More

    ಬಿಜೆಪಿ ಯಲ್ಲಿ ಅಸಮಾಧಾನದ ಹೊಗೆ

    ರಾಣೆಬೆನ್ನೂರ: ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್‌ಅನ್ನು ಹಾಲಿ ಶಾಸಕ ಅರುಣಕುಮಾರ ಪೂಜಾರಗೆ ನೀಡಿದ್ದರಿಂದ ಇತರ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನದ ಹೊಗೆ ಆಡತೊಡಗಿದೆ.
    ಟಿಕೆಟ್ ದೊರೆತ ಸಂಭ್ರಮದಲ್ಲಿರುವ ಅರುಣಕುಮಾರ ಪೂಜಾರ ತಮ್ಮ ಮನೆ ದೇವರಾದ ಕೊಟ್ಟೂರೇಶ್ವರನಿಗೆ ದೀಡ ನಮಸ್ಕಾರ ಹಾಕಿ ವಿಶೇಷ ಪೂಜೆ ಸಲ್ಲಿಸಲು ಹೋಗಿದ್ದಾರೆ.
    ಟಿಕೆಟ್ ಕೈ ತಪ್ಪಿ ಹೋಗಿರುವ ಕಾರಣ 2018ರ ಬಿಜೆಪಿ ಪರಾಭವ ಅಭ್ಯರ್ಥಿ ಡಾ. ಬಸವರಾಜ ಕೇಲಗಾರ ಬೆಂಗಳೂರಿಗೆ ತೆರಳಿ, ರಾಜ್ಯ ನಾಯಕರ ಎದುರು ನನಗೆ ಟಿಕೆಟ್ ನೀಡದಿರಲು ಕಾರಣ ಕೊಡಿ ಎಂದು ಪಟ್ಟುಹಿಡಿದಿದ್ದಾರೆ.
    ವಿಧಾನ ಪರಿಷತ್ ಸದಸ್ಯ ಆರ್. ಶಂಕರ ಕೂಡ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂದೇಶ ರವಾನಿಸಿದ್ದಾರೆ. ಮತ್ತೊಂದೆಡೆ ಮಹಿಳಾ ಟಿಕೆಟ್ ಆಕಾಂಕ್ಷಿಗಳಾದ ಭಾರತಿ ಅಳವಂಡಿ, ಭಾರತಿ ಜಂಬಗಿ ಕೂಡ ತಮಗೆ ಟಿಕೆಟ್ ನೀಡಲಿಲ್ಲ ಎಂದು ಮುನಿಸಿಕೊಂಡಿದ್ದು, ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಏನೇ ಪ್ರಯತ್ನ ಪಟ್ಟರೂ ತಪ್ಪದ ಬಿಜೆಪಿ ಟಿಕೆಟ್

    ಈ ಬಾರಿ ಅರುಣಕುಮಾರ ಪೂಜಾರಗೆ ಟಿಕೆಟ್ ತಪ್ಪಿಸಲೇ ಬೇಕು ಎಂದು ಬಿಜೆಪಿಯ 11 ಜನ ಟಿಕೆಟ್ ಆಕಾಂಕ್ಷಿಗಳು ಯಾವ ಕಾರಣಕ್ಕೂ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂದು ಹೈಕಮಾಂಡ್‌ಗೆ ಪತ್ರ ಬರೆದು ಒತ್ತಾಯಿಸಿದ್ದರು. ಸಂತೋಷಕುಮಾರ ಪಾಟೀಲ ಅಭಿಮಾನಿ ಬಳಗದ ಕಾರ್ಯಕರ್ತರು ಬೆಂಗಳೂರಿನ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ಕೂಡ ಮಾಡಿದ್ದರು. ಆದರೂ ಹೈಕಮಾಂಡ್ ಅರುಣಕುಮಾರ ಪೂಜಾರಗೆ ಟಿಕೆಟ್ ಘೋಷಣೆ ಮಾಡಿದೆ.

    ಆರ್. ಶಂಕರ ಕೊನೆಗೂ ಪಕ್ಷೇತರರೇ

    ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದಿಂದ 2018ರಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಆರ್. ಶಂಕರ 5 ವರ್ಷದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದಲ್ಲಿ ಮೂರು ಬಾರಿ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೆ ಗಮನ ಸೆಳೆದಿದ್ದರು.
    2023ರ ಚುನಾವಣೆಯಲ್ಲಿ ಮತ್ತೆ ಮೊದಲಿಗೆ ಕಾಂಗ್ರೆಸ್ ಟಿಕೆಟ್ ಕೇಳಿ, ಅಲ್ಲಿ ಸಿಗದಿದ್ದಾಗ ಬಿಜೆಪಿಯಿಂದ ಟಿಕೆಟ್‌ಗೆ ಪ್ರಯತ್ನಿಸಿದರು. ಎರಡೂ ಕಡೆಗಳಲ್ಲಿ ಅವರಿಗೆ ಬಾಗಿಲು ಮುಚ್ಚಿದ ಕಾರಣ ಕೊನೆಗೆ ಅವರಿಗೆ ಪಕ್ಷೇತರವೇ ಗತಿ ಎನ್ನುವಂತಾಗಿದೆ. ಚುನಾವಣೆಗೂ ಮುನ್ನವೇ ಮತದಾರರ ಪಟ್ಟಿ ಹಿಡಿದು ಕುಕ್ಕರ್, ಸೀರೆ, ತಟ್ಟೆ, ಲೋಟ ಹಂಚಿರುವ ಮೂಲಕ ಜನಪ್ರಿಯತೆ ಗಳಿಸಿರುವ ಆರ್. ಶಂಕರ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾದಂತಾಗಿದೆ
    ಸಂತೋಷಕುಮಾರ ಪಾಟೀಲ ಸ್ಪರ್ಧೆ ಸಿದ್ಧ: ಬಿಜೆಪಿಯಿಂದ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ನವಯುಗದ ನಾಯಕ ಸಂತೋಷಕುಮಾರ ಪಾಟೀಲ ಪಕ್ಷೇತರವಾಗಿ ಕಣಕ್ಕೀಳಿಯಲು ಸಿದ್ಧವಾಗಿದ್ದಾರೆ. ಈ ಬಗ್ಗೆ ಅವರು ಆರಂಭದಿಂದಲೇ ನಾನು ಆಕಾಂಕ್ಷಿ ಅಲ್ಲ, ಅಭ್ಯರ್ಥಿ ಎಂದು ಹೇಳಿತ್ತ ಬಂದಿದ್ದರು. ಅದರ ಪ್ರಕಾರ ಅಖಾಡಕ್ಕೆ ದುಮ್ಮುಕಲು ಸಿದ್ಧತೆ ನಡೆಸಿದ್ದಾರ

    ಅರುಣಕುಮಾರ ಪೂಜಾರಗೆ ಟಿಕೆಟ್ ನೀಡಿದ್ದು ಖುಷಿಯಿದೆ. ನಾನೂ ಈ ಕ್ಷೇತ್ರದಲ್ಲಿ ಗೆದ್ದೆ ಗೆಲ್ಲುವೆ, ಜನ ನನ್ನ ಕೈ ಬಿಡಲ್ಲ ಎನ್ನುವ ವಿಶ್ವಾಸವಿದೆ. ಆದ್ದರಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡುವೆ. ಕೆಲ ಪುಂಡ ಹುಡುಗರು ನಮ್ಮ ನವಯುಗದ ಯುವಕರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು.
    ಸಂತೋಷಕುಮಾರ ಪಾಟೀಲ, ಜಿಪಂ ಮಾಜಿ ಸದಸ್ಯ

    2019ರ ಉಪ ಚುನಾವಣೆ ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಎಲ್ಲ ನಾಯಕರು 2023ರಲ್ಲಿ ನಿಮಗೆ ಕೊಡುತ್ತೇವೆ ಎಂದು ಹೇಳಿ ನನ್ನನ್ನು ಸಮಾಧಾನ ಪಡಿಸಿದ್ದರು. ನಮ್ಮವರು ಎಂದುಕೊಂಡು ನಾನು ವಿಶ್ವಾಸದಿಂದ ಇದ್ದೆ. ಆದರೆ, ಹೈಕಮಾಂಡ್‌ನವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಅದಕ್ಕಾಗಿ ನಾನು ಕಾರಣ ಕೇಳಲು ಬೆಂಗಳೂರಿಗೆ ಬಂದಿದ್ದೇನೆ. ಹೈಕಮಾಂಡ್‌ನವರು ಉತ್ತರ ಕೊಟ್ಟ ಬಳಿಕ ನನ್ನ ಗಟ್ಟಿ ನಿರ್ಧಾರ ಏನೆಂಬುದನ್ನು ಪ್ರಕಟಿಸುವೆ. ನನ್ನ ನಿರ್ಧಾರ ರಾಣೆಬೆನ್ನೂರ ಜನರನ್ನು ಉಳಿಸಬೇಕು ಎಂಬುದು ಆಗಿರುತ್ತದೆ.
    ಡಾ. ಬಸವರಾಜ ಕೇಲಗಾರ, ಬಿಜೆಪಿ ಟಿಕೆಟ್ ವಂಚಿತ ಆಕಾಂಕ್ಷ

    ಪಕ್ಷದಿಂದ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕನಿಷ್ಠ 24 ಕ್ಷೇತ್ರದಲ್ಲಾದರೂ ಮಹಿಳೆಯರಿಗೆ ಟಿಕೆಟ್ ನೀಡಬೇಕಿತ್ತು. ರಾಣೆಬೆನ್ನೂರ ಟಿಕೆಟ್‌ಅನ್ನು ಹಾಲಿ ಶಾಸಕರಿಗೆ ಕೊಡುವುದಿದ್ದರೆ ನೀವು ಹೋಗಿ ಕೆಲಸ ಮಾಡಿ ಎಂದು ನಮಗೇಕೆ ಹೇಳಬೇಕಿತ್ತು. ಚುನಾವಣೆ ಸಮಯದಲ್ಲಿ ಸರ್ವೇ ಏಕೆ ಮಾಡಿಸಬೇಕಿತ್ತು. ಹೈಕಮಾಂಡ್ ನಡೆದುಕೊಂಡು ರೀತಿಯಿಂದ ನನಗೆ ಬಹಳ ಬೇಸರ ತಂದಿದೆ.
    ಭಾರತಿ ಅಳವಂಡಿ, ಬಿಜೆಪಿ ಟಿಕೆಟ್ ವಂಚಿತ ಆಕಾಂಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts