More

    ದ.ಕ.ದಲ್ಲಿ ಬಿಜೆಪಿ ಶಕ್ತಿವರ್ಧನೆ

    ಮಂಗಳೂರು: ದ.ಕ.ಜಿಲ್ಲೆಯ 220 ಪಂಚಾಯಿತಿಗಳ ಪೈಕಿ 145 ಪಂಚಾಯಿತಿಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 2015ರ ಚುನಾವಣೆಯಲ್ಲಿ 129 ಪಂಚಾಯಿತಿಗಳಲ್ಲಿ ಅಧಿಕಾರ ಪಡೆದಿದ್ದ ಬಿಜೆಪಿ ಶಕ್ತಿ ವೃದ್ಧಿಸಿಕೊಂಡಿದೆ. ಕಳೆದ ಬಾರಿ 80 ಪಂಚಾಯಿತಿಗಳನ್ನು ಗೆದ್ದಿದ್ದ ಕಾಂಗ್ರೆಸ್ 44 ಗ್ರಾಪಂಗೆ ಕುಸಿದಿದೆ.

    ಲೋಕಸಭೆ, ವಿಧಾನಸಭೆ ಚುನಾವಣೆ ಮಾದರಿಯಲ್ಲೇ ಗ್ರಾಪಂ ಚುನಾವಣೆ ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿತ್ತು. ಚುನಾವಣೆಗೆ ಸಾಕಷ್ಟು ತಯಾರಿ, ಸಂಘಟಿತ ಹೋರಾಟದಿಂದ ಬಿಜೆಪಿ ಯಶಸ್ಸು ಕಂಡಿದೆ. ಅಧಿಕಾರ ಕಳಕೊಂಡಿರುವ ಕಾಂಗ್ರೆಸ್ ಗ್ರಾಪಂ ಚುನಾವಣೆಯಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ಕಾಂಗ್ರೆಸ್ ನಾಯಕರ ಕಾರ್ಯತಂತ್ರ ಫಲಿಸಲಿಲ್ಲ. ಬೆಳ್ತಂಗಡಿ, ಮೂಡುಬಿದಿರೆ, ಪುತ್ತೂರು ಮತ್ತು ಸುಳ್ಯದಲ್ಲಿ ಕಾಂಗ್ರೆಸ್‌ಗೆ ಭಾರಿ ಆಘಾತ ಉಂಟಾಗಿದೆ.

    ರಾಜಕೀಯ ಬೆಳವಣಿಗೆ: ಎಸ್‌ಡಿಪಿಐ ಎರಡು ಗ್ರಾಮ ಪಂಚಾಯಿತಿ ಗೆದ್ದಿರುವುದು ಜಿಲ್ಲೆಯಲ್ಲಿ ಹೊಸ ರಾಜಕೀಯ ಬೆಳವಣಿಗೆ. ಕೆಲವು ಗ್ರಾಪಂಗಳಲ್ಲಿ ಕಾಂಗ್ರೆಸ್ ಮತ ಎಸ್‌ಡಿಪಿಐ ಪಾಲಾಗಿದೆ. ಕಾಂಗ್ರೆಸ್ ಹಿನ್ನಡೆಗೆ ಇದು ಕೂಡ ಕಾರಣ ಎಂದು ವಿಶ್ಲೇಷಿಸಲಾಗಿದೆ.

    ಬೆಳ್ತಂಗಡಿಯಲ್ಲಿ ಭರ್ಜರಿ ಬೇಟೆ
    ಬೆಳ್ತಂಗಡಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 46 ಗ್ರಾಪಂಗಳ ಪೈಕಿ 40ರಲ್ಲಿ ಅಧಿಕಾರ ಪಡೆದಿದ್ದು, 12 ಗ್ರಾಪಂನಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಕಳೆದ ಬಾರಿ 25 ಗ್ರಾಪಂನಲ್ಲಿ ಅಧಿಕಾರ ಪಡೆದಿದ್ದ ಕಾಂಗ್ರೆಸ್ 4 ಪಂಚಾಯಿತಿಗೆ ತೃಪ್ತಿ ಪಡಬೇಕಾಗಿದೆ. ಇದು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕ್ಷೇತ್ರವಾಗಿದ್ದರೂ ಕಾಂಗ್ರೆಸ್ ವೈಫಲ್ಯ ಕಂಡಿದೆ. ಮೂಡುಬಿದಿರೆ ಕ್ಷೇತ್ರದಲ್ಲೂ 16 ಪಂಚಾಯಿತಿಗಳನ್ನು ಗೆಲ್ಲುವ ಮೂಲಕ ಬಿಜೆಪಿ ಉತ್ತಮ ಸಾಧನೆ ಮಾಡಿದೆ.

    ಬಂಡಾಯ ನಡುವೆಯೂ ಅರಳಿದ ಕಮಲ
    ಬಿಜೆಪಿಯ ಶಕ್ತಿ ಕೇಂದ್ರವೆಂದೇ ಬಿಂಬಿತವಾದ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಬಂಡಾಯದ ಬಿಸಿ ಎದುರಿಸಿತ್ತು. ಆದರೆ ಇದರ ಲಾಭ ಪಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಬಿಜೆಪಿ 36 ಪಂಚಾಯಿತಿಗಳನ್ನು ಗೆದ್ದಿದ್ದು, ಐವರ್ನಾಡು ಪಂಚಾಯಿತಿಯನ್ನು ಬಿಜೆಪಿಯ ಜಿಪಂ ಸದಸ್ಯ ಎಸ್.ಎನ್.ಮನ್ಮಥ ನೇತೃತ್ವದ ತಂಡ ಗೆದ್ದುಕೊಂಡಿದೆ. ಪುತ್ತೂರು ಮತ್ತು ಬಂಟ್ವಾಳದಲ್ಲಿ ಬಿಜೆಪಿ ತಲಾ 21 ಸ್ಥಾನ ಗೆಲ್ಲುವ ಮೂಲಕ ಪಾರಮ್ಯ ಮರೆದಿದೆ.

    ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸವಾಲು ನಮ್ಮ ಮುಂದಿತ್ತು. 145 ಗ್ರಾಪಂ ಗೆಲ್ಲುವ ಮೂಲಕ ಪಕ್ಷ ಉತ್ತಮ ಸಾಧನೆ ಮಾಡಿದೆ. 21 ಪಂಚಾಯಿತಿಯಲ್ಲಿ ಅತಂತ್ರ ಹಾಗೂ 6 ಪಂಚಾಯಿತಿಯಲ್ಲಿ ಸಮಬಲ ಇದೆ. ಈ ಪೈಕಿ ಕನಿಷ್ಠ 20 ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರ ಪಡೆಯುವ ನಿರೀಕ್ಷೆ ಇದೆ.
    -ಸುದರ್ಶನ ಮೂಡುಬಿದಿರೆ, ಅಧ್ಯಕ್ಷರು, ದ.ಕ.ಜಿಲ್ಲಾ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts