More

    ಗೃಹ ನಿಗಾವಣೆ ತ್ಯಾಜ್ಯಕ್ಕೆ ಕಪ್ಪು-ಹಳದಿ ಚೀಲ

    ಭರತ್ ಶೆಟ್ಟಿಗಾರ್ ಮಂಗಳೂರು
    ಮನೆಯಲ್ಲಿ ಐಸೋಲೇಶನ್‌ನಲ್ಲಿರುವ ಕೋವಿಡ್ ಸೋಂಕಿತರ ಬಯೋ ಮೆಡಿಕಲ್ ಮತ್ತು ಅವರ ಇತರ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕಪ್ಪು ಮತ್ತು ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲಗಳನ್ನು ಪೂರೈಸಲು ಎಲ್ಲ ಗ್ರಾಪಂಗಳಿಗೆ ಜಿಲ್ಲಾ ಪಂಚಾಯಿತಿ ನಿರ್ದೇಶನ ನೀಡಿದೆ.

    ಜಿಲ್ಲೆಯಲ್ಲಿರುವ ಕೋವಿಡ್ ಸೋಂಕಿತರಲ್ಲಿ ಶೇ.80ಕ್ಕಿಂತ ಹೆಚ್ಚಿನವರು ಗೃಹ ನಿಗಾವಣೆಯಲ್ಲಿ ಇದ್ದಾರೆ. ಅದರಲ್ಲೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಾಕಷ್ಟು ಮಂದಿ ಕೋವಿಡ್ ಸೋಂಕಿತರಿದ್ದಾರೆ. ಇವರು 10 ದಿನ ಕ್ವಾರಂಟೈನ್ ಮತ್ತು ಐಸೋಲೇಶನ್‌ನಲ್ಲಿ ಇರುವುದು ಕಡ್ಡಾಯ. ಈ ಸಂದರ್ಭ ರೋಗಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದಲ್ಲಿ ಅದು ಆರೋಗ್ಯವಂತ ವ್ಯಕ್ತಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ವ್ಯವಸ್ಥೆ ಅನುಸರಿಸಲಾಗುತ್ತಿದೆ.

    ವಿಲೇವಾರಿ ಹೇಗೆ?: ಗ್ರಾಪಂನಿಂದ ನೇಮಿಸಿರುವ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಸ್ವಚ್ಛತಾ ಸಿಬ್ಬಂದಿ ಈ ಎರಡೂ ತ್ಯಾಜ್ಯಚೀಲಗಳನ್ನು ಪ್ರತಿ ದಿನ ಸಂಗ್ರಹಿಸಬೇಕು. ಅದಕ್ಕೂ ಮೊದಲು ಅವುಗಳಿಗೆ ಕ್ರಿಮಿನಾಶಕ(ಶೇ.1 ಸೋಡಿಯಂ ಹೈಪೋಕ್ಲೋರೈಟ್) ಸಿಂಪಡಿಸುವುದು ಕಡ್ಡಾಯ. ಇದರಲ್ಲಿ ಕಪ್ಪು ಚೀಲದ ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯದಂತೆ ವಿಲೇವಾರಿ ಮಾಡಬೇಕು. ಹಳದಿ ಬಣ್ಣದ ಚೀಲದಲ್ಲಿರುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲುಪಿಸಿ, ಅಲ್ಲಿ ಗುರುತಿಸಲಾದ ನಿರ್ದಿಷ್ಟ ಸ್ಥಳಗಳಲ್ಲಿ ಶೇಖರಿಸಿಡುವುದು ಪಂಚಾಯಿತಿ ಜವಾಬ್ದಾರಿ. ಅಲ್ಲಿಂದ ಜಿಲ್ಲೆಯಲ್ಲಿ ಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ನೇಮಕಗೊಂಡಿರುವ ಏಜೆನ್ಸಿಯವರು ತೆಗೆದುಕೊಂಡು ಹೋಗುವಂತೆ ಪಿಎಚ್‌ಸಿ ವೈದ್ಯಾಧಿಕಾರಿ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

    ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷತಾ ಕ್ರಮ: ಈ ತ್ಯಾಜ್ಯ ಒಯ್ಯುವ ಸ್ವಚ್ಛತಾ ಸಿಬ್ಬಂದಿ ಎಲ್ಲ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಮಾಸ್ಕ್, ಗ್ಲೌಸ್, ಹೆಡ್‌ಕ್ಯಾಪ್, ಫೇಸ್‌ಶೀಲ್ಡ್, ಪಿಇಪಿ ಕಿಟ್ ಧರಿಸುವುದು ಕಡ್ಡಾಯವಾಗಿದೆ. ಜತೆಗೆ ತಾಜ್ಯ ಒಯ್ಯುವ ವಾಹನಗಳಿಗೆ ಪ್ರತಿ ದಿನ ಕ್ರಿಮಿನಾಶಕ ಸಿಂಪಡಿಸಬೇಕು.

    ಯಾವ ಚೀಲದಲ್ಲಿ ಏನು?: ಕಪ್ಪು ಚೀಲ: ಸಾಮಾನ್ಯ ತ್ಯಾಜ್ಯವನ್ನು ಹಾಕಬೇಕು. ಸೋಂಕಿತರ ಮನೆಯವರು, ಪ್ರಾಥಮಿಕ ಸಂಪರ್ಕಿತರು ಹಾಗೂ ಇತರರು ಬಳಸಿದ ಮಾಸ್ಕನ್ನು ತುಂಡರಿಸಿ, ಪೇಪರ್ ಚೀಲದಲ್ಲಿ 72 ಗಂಟೆ ತುಂಬಿಸಿಟ್ಟು ಸಾಮಾನ್ಯ ತ್ಯಾಜ್ಯದೊಂದಿಗೆ ವಿಲೇವಾರಿ ಮಾಡಬೇಕು.
    * ಹಳದಿ ಚೀಲ: ಸೋಂಕಿತರು ಮಾಸ್ಕ್, ಗ್ಲೌಸ್, ಹತ್ತಿ, ಟಿಶ್ಯೂ ಪೇಪರ್, ಔಷಧ ಹಾಗೂ ಇನ್ನಿತರ ವೈದ್ಯಕೀಯ ತ್ಯಾಜ್ಯಗಳನ್ನು ಹಾಕಬೇಕು.

    ಕೋವಿಡ್-19ರಿಂದ ಉಂಟಾಗುವ ಜೈವಿಕ ತ್ಯಾಜ್ಯವನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸಾಗಿಸಿ, ಸಂಸ್ಕರಿಸುವುದು ಮತ್ತು ವಿಲೇವಾರಿ ಅತೀ ಅಗತ್ಯ. ಅದರಂತೆ ಈ ಕ್ರಮ ಅನುಸರಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವೆಚ್ಚವನ್ನು ಆಯಾ ಗ್ರಾಮ ಪಂಚಾಯಿತಿ ಭರಿಸಲು ಸೂಚಿಸಲಾಗಿದೆ. ಸ್ವಚ್ಛತಾ ವಾಹನ ಇಲ್ಲದ ಪಂಚಾಯಿತಿಗಳು ಪಕ್ಕದ ಪಂಚಾಯಿತಿಗಳ ಸಹಾಯ ಪಡೆಯಬೇಕು.
    ಡಾ.ಕುಮಾರ, ದ.ಕ ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts