More

    ಬಿಜೆಪಿ ಯಡಿಯೂರಪ್ಪ ಆಸ್ತಿಯಲ್ಲ: ಬಿ.ವೈ.ವಿಜಯೇಂದ್ರ

    ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾತನಾಡುವುದು ಅರ್ಥಹೀನ. ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಸೈಕಲ್‌ನಲ್ಲೂ ಸುತ್ತಾಡಿ ರಾಜ್ಯದ ಪ್ರತಿ ಹಳ್ಳಿಗೂ ವ್ಯಾಪಿಸುವಂತೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

    ಯಡಿಯೂರಪ್ಪ ಅವರ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಬಲಿಯಾಗುತ್ತಿದೆ ಎಂಬ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸೋಮವಾರ ವಿನೋಬನಗರದ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸದೃಢವಾಗಿ ಬೆಳೆದು ನಿಲ್ಲಲು ಲಕ್ಷಾಂತರ ಕಾರ್ಯಕರ್ತರ ಶ್ರಮವಿದೆ. ಪಕ್ಷದ ಹಿರಿಯರ ಅವಿರತ ಹೋರಾಟವಿದೆ. ಹಾಗಾಗಿ ಬಿಜೆಪಿ ಎಂಬುದು ಕೇವಲ ಯಡಿಯೂರಪ್ಪ ಅವರ ಆಸ್ತಿಯಲ್ಲ ಎಂದು ಟಾಂಗ್ ನೀಡಿದರು.
    ಯಡಿಯೂರಪ್ಪ ಸೇರಿದಂತೆ ಅನೇಕ ಕಾರ್ಯಕರ್ತರ ತಪಸ್ಸಿನ ಫಲವಾಗಿ ಪಕ್ಷ ಹೆಮ್ಮರವಾಗಿ ಬೆಳೆದುನಿಂತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುವುದಕ್ಕೆ ಅನೇಕರು ಕಾರಣೀಭೂತರಾಗಿದ್ದಾರೆ. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳು ಇರುವುದು ಸಹಜ. ಆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾವು ಮತ್ತು ನಮ್ಮ ಪಕ್ಷದ ಹಿರಿಯರು ಅದನ್ನು ಬಗೆಹರಿಸುತ್ತೇವೆ. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಶಕ್ತಿ, ತಾಕತ್ತು ಪಕ್ಷದ ಕಾರ್ಯಕರ್ತರಲ್ಲಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಯನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
    ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ಕೈತಪ್ಪಲು ನಾನು ಕಾರಣನಲ್ಲ. ಟಿಕೆಟ್ ಹಂಚಿಕೆ ಮಾಡಿದ್ದು ನಾನಲ್ಲ. ಕೇಂದ್ರದ ಸಂಸದೀಯ ಮಂಡಳಿಯಿಂದ ನೇರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ನನ್ನದಾಗಲೀ, ತಂದೆ ಯಡಿಯೂರಪ್ಪ ಅವರ ಪಾತ್ರವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts