More

    ಬೆಳಗಾವಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ: ಸಂಸತ್ತಿನಲ್ಲಿ ಬಿಜೆಪಿ ಪ್ರತಿಭಟನೆ, ನಡ್ಡಾ ಖಂಡನೆ

    ನವದೆಹಲಿ: ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ದಲಿತ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಖಂಡಿಸಿದ್ದಾರೆ. ಈ ಘಟನೆಯನ್ನು ವಿರೋಧಿಸಿ ಕರ್ನಾಟಕದ ಬಿಜೆಪಿ ಸಂಸದರು ಶುಕ್ರವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಘಟನೆ ಖಂಡಿಸಿ ಡಿಸೆಂಬರ್ 16 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.

    “ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ವಿನಾಕಾರಣ ಎಸ್‌ಸಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭದ್ರತೆ ನೀಡುತ್ತಿಲ್ಲ” ಎಂದು ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಟೀಕಿಸಿದ್ದಾರೆ.

    ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಿನಿಂದಲೂ ಸತತವಾಗಿ ಮಹಿಳೆಯರ ವಿರುದ್ಧ ಇಂತಹ “ಘೋರ ಅಪರಾಧಗಳು” ನಡೆಯುತ್ತಿವೆ ನಡ್ಡಾ ಅವರು ಆರೋಪಿಸಿದ್ದಾರೆ.

    ಇಂತಹ ಅಪರಾಧಗಳನ್ನು ನಿಭಾಯಿಸುವಲ್ಲಿ ಕಾಂಗ್ರೆಸ್ ಸರ್ಕಾರಗಳ “ಬೇಜವಾಬ್ದಾರಿ ವರ್ತನೆ”ಯನ್ನು ಈ ಘಟನೆಯು “ದೇಶದ ಎಲ್ಲೆಡೆ” ಬಹಿರಂಗಪಡಿಸುತ್ತದೆ ಎಂದೂ ಅವರು ಹೇಳಿದ್ದಾರೆ.

    ಘಟನೆ ನಡೆದ ಕರ್ನಾಟಕದ ಗ್ರಾಮಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಪಕ್ಷದ ಮಹಿಳಾ ಸಂಸದರನ್ನು ಒಳಗೊಂಡ ಐವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನೂ ನಡ್ಡಾ ಅವರು ರಚಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐವರು ಸದಸ್ಯರ ಸತ್ಯಶೋಧನಾ ಸಮಿತಿಯಲ್ಲಿ ಬಿಜೆಪಿ ಸಂಸದರಾದ ಅಪ್ರಜಿತಾ ಸಾರಂಗಿ, ಸುನೀತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಇದ್ದಾರೆ.

    ಡಿಸೆಂಬರ್ 11 ರಂದು ಬೆಳಗಾವಿ ಜಿಲ್ಲೆಯ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಿ, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಲಾಗಿತ್ತು. ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೊರಟಿದ್ದ ಹುಡುಗಿಯೊಂದಿಗೆ ಈ ಮಹಿಳೆಯ ಮಗ ಓಡಿಹೋಗಿದ್ದಕ್ಕಾಗಿ ಇಂತಹ ಕೃತ್ಯ ಎಸಗಲಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.

    ಈ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ 8 ಜನರಿಗಾಗಿ ಶೋಧ ನಡೆಯುತ್ತಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.

    8 ಪಿಎಂ ಮದ್ಯ ತಯಾರಕ ಈಗ ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ: ಯಾರು ಈ ಹೊಸ ಕುಬೇರ?

    ಜೆಕ್ ನ್ಯಾಯಾಲಯದ ಮೊರೆ ಹೋಗಿ: ಪನ್ನುನ್ ಹತ್ಯೆ ಸಂಚು ಆರೋಪಿ ನಿಖಿಲ್​ ಗುಪ್ತಾ ಕುಟುಂಬಕ್ಕೆ ಸೂಚಿಸಿದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts