More

    ಬಿಜೆಪಿ-ಜೆಡಿಎಸ್ ಒಳಒಪ್ಪಂದ?: ಪರಿಷತ್ ಚುನಾವಣೆ ಗಂಭೀರವಾಗಿ ಪರಿಗಣಿಸುವಂತೆ ಸಂಸದ ಸುರೇಶ್ ಕರೆ

    ಚನ್ನಪಟ್ಟಣ :  ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಪಕ್ಷ ಬೆಂಬಲಿತ ಸದಸ್ಯರು ಹಾಗೂ ಕಾರ್ಯಕರ್ತರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಕರೆ ನೀಡಿದರು.

    ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕೆಂಗಲ್‌ನ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆರಳೆಣಿಕೆ ಗ್ರಾಪಂಗಳಲ್ಲಿ ಅಧಿಕಾರ ಹಿಡಿದಿರುವ ಎರಡು ಪಕ್ಷಗಳು ಪ್ರಸ್ತುತ ಚುನಾವಣೆಯನ್ನು ಎದುರಿಸುವ ಸಲುವಾಗಿ ಒಳಒಪ್ಪಂದಕ್ಕೂ ಮುಂದಾಗುತ್ತಿವೆ. ಆದರೆ, ಅವರ ಎಲ್ಲ ತಂತ್ರಗಳನ್ನು ಎದುರಿಸಲು ಪಕ್ಷ ಸಿದ್ಧವಾಗಿರಬೇಕು ಎಂದರು.

    ಪಕ್ಷ ನಿಷ್ಠೆ ಮೆರೆಯಿರಿ: 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಕ್ಷ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಚುನಾವಣೆಯಲ್ಲಿ ನಮಗೆ ಜಯ ಕಟ್ಟಿಟ್ಟಬುತ್ತಿ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುವಾರ್‌ಗೆ ತವರು ಜಿಲ್ಲೆಯಲ್ಲಿ ಮುಖಭಂಗ ವಾಡುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಯಾವ ಕ್ಷಣದಲ್ಲಿಯಾದರೂ ಹೊಂದಾಣಿಕೆ ವಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಯಾವ ಆಸೆ ಅಮಿಷಗಳಿಗೆ ಒಳಗಾಗದೇ ಪಕ್ಷನಿಷ್ಠೆ ಮೆರೆಯಬೇಕು ಎಂದು ಸುರೇಶ್ ತಿಳಿಸಿದರು.

    ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಗಳ ಫಲಿತಾಂಶವೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ ಎಂಬುದನ್ನು ನಿರೂಪಿಸಿದೆ. ಮುಂದಿನ ದಿನಗಳಲ್ಲಿ ಜನವಿರೋಧಿ ಬಿಜೆಪಿ ಸರ್ಕಾರವನ್ನು ತೆಗೆದುಹಾಕಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ರಾಜ್ಯದ ಜನತೆ ನಿರ್ಧರಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಪಕ್ಷದ ಕಾರ್ಯಕರ್ತರು ಬೇರೆ ಪಕ್ಷದವರನ್ನೂ ಕಾಂಗ್ರೆಸ್‌ಗೆ ಸೆಳೆದು ಅತ್ಯಧಿಕ ಮತಗಳಿಂದ ಅಭ್ಯರ್ಥಿ ಎಸ್.ರವಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

    ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆ 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ಪಕ್ಷದ ಎಲ್ಲಾ ವಿಭಾಗಗಳ ಅಧ್ಯಕ್ಷರು ಪದಾಧಿಕಾರಿಗಳು ಮುಂದಾಗಬೇಕು. ಬೂತ್ ಮಟ್ಟದಲ್ಲಿ ಸಂಟನೆ ಇಲ್ಲದ ಕಾರಣ, ಆರ್.ಆರ್.ನಗರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಬೇಕಾಯಿತು ಎಂದು ಸುರೇಶ್ ಅಭಿಪ್ರಾಯಪಟ್ಟರು.
    ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಎಸ್ ರವಿ ವಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಗಂಗಾಧರ್, ವಾಜಿ ಶಾಸಕರಾದ ಬಾಲಕೃಷ್ಣ, ಕೆ.ರಾಜು, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್, ಜಿಯಾವುಲ್ಲಾ, ಡಿ ಕೆ ಕಾಂತರಾಜು, ರಾಮನಗರ ನಗರಸಭಾ ಅಧ್ಯಕ್ಷೆ ಪಾರ್ವತಮ್ಮ, ಕೆಪಿಸಿಸಿ ಸದಸ್ಯರುಗಳಾದ .ಕೆ ರಮೇಶ್, ಬ್ಯಾಟಪ್ಪ ಉಪಸ್ಥಿತರಿದ್ದರು.

    ಮೇಕೆದಾಟು ಅನುಷ್ಠಾನಕ್ಕೆ ಪಾದಯಾತ್ರೆ: ತಮಿಳುನಾಡಿಗೆ ನಿಗದಿಯಂತೆ 205 ಟಿಎಂಸಿ ನೀರು ಹರಿಯುವ ಜತೆಗೆ ಪ್ರತಿವರ್ಷ ಸುವಾರು 80ರಿಂದ 100 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಅರ್ಕಾವತಿ ನದಿಯಿಂದಲೇ ಸುವಾರು 25 ಟಿಎಂಸಿಯಷ್ಟು ನೀರು ಹರಿದು ಹೋಗಿದೆ. ಈ ಹೆಚ್ಚುವರಿ ನೀರಿನ ಸದ್ಬಳಕೆಗೆ ಬ್ಯಾಲೆನ್ಸಿಂಗ್ ರಿಸರ್ವ್ ಮಾಡುವ ಅವಶ್ಯಕವಿದ್ದು ಮೇಕೆದಾಟು ಯೋಜನೆ ಇದಕ್ಕೆ ಸಹಕಾರಿಯಾಗಲಿದೆ. ಮೇಕೆದಾಟು ಯೋಜನೆ ಶ್ರೀ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲು ಪಕ್ಷದ ನಾಯಕರು ಸಿರ್ಧರಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಿತ ಮೇಕೆದಾಟು ಯೋಜನೆ ಅನುಷ್ಠಾನದ ಹೋರಾಟಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರವಾಣದಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts