More

    ಲಾಭ ನೀಡದ ಬಯೋಗ್ಯಾಸ್, ಮೆಸ್ಕಾಂ ಗ್ರಿಡ್‌ಗೂ ಇಲ್ಲ ಸಂಪರ್ಕ

    ಭರತ್ ಶೆಟ್ಟಿಗಾರ್ ಮಂಗಳೂರು

    ನಗರದ ಉರ್ವ ಮಾರುಕಟ್ಟೆ ಹಿಂಭಾಗ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣವಾಗಿರುವ ಜೈವಿಕ ಕಿರುವಿದ್ಯುತ್ ಉತ್ಪಾದನಾ ಸ್ಥಾವರ (ಬಯೋಗ್ಯಾಸ್ ಪ್ಲಾೃಂಟ್)ದ ಮೂಲ ಉದ್ದೇಶ ಈಡೇರದೆ ಹೊರೆಯಾಗಿಯೇ ಮುಂದುವರಿದಿದೆ.

    ಜೈವಿಕ ಅನಿಲ ಸ್ಥಾವರ ನಿರ್ಮಾಣವಾದ ಬಳಿಕ ವಿದ್ಯುತ್ ಉತ್ಪಾದನೆ ಮಾಡುವುದಕ್ಕಿಂತಲೂ ನಿಷ್ಪ್ರಯೋಜಕ ಸ್ಥಿತಿಯಲ್ಲಿ ಇದ್ದುದೇ ಹೆಚ್ಚು. ಆರಂಭದಲ್ಲಿ ಜನರೇಟರ್ ಅಳವಡಿಕೆ ವಿಳಂಬವಾಯಿತು. ಬಳಿಕ ಹಸಿ ತ್ಯಾಜ್ಯದ ಕೊರತೆಯಿಂದ ಆಗಾಗ ಸ್ಥಾವರ ಬಂದ್ ಆಗುತಿತ್ತು. ಪ್ರಸ್ತುತ ಚಾಲನಾ ಸ್ಥಿತಿಯಲ್ಲಿದ್ದರೂ, ಉತ್ಪಾದನೆಯಾಗುವ ವಿದ್ಯುತ್ ಹೊಸ ಮಾರುಕಟ್ಟೆ ಪ್ರಾಂಗಣದ ಪಾರ್ಕಿಂಗ್ ಪ್ರದೇಶಕ್ಕೆ ರಾತ್ರಿ ವೇಳೆ ಕೆಲ ಹೊತ್ತು ಬಳಕೆಯಾಗುತ್ತಿದೆ. ಜತೆಗೆ ಸ್ಥಾವರಕ್ಕೂ ರಾತ್ರಿ ವೇಳೆ ಉಪಯೋಗಿಸಲಾಗುತ್ತಿದೆ.

    ಇಚ್ಛಾಶಕ್ತಿ ಕೊರತೆ: ಬಯೋಗ್ಯಾಸ್ ಮೂಲಕ ವಿದ್ಯುತ್ ಉತ್ಪಾದನೆಯ ಯೋಜನೆ 2011ರಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆರಂಭವಾಗಿತ್ತು. 25 ಲಕ್ಷ ರೂ. ವೆಚ್ಚದಲ್ಲಿ 2013ರಲ್ಲಿ ಯೋಜನೆ ಪೂರ್ಣಗೊಂಡು ಉದ್ಘಾಟನೆಯಾಯಿತು. ಕೊಳೆತ ತರಕಾರಿ ಇತ್ಯಾದಿ ತ್ಯಾಜ್ಯ ಬಳಸಿ ಬಯೋಗ್ಯಾಸ್ ಮೂಲಕ ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಷ್ಟ ಉಂಟಾಗುತ್ತಿದೆ. ಘಟಕ ಯಶಸ್ವಿಯಾಗಿದ್ದರೆ ನಗರದ ಇತರೆಡೆಯಲ್ಲೂ ಈ ಮಾದರಿಯ ಘಟಕ ನಿರ್ಮಿಸಿ, ವಿದ್ಯುತ್ ವಿದ್ಯುತ್ ಸ್ವಾವಲಂಬನೆ ಸಾಧ್ಯವಾಗುತ್ತಿತ್ತು.

    ಗ್ರಿಡ್ ಸೇರದ ವಿದ್ಯುತ್: ಉತ್ಪಾದನೆಯಾಗುವ ವಿದ್ಯುತನ್ನು ಮೆಸ್ಕಾಂ ಗ್ರಿಡ್‌ಗೆ ನೀಡಿ, ಆದಾಯ ಸಂಪಾದಿಸುವ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಸೋಲಾರ್ ವಿದ್ಯುತ್ತನ್ನು ನೆಟ್ ಮೀಟರಿಂಗ್‌ನಲ್ಲಿ ಗ್ರಿಡ್‌ಗೆ ನೀಡುವಂತೆ ಸ್ಥಾವರದ ವಿದ್ಯುತ್ ಕೂಡ ನೆಟ್ ಮೀಟರಿಂಗ್‌ನಲ್ಲಿ ಪೂರೈಕೆ ಮಾಡಬಹುದು. ಇದಕ್ಕಾಗಿ ತಂದಿರಿಸಲಾಗಿರುವ ವಿದ್ಯುತ್ ಉಪಕರಣಗಳು ಎರಡು ವರ್ಷದಿಂದ ಸ್ಥಾವರದಲ್ಲೇ ಇವೆ. ಗ್ರಿಡ್‌ಗೆ ವಿದ್ಯುತ್ ನೀಡುವ ವೇಳಗೆ ಇವು ಹಾಳಾಗುವುದು ಖಚಿತ ಎನ್ನಬಹುದು.

    200 ಯೂನಿಟ್ ಸಾಮರ್ಥ್ಯ: ಅನಿಲ ಸ್ಥಾವರಕ್ಕೆ ಪ್ರತಿದಿನ 2 ಟನ್ ಹಸಿ ತ್ಯಾಜ್ಯ ಅಗತ್ಯವಿದೆ. ಇಸ್ಕಾನ್ ಅಕ್ಷಯಪಾತ್ರೆ, ಮೋರ್ ತರಕಾರಿ ಮಳಿಗೆ, ಮಾರುಕಟ್ಟೆಗಳು ಸೇರಿ ವಿವಿಧೆಡೆಯಿಂದ ತ್ಯಾಜ್ಯ ಸಂಗ್ರಹಿಸಿ ಅನಿಲವಾಗಿ ಪರಿವರ್ತಿಸಲಾಗುತ್ತಿದೆ. ಕೊಳೆಯುವ ತರಕಾರಿ, ಸೊಪ್ಪು ಮತ್ತಿತರ ತ್ಯಾಜ್ಯಗಳನ್ನು ವಿಂಗಡಿಸಿ ಮಿಕ್ಸರ್ ಯಂತ್ರಕ್ಕೆ ಹಾಕಲಾಗುತ್ತದೆ. ಅದರಲ್ಲಿ ಮಿಶ್ರಣಗೊಂಡು, ಪುಡಿಯಾಗಿ ಪ್ರಿ ಡೈಜೆಸ್ಟರ್ ಸೇರಿ ವಿವಿಧ ಹಂತಗಳಲ್ಲಿ ಅನಿಲವಾಗಿ ಮಾರ್ಪಾಡಾಗುತ್ತದೆ. ಘಟಕ 200 ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇಷ್ಟು ಪ್ರಮಾಣದ ವಿದ್ಯುತ್ ಮಾರ್ಕೆಟ್‌ಗೆ ಅಗತ್ಯವಿಲ್ಲ. ಆದ್ದರಿಂದ ಉರ್ವ ಮಾರ್ಕೆಟ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಿಗೆ, ಪಾರ್ಕ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಬಹುದು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

    ಬಯೋಗ್ಯಾಸ್ ಸ್ಥಾವರ ವ್ಯರ್ಥವಾಗುತ್ತಿರುವ ಮಾಹಿತಿ ತಿಳಿದಿದೆ. ಎರಡು ದಿನಗಳಲ್ಲಿ ಸ್ಥಾವರಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯನಿರ್ವಹಣೆ ಪರಿಶೀಲಿಸಲಾಗುವುದು. ಮುಂದಿನ ದಿನಗಳಲ್ಲಿ ಸ್ಥಾವರವನ್ನು ಯಾವ ರೀತಿ ಸದುಪಯೋಗಪಡಿಸಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು.

    ದಿವಾಕರ ಪಾಂಡೇಶ್ವರ
    ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts