More

    ಬಿಜೆಪಿ ಅಭ್ಯರ್ಥಿ ಶಕ್ತಿ ಪ್ರದರ್ಶನ ; ಡಾ.ರಾಜೇಶ್‌ಗೌಡ ನಾಮಪತ್ರ ಸಲ್ಲಿಕೆ ವೇಳೆ ಸಹಸ್ರಾರು ಕಾರ್ಯಕರ್ತರ ಸಮಾಗಮ

    ಶಿರಾ: ಉಪಸಮರ ಕಾರಣಕ್ಕೆ ಕಾವೇರಿರುವ ಶಿರಾ ನಗರ ಶುಕ್ರವಾರ ಕೇಸರಿಮಯವಾಗಿತ್ತು, ಶಿರಾ ತಾಲೂಕಿನ ಇತಿಹಾಸದಲ್ಲಿಯೇ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಇಷ್ಟೊಂದು ಜನರು ಭಾಗವಹಿಸಿದ ನಿದರ್ಶನವಿರಲಿಲ್ಲ.

    ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಜನರು ಆಗಮಿಸಿ ಬಿಜೆಪಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಜತೆಗೂ ಬಿಜೆಪಿಯೂ ಪ್ರಬಲವಾಗಿದೆ ಎಂಬ ಸಂದೇಶ ರವಾನೆಯಾಯಿತು. ಡಿಸಿಎಂ ಗೋವಿಂದ ಕಾರಜೋಳ, ಡಾ.ಅಶ್ವತ್ಥ್‌ನಾರಾಯಣ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಡಾ.ರಾಜೇಶ್‌ಗೌಡ ಬಿಜೆಪಿ ಅಭ್ಯರ್ಥಿಯಾಗಿ ಶಕ್ತಿ ಪ್ರದರ್ಶಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

    ಕಳ್ಳಂಬೆಳ್ಳ ಟೋಲ್‌ನಲ್ಲಿ ಕಾದುನಿಂತು ಅಶ್ವತ್ಥ್‌ನಾರಾಯಣ, ವಿಜಯೇಂದ್ರ ಅವರನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು ತೆರೆದ ಜೀಪಿನಲ್ಲಿ ಮುಖಂಡರನ್ನು ನಿಲ್ಲಿಸಿಕೊಂಡು ಬ್ಯೆಕ್ ರ‌್ಯಾಲಿಯಲ್ಲಿ ಶಿರಾವರೆಗೂ ಕರೆತಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ತುಂಬೆಲ್ಲಾ ಕೇಸರಿ ಶಾಲುಗಳು ರಾರಾಜಿಸಿದವು. ಶಿರಾದ ಗವಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಜತೆ ಡಿಸಿಎಂ ಗೋವಿಂದಕಾರಜೋಳ, ಡಾ.ಅಶ್ವತ್ಥ್ ನಾರಾಯಣ, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ತಾಲೂಕು ಕಚೇರಿಯವರೆಗೂ ತೆರಳಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಳೆದ ಉಪಚುನಾವಣೆಯಲ್ಲಿ ಶುರುವಾಗಿರುವ ಬಿಜೆಪಿ ವಿಜಯಯಾತ್ರೆ ಆರ್‌ಆರ್ ನಗರ ಹಾಗೂ ಶಿರಾದಲ್ಲಿಯೂ ಮುಂದುವರಿಯಲಿದೆ, ಕ್ಷೇತ್ರದಲ್ಲಿ ದುಡಿಯುವ ಸಾವಿರಾರು ಕಾರ್ಯಕರ್ತರಿದ್ದು ಚುನಾವಣೆವರೆಗೂ ವಿಶ್ರಮಿಸುವ ಮಾತಿಲ್ಲ ಎಂದರು.

    ಡಿಸಿಎಂ ಗೋವಿಂದಕಾರಜೋಳ ಮಾತನಾಡಿ, 70 ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಶಿರಾ ಕ್ಷೇತ್ರವನ್ನು ಅಭಿವೃದ್ಧಿ ವಾಡದೆ ನಿರ್ಲಕ್ಷಿಸಿದ್ದು ಈ ಬಾರಿ ನಮ್ಮಅಭ್ಯರ್ಥಿ ಸಾವಿರಾರು ಮತಗಳ ಅಂತರದಿಂದ ಗೆದ್ದು ಬಂದು ಕ್ಷೇತ್ರದ ಅಭಿವೃದ್ದಿ ವಾಡುತ್ತಾರೆ. ಅವರಿಗೆ ಆಶೀರ್ವಾದ ವಾಡಿ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಸ್ಥಳೀಯ ಮುಖಂಡರಾದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ತಾಲೂಕು ಅಧ್ಯಕ್ಷ ರಂಗಸ್ವಾಮಿ, ನಗರ ಅಧ್ಯಕ್ಷ ವಿಜಯರಾಜ್, ಮದಲೂರು ನರಸಿಂಹಮೂರ್ತಿ, ಶಂಕರ್, ಶ್ರೀರಂಗಯಾದವ್ ಮತ್ತಿತರರು ಮುಖಂಡರು ಸಾಥ್ ನೀಡಿದರು.

    ಸಚಿವ ಮಾಧುಸ್ವಾಮಿ ಗೈರು: ಕರೊನಾ ಸೋಂಕು ಕಾರಣಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಗೈರಾಗಿದ್ದರು. ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಶಿರಾ ಕ್ಷೇತ್ರದಲ್ಲಿ ಇಲ್ಲಿನ ನೇರ ಪ್ರಭಾವವಿದೆ. ಹಾಗಾಗಿ, ಮಾಧುಸ್ವಾಮಿ ಹಾಜರಿ ಬಿಜೆಪಿಗೆ ಪ್ರಮುಖ. ಚೇತರಿಸಿಕೊಂಡಿರುವ ಮಾಧುಸ್ವಾಮಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಬಿಜೆಪಿ ಬಲ ಕಂಡು ಆಶ್ಚರ್ಯ: ಬಿಜೆಪಿ ಇತಿಹಾಸದಲ್ಲಿಯೇ ಶಿರಾ ಕ್ಷೇತ್ರದಲ್ಲಿ ಎಂದೂ ಸೇರಿಸಲು ಸಾಧ್ಯವಾಗಿರದಷ್ಟು ಜನರು ಶುಕ್ರವಾರ ಡಾ.ರಾಜೇಶ್ ಗೌಡ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು. ಬಿಜೆಪಿ ಬಲ ಕಂಡು ಆಶ್ಚರ್ಯಗೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಟೀಕೆಗಳನ್ನು ಮಾಡಲಾರಂಭಿಸಿದ್ದಾರೆ. ಬಿಜೆಪಿ ಬಾವುಟ ಧರಿಸಿದ ಕಾರ್ಯಕರ್ತರು ಮದ್ಯದ ಬಾಟಲಿ, ಸಿಗರೇಟು ಹಿಡಿದ ೆಟೋಗಳನ್ನು ಹರಿಯಬಿಟ್ಟು ಆಮಿಷ ಒಡ್ಡಿ ಕರೆಸಿ ಕೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಪರ, ವಿರೋಧದ ಚರ್ಚ ಜೋರಾಗಿಯೇ ನಡೆದಿದೆ.

    ಶಿರಾ ಕಣದಲ್ಲಿ 25 ನಾಮಪತ್ರ: ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಉಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಒಟ್ಟು 40 ಮಂದಿ 52 ನಾಮಪತ್ರ ಸಲ್ಲಿಸಿದ್ದಾರೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 23 ಮಂದಿ 27 ನಾಮಪ್ರತ್ರ ಸಲ್ಲಿಸಿದರೆ, ಶಿರಾದಲ್ಲಿ 17 ಮಂದಿ 25 ನಾಮಪತ್ರ ಸಲ್ಲಿಸಿದ್ದಾರೆ. ಶಿರಾದಲ್ಲಿ ಕಾಂಗ್ರೆಸ್‌ನಿಂದ ಟಿ.ಬಿ.ಜಯಚಂದ್ರ, ಬಿಜೆಪಿಯಿಂದ ಡಾ.ರಾಜೇಶ್ ಗೌಡ, ಜೆಡಿಎಸ್‌ನಿಂದ ಅಮ್ಮಾಜಮ್ಮ , ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬಿ.ಟಿ.ಓಬಳೇಶಪ್ಪ, ಭಾರತ ಕಮ್ಯುನಿಸ್ಟ್ ಪಕ್ಷದಿಂದ ಗಿರೀಶ್, ಪಕ್ಷೇತರರಾಗಿ ಜಯಣ್ಣ ವೈ.ಉರುಫ್ ಜಯಣ್ಣ, ಕಂಬಣ್ಣ, ಸಾದಿಕ್ ಪಾಷ, ಎಂ.ಗುರುಸಿದ್ದಪ್ಪ, ಎಲ್.ಕೆ.ದೇವರಾಜು, ತಿಮ್ಮರಾಜ್‌ಗೌಡ, ನಿಸಾರ್ ಅಹಮದ್, ಜಿ.ಎಸ್.ನಾಗರಾಜ, ಅಂಬ್ರೋಸ್ ಡಿ.ಮೆಲ್ಲೋ, ರಂಗಪ್ಪ, ರಿಪಬ್ಲಿಕನ್ ಸೇನೆಯಿಂದ ಪ್ರೇಮಕ್ಕ, ರೈತ ಭಾರತ ಪಕ್ಷದಿಂದ ತಿಮ್ಮಕ್ಕ ನಾಮಪತ್ರ ಸಲ್ಲಿಸಿದ್ದು, ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಚ್.ಕುಸುಮಾ, ಬಿಜೆಪಿಯಿಂದ ಮುನಿರತ್ನ, ಜೆಡಿಎಸ್‌ನಿಂದ ವಿ.ಕೃಷ್ಣಮೂರ್ತಿ ಸೇರಿದಂತೆ 23 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ.19 ಕೊನೆಯ ದಿನ. ನ.3 ರಂದು ಚುನಾವಣೆ ನಡೆಯಲಿದೆ.

    ಜಯಚಂದ್ರ ಅವರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಮುಖಂಡರಿಗೆ ಇಷ್ಟವಿರಲಿಲ್ಲ ಎಂಬುದು ಮಾಧ್ಯಮಗಳಲ್ಲಿ ಬಯಲಾಗಿದೆ, ಅವರಿಗೂ ಹೊಸತನ ಬೇಕು, ಈಗ ಕಾಂಗ್ರೆಸ್‌ಗೆ ಮತ ನೀಡುವುದರಿಂದ ಪ್ರಯೋಜನವಿಲ್ಲ ಎಂದು ಶಿರಾ ಜನರಿಗೂ ತಿಳಿದಿದೆ. ವಿದ್ಯಾವಂತ ಡಾ.ರಾಜೇಶ್‌ಗೌಡ ಅವರನ್ನು ವಿಧಾನಸಭೆಗೆ ಕಳುಹಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
    ಡಾ.ಅಶ್ವತ್ಥ ನಾರಾಯಣ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts