶಾಲ ದರ್ಗಿ, ಪಕ್ಷದ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಪ್ರಮುಖರಾದ ಅಂಬಾರಾಯ ಅಷ್ಟಗಿ, ಅರುಣಕುಮಾರ ಪಾಟೀಲ್, ಶಿವಯೋಗಿ ನಾಗನಹಳ್ಳಿ, ಧರ್ಮಣ್ಣ ಇಟಗಾ, ಸಂತೋಷ ಹಾದಿಮನಿ, ಮಹಾದೇವ ಬೆಳಮಗಿ, ಉಮೇಶ ಪಾಟೀಲ್, ರಾಜು ವಾಡೇಕರ್, ಭಾಗೀರಥಿ ಗುನ್ನಾಪುರ, ಶೋಭಾ ಪಾಟೀಲ್, ಮಲ್ಲು ಉದನೂರ, ಗೌರಿ ಚಿಚಕೋಟೆ, ವಿಜಯಲಕ್ಷ್ಮೀ ಗೊಬ್ಬೂರ, ಬಾಬುರಾವ ಹಾಗರಗುಂಡಗಿ ಇತರರಿದ್ದರು. ಬೇಡಿಕೆಗಳ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

    ಮಾತೆತ್ತಿದ್ದರೆ ದಲಿತ ಪರ ಎನ್ನುವ ಮಂತ್ರಿಗಳು ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ. ದಲಿತ ಸಮುದಾಯದವರಿಗೆ ಮೀಸಲಾದ ೩೫,೦೦೦ ಕೋಟಿ ರೂ.ಗಳಲ್ಲಿ ೧೧,೦೦೦ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಬಳಸಿ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ದಲಿತರ ಹಣ ಅವರ ಏಳಿಗೆಗಾಗಿ ವಾಪಸ್ ನೀಡಬೇಕು.
    | ಬಸವರಾಜ ಮತ್ತಿಮಡು ಶಾಸಕ

    ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ನೀಡುತ್ತೇನೆ ಎನ್ನುತ್ತದೆ. ಆದರೆ ದಲಿತರಿಗೆ ಮೀಸಲಿಟ್ಟಿದ್ದ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಸುತ್ತದೆ. ದಲಿತ, ದಮನಿತರ ಮಕ್ಕಳು ಅಧ್ಯಯನ ಮಾಡುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಅಭಿವೃದ್ಧಿ ಹಣವನ್ನು ಇತರ ಯೋಜನೆಗಳಿಗೆ ಬಳಸಿ ದಲಿತರು, ಹಿಂದುಳಿದವರನ್ನು ವಂಚಿಸುತ್ತಿದೆ.
    | ಚಂದು ಪಾಟೀಲ್ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts