More

    ನನ್ನ ಅವಧಿಯಲ್ಲಿ 298 ಕೋಟಿ ರೂ.ಗಳ ಅಭಿವೃದ್ಧಿ

    ಹುಣಸೂರು: ಹದಿನಾಲ್ಕು ತಿಂಗಳ ತಮ್ಮ ಅಧಿಕಾರಾವಧಿಯಲ್ಲಿ ತಾಲೂಕಿಗೆ 298 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ತಂದಿದ್ದು, ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಜಾರಿಯಲ್ಲಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ತಿಳಿಸಿದರು.
    ತಾಲೂಕಿನಾದ್ಯಂತ 14 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಶ್ವನಾಥ್ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲವೆಂದು ಶಾಸಕ ಎಚ್.ಪಿ.ಮಂಜುನಾಥ್ ಸುಳ್ಳು ಹೇಳುತ್ತಿದ್ದಾರೆ. ಆದರೆ ನಾನು ತಂದಿರುವ ಅಭಿವೃದ್ಧಿ ಕಾರ್ಯಗಳು ತಾಲೂಕಿನಾದ್ಯಂತ ಚಾಲ್ತಿಯಲ್ಲಿವೆ ಎಂದು ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
    ಲೋಕೋಪಯೋಗಿ, ಸಣ್ಣ ನೀರಾವರಿ, ಸೆಸ್ಕ್, ನೀರಾವರಿ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಿಗೂ ಹಣ ಬಿಡುಗಡೆಗೊಳಿಸಿದ್ದೇನೆ. ರಾಜ್ಯದಲ್ಲೇ ಮೊದಲ ಬಾರಿಗೆ ಜನರಲ್(ಸಾಮಾನ್ಯ ವರ್ಗ) ಬೀದಿಗಳಿಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ ಇಡೀ ತಾಲೂಕನ್ನು ಒಂದು ಯೂನಿಟ್ ಎಂದು ಪರಿಗಣಿಸಲು ಕೋರಿ 60ಕ್ಕೂ ಹೆಚ್ಚು ಹಳ್ಳಿಗಳಿಗೆ 60 ಕೋಟಿ ರೂ.ಗಳ ಅನುದಾನ ನೀಡಿದ್ದು, ಕಾಮಗಾರಿ ನಡೆದಿದೆ ಎಂದರು.
    ನಿಮ್ಮ ಕಾಲಾವಧಿಯಲ್ಲಿ ಯಾವುದಾದರೂ ಜನರಲ್ ಬೀದಿಗಳಿಗೆ ಅನುದಾನ ತಂದಿದ್ದಿರಾ ಎಂದು ಪ್ರಶ್ನಿಸಿ, ರಾಜ್ಯ ಹೆದ್ದಾರಿ ಯೋಜನೆಯಡಿ ಇಂದಿನ ಬಿಜೆಪಿ ಸರ್ಕಾರ 35 ಕೋಟಿ ರೂ.ಗಳನ್ನು ಒದಗಿಸಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ 2018-19ನೇ ಸಾಲಿಗೆ 64 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಉಂಡುಬತ್ತಿ, ವದೇಸಮುದ್ರದಂತಹ ಪ್ರಕರಣಗಳು ಮರುಕಳಿಸಬಾರದು ಎನ್ನುವ ಉದ್ದೇಶದಿಂದ ತಾಲೂಕಿನ ಮೋದೂರು ಗ್ರಾಮದ ಗೌರಿಕೆರೆ ಏರಿ ದುರಸ್ತಿಗಾಗಿ 1.63 ಕೋಟಿ ರೂ.ಗಳ ರೆಸ್ತೆ ಅಭಿವೃದ್ಧಿ ಮತ್ತು ತಡೆಗೋಡೆ ಕಾಮಗಾರಿ ಅನುಷ್ಟಾನಗೊಳ್ಳುತ್ತಿದೆ. ಹುಣಸೂರಿನಲ್ಲಿ ನಗರಸಭೆ ವತಿಯಿಂದ ರತ್ನಪುರಿ ರಸ್ತೆಯಲ್ಲಿ 8 ಎಕರೆ ಭೂಮಿ ಖರೀದಿಸಿ ಹುಡ್ಕೋ ನಿಗಮದ ವತಿಯಿಂದ 1 ಪ್ಲಸ್ 2 ಮಾದರಿಯ ಗೃಹನಿರ್ಮಾಣಕ್ಕೆ ಯೋಜನೆಯ ಪ್ರಕ್ರಿಯೆ ಕೈಗೊಂಡಿದ್ದೇನೆ ಎಂದರು.
    ಕಬಿನಿ ನೀರು: ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕಿನ ಜನರ ಕುಡಿಯುವ ನೀರಿನ ಬವಣೆ ತೀರಿಸುವ ಉದ್ದೇಶದಿಂದ ಇಂದಿನ ಬಿಜೆಪಿ ಸರ್ಕಾರ ಕಬಿನಿಯ ಮೂಲಕ ನೀರೊದಗಿಸುವ 270 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡುವ ಹಂತದಲ್ಲಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಹಸಿರು ನಿಶಾನೆ ತೋರಿದ್ದಾರೆ ಎಂದರು.
    48 ಕೆರೆಗಳ ನೀರು ತುಂಬುವ ಯೋಜನೆ: ಶಾಸಕ ಮಂಜುನಾಥ್ ಈ ಬಾರಿ 48 ಕೆರೆಗಳ ತುಂಬುವ ಯೋಜನೆ ಜಾರಿಗೆ ತರದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಶಪಥ ಮಾಡಿದ್ದಾರೆ. ಈ ಯೋಜನೆಯನ್ನು 2018-19ನೇ ಸಾಲಿನಲ್ಲಿ ಸರ್ಕಾರದ ಗಮನ ಸೆಳೆದು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಕಾರ್ಯ ನಾನು ಮಾಡಿದ್ದೇನೆ. ಇದು ನಿಮ್ಮ ಯೋಜನೆಯೆನ್ನುವಂತೆ ಸುಳ್ಳು ಹೇಳಿ ಶಪಥ ಮಾಡಿದ್ದೀರಲ್ಲ. ಇದೆಲ್ಲ ಬಿಟ್ಟುಬಿಡಿ ಎಂದರು. ಇದರೊಂದಿಗೆ ಕಟ್ಟೆಮಳಲವಾಡಿ ಅಣೆಕಟ್ಟೆಯ ಕಾಲುವೆ ಆಧುನೀಕರಣಕ್ಕಾಗಿ 37.80 ಕೋಟಿ ರೂ.ಗಳ ಅನುದಾನ ದೊರಕಿದೆ ಎಂದರು.
    ಚಿಲ್ಕುಂದ ಏತ ನೀರಾವರಿ: ನಾನು ಸಂಸದನಾಗಿದ್ದ ವೇಳೆ ಚಿಲ್ಕುಂದ ಏತ ನೀರಾವರಿ ಯೋಜನೆಗಾಗಿ 7.5 ಕೋಟಿ ರೂ.ಗಳ ಅನುದಾನ ತಂದಿದ್ದೆ. ಕಾಮಗಾರಿ ಪೂರ್ತಿಯಾಗಿ ಕಳಪೆಯಾಗಿದೆ. ಇದು ನಿಮ್ಮ ಶಾಸಕ ಅವಧಿಯಲ್ಲಿ ಆಗಿದ್ದು, ಈಗ ಅದೇ ಯೋಜನೆಯನ್ನು 19 ಕೋಟಿಗೇರಿಸಿ 14 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ದೊರಕಿಸಿದ್ದೇನೆ. 7.5 ಕೋಟಿ ರೂ.ಗಳ ಹಣ ಏನಾಯಿತು ಎಂದು ಪ್ರಶ್ನಿಸಿದರು.
    ಬಿಬಿಸಿ ಕಾಲನಿಗೆ ಶೀಘ್ರ ಭೇಟಿ: ಮಂಗಳವಾರ ಬಿಜೆಪಿ ಮುಖಂಡ ಸತ್ಯಪ್ಪ ತಾಲೂಕಿನ ಬುಂಡೆಬೆಸ್ತರ ಕಾಲನಿ(ಬಿಬಿಸಿ)ಯ ಜನರ ಬೇಡಿಕೆಗಾಗಿ ಹೋರಾಟ ನಡೆಸಿದ್ದು, ತಾವು ಶೀಘ್ರ ಕಾಲನಿಗೆ ಭೇಟಿ ನೀಡಿ ಅಲ್ಲಿನ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ ಎಂದರು.
    ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ಮುಖಂಡರಾದ ಸತ್ಯಪ್ಪ, ಎಂ.ಬಿ.ಪ್ರಭು, ಶಿವಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts