More

    ರೈತರ ಅನುಕೂಲಕ್ಕಾಗಿ ಹಲವು ಯೋಜನೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ

    ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು ನೆರವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
    ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಬೇಲೂರು ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರಿಗೆ ಆಶ್ರಯ ಸೇರಿದಂತೆ ಹದಿಮೂರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜಲಜೀವನ್ ಯೋಜನೆಯಡಿ ದೇಶದ ಎಲ್ಲ ಕುಟುಂಬಗಳಿಗೂ ಕುಡಿಯುವ ನೀರು ಕೊಡಲು ಮಾಡುತ್ತಿರುವ ಏಕೈಕ ಸರ್ಕಾರ ನಮ್ಮದು ಎಂದು ಹೇಳಿದರು.
    ದೇಶದ ಕೋಟ್ಯಂತರ ಜನರಿಗೆ ಅನುಕೂಲವಾಗಲೆಂದು ಹಾಗೂ ಹಸಿವಿನಿಂದ ಇರಬಾರದೆಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೇರಿಕೊಂಡು ಪಡಿತರ ನೀಡುತ್ತಿದೆ. ಯಾವ ಪಡಿತರ ಅಂಗಡಿಗಳು ಕಡಿಮೆ ಕೊಡುವುದನ್ನು ಗಮನಿಸಿ ಅಂತಹ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇನೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತೇನೆ. ಹಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡಿರುವುದು ಸಂತೋಷದ ವಿಷಯ ಎಂದರು.
    ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಸಿಗುತ್ತಿದೆ. 25 ಶೀಟ್ ಗೆದ್ದರೂ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಮಂಡ್ಯ ಒಂದು ಕಣ್ಣು, ಹಾಸನ ಇನ್ನೊಂದು ಕಣ್ಣು ಎಂದು ಹೇಳುತ್ತಾರೆ. ಆದರೆ ಮಂಡ್ಯಕ್ಕೆ ಮಾತ್ರ ಸುಣ್ಣ, ಹಾಸನಕ್ಕೆ ಬೆಣ್ಣೆ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ರಾಜ್ಯಕಾರ್ಯಕಾರಣಿ ಸದಸ್ಯ ಸಿದ್ದರಾಮಯ್ಯ, ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ಸಾದೊಳಲು ಸ್ವಾಮಿ, ಬಸವರಾಜು ಇತರರಿದ್ದರು.
    ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೇಲೂರು ಮಾಯಿಗಯ್ಯ, ಸತೀಶ್, ಉಮೇಶ್, ಶಂಕರ್, ಚೆನ್ನಯ್ಯ, ರಾಮಕೃಷ್ಣ, ಪುಟ್ಟಸ್ವಾಮಿ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts