More

    ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದ ಪ್ರತಿಪಕ್ಷಗಳಿಗೆ ಟಕ್ಕರ್ ನೀಡಿದ ಸಚಿವ ಮಾಧುಸ್ವಾಮಿ!

    ಬೆಂಗಳೂರು: ಮಾತೆತ್ತಿದರೆ ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದೀರಲ್ಲ ಕೋವಿಡ್ ನಂತರದ ಆರ್ಥಿಕ ಚೇತರಿಕೆ, ರಾಜ್ಯದ ಪ್ರಗತಿ, ಅಭಿವೃದ್ಧಿ ಕಾರ್ಯಗಳೆಲ್ಲ ಏನು? ಎಂದು ಪ್ರತಿಪಕ್ಷಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು.

    ವಿಧಾನ ಪರಿಷತ್​​ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮಾಧುಸ್ವಾಮಿ, ಸರ್ಕಾರವನ್ನು ಸಮರ್ಥಿಸಿಕೊಂಡು ಪ್ರತಿಪಕ್ಷ ಸದಸ್ಯರ ಪ್ರತಿ ಆರೋಪಗಳಿಗೂ ತಿರುಗೇಟು ನೀಡಿದರು.

    1989ರಿಂದ ಸದನದಲ್ಲಿದ್ದೇನೆ. ರಾಜ್ಯಪಾಲರ ಭಾಷಣ ಎಂದರೆ ನಾವೇನು ಮಾಡಿದ್ದೇವೆ ಮತ್ತು ಏನು ಮಾಡಲು ಹೊರಟಿದ್ದೇವೆ ಎನ್ನುವ ಕಿರುಪರಿಚಯ ಮಾತ್ರ. ಬಜೆಟ್​​ನಲ್ಲಿ ಎಲ್ಲಾ ವಿವರ ಇರಲಿದೆ. ಹಾಗಾಗಿ ಬಜೆಟ್​ನಲ್ಲಿ ಏನು ಬೇಕಾಗಬಹುದು ಎನ್ನುವ ಸಲಹೆ ನೀಡುವ ಕೆಲಸ ಪ್ರತಿಪಕ್ಷದಿಂದ ಆಗಬೇಕು. ಆದರೆ, ಅದರ ಬದಲು ಬರೀ ಟೀಕೆಗಳಿಗೆ ಮೀಸಲಾದಂತಿದೆ ಎಂದರು.

    ಮಾತೆತ್ತಿದರೆ ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎನ್ನುತ್ತೀರಿ, ಜಿಎಸ್​ಟಿ ಬಗ್ಗೆ ಟೀಕಿಸುತ್ತೀರಿ. ಕೇಂದ್ರದಿಂದ ನೇರವಾಗಿ ಬರುವ ಹಣ ಬೇರೆ, ಪರೋಕ್ಷವಾಗಿ ಬರುವ ಹಣವೇ ಬೇರೆ, ಎಂಟು ವರ್ಷದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಬಂದ ನಂತರ ಆಗಿರುವ ಅಭಿವೃದ್ಧಿ ಏನು ಎಂದು ಪಟ್ಟಿ ನೀಡಲು ಸಿದ್ದನಾಗಿದ್ದೇನೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಸುಸ್ಥಿರ ಜೀವನಕ್ಕೆ ಪೂರಕವಾಗಿ ಅನುದಾನ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

    ನಾವು ಅಧಿಕಾರ ಸ್ವೀಕಾರ ಮಾಡಿದ ಸಮಯ ಸಂಕಷ್ಟದ ಸಮಯವಾಗಿತ್ತು. ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ನೆರೆ ಹಾವಳಿ ವೀಕ್ಷಣೆಗೆ ಹೋದರು. ಸಂಪುಟ ರಚಿಸಿದರೂ ನಮಗೆ ಖಾತೆ ನೀಡದೆ ಜಿಲ್ಲೆಗಳಿಗೆ ಕಳಿಸಿದ್ದರು ಎನ್ನುತ್ತಿದ್ದಂತೆ ಜೆಡಿಎಸ್ ಸದಸ್ಯ ಶರವಣ, ಯಡಿಯೂರಪ್ಪ ಇದ್ದಾಗ ಚನ್ನಾಗಿತ್ತು ಎಂದು ಸಮ್ಮಿಶ್ರ ಸರ್ಕಾರದ ವಿಚಾರದತ್ತ ವಿಷಯ ಹೊರಳುವಂತೆ ಮಾಡಿದರು.

    ಇದನ್ನೂ ಓದಿ: ಎನ್‌ಎಚ್‌ಎಐ ಅಧಿಕಾರಿ ಲಂಚ ಪ್ರಕರಣ; 20 ಲಕ್ಷ ರೂ. ಜಪ್ತಿ ಮಾಡಿಕೊಂಡ ಇಡಿ

    ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ ಮಾಧುಸ್ವಾಮಿ, ಅದಕ್ಕೆ ಇಡೀ ನಾಡೇ ಸಾಕ್ಷಿ. ವಿಧಾನಸಭೆಯಲ್ಲಿ ಯಾರು ಯಾರ ಪರ ಕೈ ಎತ್ತಿದ್ದಾರೆ ಎಂದು ಜನತೆಯೇ ಸಾಕ್ಷಿ ಇದ್ದಾರೆ. ಒಪ್ಪಂದದಂತೆ ನಡೆದುಕೊಂಡಿದ್ದರೆ ನಾವು ಸರ್ವಕಾಲ ಋಣಿಯಾಗಿರುತ್ತಿದ್ದೆವು. ಆದರೆ, ಆಗಿದ್ದೇ ಬೇರೆ ಇದನ್ನೆಲ್ಲಾ ನೋಡಿಯೂ ನಮ್ಮ ನಂತರ ಕಾಂಗ್ರೆಸ್​ನವರೂ ಹೋಗಿ ಅಲ್ಲಿಯೇ ಸಿಲುಕಿಕೊಂಡರು ಅನುಭವಿಸಿದರು. ಇಂದು ನಾವೇ ನಮ್ಮಿಂದಲೇ ಅನ್ನುವ ಸ್ಥಿತಿ ಎದುರಿಸುವಂತಾಗಿದೆ ಎಂದು ಮೈತ್ರಿ ಸರ್ಕಾರವನ್ನು ಉಲ್ಲೇಖಿಸಿ ಟೀಕಿಸಿದರು.

    ಈ ವೇಳೆ ಅಧಿಕಾರ ಹಸ್ತಾಂತರ ಮಾಡದ್ದಕ್ಕೆ ಬಿಜೆಪಿಯೇ ಕಾರಣ ಎನ್ನುವ ಆರೋಪ ಜೆಡಿಎಸ್ ಪಾಳಯದಿಂದ ಬಂದಿದ್ದಕ್ಕೆ ಕೆಂಡವಾದ ಮಾಧುಸ್ವಾಮಿ, ಏನು ಹರಿಶ್ಚಂದ್ರಗೆ ಹುಟ್ಟಿದ್ದೀಯ? ನೀವೇಕೆ ಭಾಷಣ ಮಾಡಿದ್ದೀರಿ, ಹರಿಶ್ಚಂದ್ರರಂತೆ ಮಾತನಾಡುತ್ತೀರಿ, ಟೀಕೆ ಮಾಡುತ್ತೀರಿ ನಮ್ಮ ಟೀಕೆ ಎದುರಿಸಲ್ಲ ಎಂದರೆ ಹೇಗೆ? ಎಂದು ಶರವಣ ವಿರುದ್ಧ ವಾಗ್ದಾಳಿ ನಡೆಸಿದರು.

    ನಮ್ಮ ರಾಷ್ಟ್ರಮಟ್ಟದ ನಾಯಕರ ಮೇಲೆ ಟೀಕೆ ಮಾಡಿದಾಗ ನಾನು ಸುಮ್ಮನಿರಲಿ ಸಾಧ್ಯವಿಲ್ಲ. ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದರೆ ನಾನು ಮಾತನಾಡಲೇ ಬೇಕಲ್ಲ, ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಗೆ 5400 ಕೋಟಿ ಅನುದಾನ ಕೊಡಲಾಗಿದೆ ಇದು ಯಾರ ಕಾಲದಲ್ಲಿ ಆಗಿದ್ದು? ಎಂದು ಪ್ರಶ್ನಿಸಿದರು.

    ಈ ವೇಳೆ ನೀವು ಸರ್ಕಾರ ನಡೆಸುತ್ತಿಲ್ಲ ಮ್ಯಾನೇಜ್ ಮಾಡುತ್ತಿದ್ದೀರಿ ಎಂದು ಹರಿಪ್ರಸಾದ್ ಕುಟುಕಿದರು. ಇದಕ್ಕೆ ತಿರುಗೇಟು ನೀಡಿದ ಮಾಧುಸ್ವಾಮಿ, ಬಹಳ ಕಷ್ಟದ ದಿನದಲ್ಲಿ ನಾವು ಅಧಿಕಾರ ವಹಿಸಿಕೊಂಡಿದ್ದೆವು, ಮ್ಯಾನೇಜ್ ಮಾಡುತ್ತಿದ್ದೇವೆ ಎನ್ನುವ ಧೈರ್ಯವಾದರೂ ನಮಗೆ ಇದೆ, ನಿಮಗೆ ಅದು ಇಲ್ಲ, ಗುಲಾಮರಂತೆ ಮಾತನಾಡುತ್ತಿದ್ದೀರಿ, ವಂಶವೊಂದರ ಗುಲಾಮಗಿರಿ ಮಾಡುತ್ತಿದ್ದೀರಿ ಎಂದರು. ಚುನಾವಣೆ ಗೆಲ್ಲದೆ ಮಾತನಾಡುತ್ತಿದ್ದೀರಲ್ಲ ಎಂದು ಹರಿಪ್ರಸಾದ್ ವಿರುದ್ಧ ಮಾಧುಸ್ವಾಮಿ ಗುಡುಗಿದರು.

    ಇದಕ್ಕೆ ಟಾಂಗ್ ನೀಡಿದ ಹರಿಪ್ರಸಾದ್, ನಿಮ್ಮ ಪಕ್ಷದ ಸೂತ್ರದಾರರು, ನೇತ್ರದಾರರು ಒಂದೇ ಒಂದು ಪಂಚಾಯತ್ ಚುನಾವಣೆ ಗೆದ್ದಿಲ್ಲ, ನಿಮ್ಮ ಮೋದಿ ಒಂದೇ ಒಂದು ಪಂಚಾಯತ್​ಗೆ ನಿಲ್ಲದೆ ಸಿಎಂ ಆಗಿದ್ದರು. ನಾಗಪುರದವರು ಸೂತ್ರಧಾರಿಗಳು. ಅವರು ಯಾವ ಚುನಾವಣೆ ಎದುರಿಸಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಟಕ್ಕರ್ ನೀಡಿದ ಮಾಧುಸ್ವಾಮಿ, ಕಮಾಂಡ್ ತಂದು ಮೋದಿ ಸಿಎಂ, ಪಿಎಂ ಆಗಿಲ್ಲ, ನಿಮ್ಮ ಪ್ರಧಾನಿ ಹೇಗೆ ಆಗಿದ್ದರು ಯೋಚಿಸಿ ಎಂದರು. ಇದಕ್ಕೆ ಹರಿಪ್ರಸಾದ್ ನಿಮ್ಮ ಪ್ರಧಾನಿ ಡಿಗ್ರಿ ಮಾಡಿದ್ದಾಗಿ ಸುಳ್ಳು ಹೇಳಿದ್ದಾರೆ, ಒಂದೇ ಒಂದು ಸುದ್ದಿಗೋಷ್ಟಿ ಮಾಡಿಸಿ ನೋಡೋಣ ಎಂದು ಸವಾಲಾಕಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾಪತಿ ಮನವಿಗೂ ಸದಸ್ಯರು ಕಿವಿಗೊಡದೆ ವಾಕ್ಸಮರದಲ್ಲಿ ತೊಡಗಿದ್ದರು.

    ಇದರಿಂದ ಕೆರಳಿದ ಸಭಾಪತಿ ಬಸವರಾಜ ಹೊರಟ್ಟಿ ಸಭಾಪತಿ ಪೀಠದಲ್ಲಿ ಎದ್ದುನಿಂತು ಸದನ ನಡೆಸಲು ಬಿಡಿ, ಯಾರಿಗೆ ಬೇಕೋ ಅವರಿಗೆ ಸಚಿವರ ಉತ್ತರದ ಬಳಿಕ ಮಾತನಾಡಲು ಕಾಲಾವಕಾಶ ಕೊಡಲಾಗುತ್ತದೆ. ಮಧ್ಯೆ ಮಧ್ಯೆ ಯಾರೂ ಮಾತನಾಡದೆ ಸಚಿವರಿಗೆ ಮಾತನಾಡಲು ಬಿಡಿ ಎಂದು ತಾಕೀತು ಮಾಡಿದರು.

    ಇದನ್ನೂ ಓದಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆಪಟ್ಟಿ ಒಂದು ವಾರದಲ್ಲಿ ಪ್ರಕಟ

    ನಂತರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮಾಧುಸ್ವಾಮಿ, ಬೆಂಗಳೂರು ಮೈಸೂರು ದಶಪಥ ರಸ್ತೆ ಮಾಡಿದ್ದೇವೆ. ಎಕ್ಸ್​ಪ್ರೆಸ್ ವೇಗಳನ್ನು ಮಾಡಿದ್ದೇವೆ. ಇದೆಲ್ಲಾ ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆ. ರಸ್ತೆ ನಿರ್ಮಾಣಕ್ಕೆ ಆದ್ಯತೆ ಕೊಡಲಾಗಿದೆ. ಐದಾರು ವರ್ಷದಿಂದ ಆಗುತ್ತಿರುವ ಹೆದ್ದಾರಿ ಕಾಮಗಾರಿಗಳು ಈವರೆಗೂ ರಾಜ್ಯದಲ್ಲಿ ಎಂದೂ ಆಗಿಲ್ಲ. 64512 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, 148 ಕಿಲಿ ರೈಲ್ವೆ ಯೋಜನೆ, 9 ರೈಲ್ವೆ ಹೊಸ ಯೋಜನೆ ಮಾಡುತ್ತಿದ್ದೇವೆ. ಆರು ಹೊಸ ವಿಮಾನ ನಿಲ್ದಾಣ ಮಾಡುತ್ತಿದ್ದೇವೆ. ಸ್ವಚ್ಛ ಭಾರತ್ ಯೋಜನೆಗೆ ಯಥೇಚ್ಛವಾಗಿ ಅನುದಾನ ಕೊಟ್ಟಿದ್ದೇವೆ. ಬಂಡವಾಳ ಹೂಡಿಕೆ ಹರಿದುಬಂದಿದೆ.‌ 5400 ಕೋಟಿ ಭದ್ರಾ ಮೇಲ್ದಂಡೆಗೆ ಬಂದಿದೆ. ಕಳಸಾ ಬಂಡಾರಿ ಯೋಜನೆಗೆ ಅನುಮತಿ ಸಿಕ್ಕಿರಲಿಲ್ಲ. ಅದೂ ಈಗ ಆಗಿದೆ. ಇದು ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆಯಲ್ಲದೆ ಇನ್ನೇನು ಎಂದರು.

    ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೀರಿ, ಯಾರ ಕಾಲದಲ್ಲಿ ಇಲ್ಲ ಹೇಳಿ? ಭ್ರಷ್ಟಾಚಾರ ಮಾಡದವರು ಯಾರಿದ್ದಾರೆ? ದಾಖಲೆ ಇಟ್ಟು ಹೇಳಬೇಕು. ಮಾಹಿತಿ ಇಟ್ಟು ಭ್ರಷ್ಟರು ಎಂದರೆ ಆಗುತ್ತದೆ. ಆದರೆ ಅದು ಬಿಟ್ಟು ಸುಮ್ಮನೆ 40 ಪರ್ಸೆಂಟ್ ಸರ್ಕಾರ ಎನ್ನುತ್ತೀರಿ. ಅಭಿವೃದ್ಧಿ ಬಗ್ಗೆ ಮಾತನಾಡಲು ನಿಮಗೆ ಸಾಧ್ಯವಾಗಲಿಲ್ಲ, ನಾವು ಅತ್ಯಂತ ಪ್ರಗತಿದಾಯ ಸರ್ಕಾರ ನಡೆಸುತ್ತಿದ್ದೇವೆ. ಕೋವಿಡ್ ನಂತರ ಚೇತರಿಸಿಕೊಂಡಿದ್ದಕ್ಕೆ ಪ್ರಶಂಸೆ ಮಾಡಬೇಕಿತ್ತು. ಇಂತಹ ಪುಣ್ಯಾತ್ಮರಿಂದ ಆಯಿತು ಎನ್ನಬೇಕಿತ್ತು. ಮೂರನೇ ಅಲೆ ಬಾರದ್ದಕ್ಕೆ ಕಾರಣ ಮೋದಿ ನಾಯಕತ್ವ. ಚೀನಾ ಕೂಡ ಇದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಆದರೆ ನಾವು ತಪ್ಪಿಸಿಕೊಂಡೆವು. ಒಳ್ಳೆಯದನ್ನು ಒಳ್ಳೆಯದು ಎನ್ನಬೇಕು, ತಪ್ಪನ್ನು ಟೀಕಿಸಬೇಕು, ಬರೀ ಟೀಕೆಯನ್ನು ಸಲಹೆ ಎನ್ನಲಾಗಲ್ಲ, ಚುನಾವಣಾ ಭಾಷಣ ಇಲ್ಲಿ ಬಂದು ಮಾಡಿದರೆ ಸದನಕ್ಕೆ ಗೌರವ ಇರಲಿದೆಯಾ? ಎಂದು ಪ್ರತಿಪಕ್ಷಗಳ ಸದಸ್ಯರು ಎತ್ತಿದ್ದ ಪ್ರಶ್ನೆಗಳಿಗೆ ಮಾಧುಸ್ವಾಮಿ ಉದಾಹರಣೆ ಸಹಿತ ಉತ್ತರ ನೀಡಿದರು.

    ಪತ್ನಿಯನ್ನು ಬಿಟ್ಟಿರಲಾರದೇ ಆಕೆಯ ಮನೆಗೆ ಹೋಗಿದ್ದ ಪತಿ ನಿಗೂಢ ಸಾವು! ದೂರು ದಾಖಲು

    ಕಲಬುರಗಿಯಲ್ಲಿ ಕಳ್ಳತನವಾಗಿದ್ದ ಸರ್ಕಾರಿ ಬಸ್ ತೆಲಂಗಾಣದಲ್ಲಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts